More

    ಇವರೇಕೆ ನಸುಕಿನಲ್ಲೇ ಬೇರಣಬೆ ಹುಡುಕುತ್ತಾರೆ?!

    ಲಕ್ಷ್ಮೇಶ್ವರ: ತಾಲೂಕಿನಲ್ಲಿ ಇದೀಗ ನೈಸರ್ಗಿಕವಾಗಿ ಬೆಳೆಯುವ ಬೇರಣಬೆಗೆ ಹೆಚ್ಚು ಬೇಡಿಕೆ ಬಂದಿದೆ. ಸಮೀಪದ ಹರದಗಟ್ಟಿ, ಅಕ್ಕಿಗುಂದ, ಆದರಹಳ್ಳಿ ಸುತ್ತಮುತ್ತಲಿನ ಗ್ರಾಮದ ತಾಂಡಾ ಜನರು ಅರಣ್ಯ ಪ್ರದೇಶದ ಪೊದೆಗಳಲ್ಲಿ ಬೆಳಗ್ಗೆಯೇ ಅಣಬೆಯ ಹುಡುಕಾಟದಲ್ಲಿ ತೊಡಗುತ್ತಾರೆ. ನೈಸರ್ಗಿಕವಾಗಿ ಬೆಳೆಯುವ ಬೇರಣಬೆಯು ರೋಹಿಣಿ, ಆರಿದ್ರ ಮಳೆಗೆ ಕುರುಚಲು ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತದೆ. ಹೆಚ್ಚು ಮಳೆಯಾಗಿ ಭೂಮಿ ತಂಪಾದಾಗ ಒಂದೇ ರಾತ್ರಿಯಲ್ಲಿ ಹುಟ್ಟಿ 24 ಗಂಟೆಗಳ ಅವಧಿಯಲ್ಲಿ ಕಮರಿ ಹೋಗುತ್ತದೆ. ಇದರಿಂದಾಗಿ ತಾಜಾ ಅಣಬೆಗಾಗಿ ನಸುಕಿನಲ್ಲಿಯೇ ಜನ ಹುಡುಕಿಕೊಂಡು ಹೋಗುತ್ತಾರೆ.

    ಮತ್ತೆ ಕೆಲವರಿಗೆ ಇದು ಬದುಕಿನ ಬಂಡಿ ಸಾಗಿಸಲು 2 ತಿಂಗಳವರೆಗಿನ ಉದ್ಯೋಗವಾಗಿದೆ. ಅಣಬೆಯ ಬಗ್ಗೆ ಗೊತ್ತಿರುವ ಮತ್ತು ಅದನ್ನು ಸೂಕ್ಷ್ಮವಾಗಿ ಹುಡುಕುವ ವ್ಯಕ್ತಿಗಳಿಗೆ ಗೋಚರಿಸುತ್ತವೆ. ಕೆಲವರು ಲಕ್ಷ್ಮೇಶ್ವರದಿಂದ ಹರದಗಟ್ಟಿ ಗ್ರಾಮಕ್ಕೆ ಬಂದು ಕೆಜಿಗೆ 500 ರಿಂದ 600 ರೂ. ಕೊಟ್ಟು ಖರೀದಿಸುತ್ತಾರೆ. ಈ ಬಗ್ಗೆ ಫೋನ್ ಮೂಲಕ ಮೊದಲೇ ಮಾತುಕತೆ ನಡೆಸಿ ಬುಕ್ ಮಾಡಲಾಗಿರುತ್ತದೆ.

    ಅಣಬೆ ಸಸ್ಯ ವರ್ಗಕ್ಕೆ ಸೇರಿದ್ದರೂ ಸಸ್ಯಲೋಕದ ಮಾಂಸಾಹಾರಿ ಪದಾರ್ಥವೆಂದೇ ಕರೆಯುತ್ತಾರೆ. ಅಣಬೆಯಲ್ಲಿ ವಿಟಮಿನ್ ಬಿ ಅಂಶ ಹೆಚ್ಚಿರುತ್ತದೆ. ಇದರ ಸೇವನೆಯಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಧುಮೇಹ ಮತ್ತು ರಕ್ತಹೀನತೆ ತಡೆಯಲು ಅಣಬೆ ಸೂಕ್ತ ಆಹಾರವಾಗಿದೆ.

    ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ತಂತ್ರಜ್ಞಾನ ಬಳಸಿ ಕೃತಕವಾಗಿ ಅನೇಕ ತರಹದ ಅಣಬೆ ಬೆಳೆಯುತ್ತಾರೆ. ಆದರೆ, ಪ್ರಕೃತಿಯಲ್ಲಿ ಹುಟ್ಟುವ ಅಣಬೆಯ ರುಚಿಯೇ ಬೇರೆ. ಅಣಬೆ ಬಾಯಿಗೆ ರುಚಿ ಮಾತ್ರವಲ್ಲ. ಇದರಿಂದ ದೇಹಕ್ಕೆ ಅಗತ್ಯವಿರುವ ಅನೇಕ ಪೌಷ್ಟಿಕಾಂಶಗಳು ಲಭಿಸುತ್ತವೆ. ವರ್ಷಕ್ಕೆ ಒಮ್ಮೆಯಾದರೂ ನೈಸರ್ಗಿಕವಾಗಿ ಸಿಗುವ ಅಣಬೆ ಸೇವಿಸಬೇಕು.

    | ಸೋಮಸಿಂಗ ಮಾಳಗಿಮನಿ, ಹರದಗಟ್ಟಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts