More

    ಬೇಡಿಕೆ ಕಳೆದುಕೊಂಡ ಜ್ಯೂಸ್ ಮಾವು

    ಓರ್ವೆಲ್ ಫರ್ನಾಂಡೀಸ್ ಹಳಿಯಾಳ

    ಪ್ರತಿಕೂಲ ಹವಾಮಾನದಿಂದಾಗಿ ಈ ಬಾರಿ ಮಾವಿನ ಇಳುವರಿಯು ಕುಸಿತ ಕಂಡಿದೆ. ಜತೆಗೆ, ವಹಿವಾಟಿನ ಮೇಲೆ ಕೋವಿಡ್-19 ಕರಾಳ ಛಾಯೆಯೂ ಆವರಿಸಿದೆ. ಹೀಗಾಗಿ, ಮಾವು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಇಲ್ಲಿನ ಎಪಿಎಂಸಿಯಲ್ಲಿ ಪಲ್ಪ್ ಹಾಗೂ ಜ್ಯೂಸ್ ತಯಾರಿಸಲು ಬಳಸುವ ಮಾವಿನ ಮಾರಾಟ ನಡೆಯುತ್ತದೆ. ಈವರೆಗೆ ಅಂದಾಜು 1000 ಟನ್ ಮಾವು ಮಾರಾಟವಾಗಿ ಸರಾಸರಿ 1.7 ಕೋಟಿ ರೂ. ವಹಿವಾಟಾಗಿದೆ. ಆದರೆ, ಖರೀದಿಸಿದ ಮಾವು ಹೊರ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ಸಾಗಾಟವಾಗದೇ ಉಳಿದಿದೆ.

    ಮೇ 17ರ ನಂತರ ಲಾಕ್ ಡೌನ್ ಮುಂದುವರಿಯಬಹುದೆಂಬ ಭೀತಿಯಿಂದಾಗಿ ಬೆಳೆಗಾರರು ಅಳಿದುಳಿದಿರುವ ಮಾವನ್ನು ಮಾರಾಟ ಮಾಡಲು ಮನ್ನುಗ್ಗುತ್ತಿದ್ದಾರೆ. ಮೇ 8ರಿಂದ ಎಪಿಎಂಸಿಯಲ್ಲಿ ಮಾವು ವಹಿವಾಟು ಆರಂಭಗೊಂಡಿತು. ಆರಂಭದಲ್ಲಿ ಕ್ವಿಂಟಾಲ್​ಗೆ 2000 ರೂ. ಇದ್ದ ಬೆಲೆ, ಮೇ 10ರಂದು 1800ರೂ.ಗೆ ಇಳಿಯಿತು. ಆದರೆ, ಖರೀದಿಸಿದ ಈ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಾವು ಖರೀದಿದಾರರ ಒಕ್ಕೂಟದ ಪ್ರತಿನಿಧಿ ನಿಸ್ಸಾರ ದುರ್ಗಾಡಿ, ‘ಗುಜರಾತ, ಚಿತ್ತೂರ, ಜಲಗಾಂವ ಮೊದಲಾದೆಡೆ ಇರುವ ಮಾವಿನ ಪಲ್ಪ್ ಕೈಗಾರಿಕೆಗಳಿಗೆ ಅಂದಾಜು 300 ಟನ್ ಮಾವು ಅಷ್ಟೇ ಸಾಗಾಟವಾಯಿತು. ಸದ್ಯ ಕೈಗಾರಿಕೆಗಳು ಮಾವು ಖರೀದಿಯನ್ನು ನಿಲ್ಲಿಸಿವೆ. ಇದರಿಂದ ಕ್ವಿಂಟಾಲ್​ಗೆ 1500 ರೂ.ಗಳಾದರೂ ಕೊಡಿ ಅಂದರೂ ಕೈಗಾರಿಕೆಗಳು ಖರೀದಿಸುತ್ತಿಲ್ಲ. ಕ್ವಾರಂಟೈನ್ ಭಯದಿಂದಾಗಿ ಹೊರ ರಾಜ್ಯಗಳಿಗೆ ಮಾವು ಸಾಗಾಟ ಮಾಡಲು ಲಾರಿ ಚಾಲಕರು ಮುಂದೆ ಬರುತ್ತಿಲ್ಲ’ ಎಂದು ಗೋಳು ತೋಡಿಕೊಂಡಿದ್ದಾರೆ.

    ದರ ಸಭೆ: ಮಾವು ಮೌಲ್ಯವರ್ದನೆ ಮಾಡುವ ಕಂಪನಿಗಳು ಖರೀದಿ ನಿಲ್ಲಿಸಿದ್ದರಿಂದ ಎಪಿಎಂಸಿಯಲ್ಲಿ ಕೂಡ ಖರೀದಿ ಸ್ಥಗಿತಗೊಂಡಿತ್ತು. ಮಾರುಕಟ್ಟೆಗೆ ಬಂದಂತಹ ಮಾವನ್ನು ಖರೀದಿಸಬೇಕೆಂದು ಬೆಳೆಗಾರರು ಪಟ್ಟು ಹಿಡಿದಿದ್ದರು. ಈ ಸಮಸ್ಯೆ ಬಗೆಹರಿಸಲು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಉಪಸ್ಥಿತಿಯಲ್ಲಿ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಕಾರ್ಯದರ್ಶಿ ಸುಮಿತ್ರಾ ಹೂವಣ್ಣನವರ ಸೇರಿ ಖರೀದಿದಾರರ ಮತ್ತು ಬೆಳೆಗಾರರ ಸಭೆ ನಡೆಸಿದರು. ಕ್ವಿಂಟಾಲ್​ಗೆ 1700ರೂ ದರ ನಿಗದಿಪಡಿಸಿ ವಹಿವಾಟು ಆರಂಭಿಸುವಂತೆ ಸೂಚಿಸಿದರು. ಈ ಹಿಲೆಯಲ್ಲಿ ಸೋಮವಾರ ಮಾರುಕಟ್ಟೆಗೆ ಬಂದಂತಹ ಮಾವು ಖರೀದಿಯು ಸಂಜೆಯವರೆಗೆ ನಡೆಯಿತು.

    ಮಾರುಕಟ್ಟೆಯಲ್ಲಿ ಮಾವು ವಹಿವಾಟಿನಲ್ಲಿ ಅಸ್ಥಿರತೆಯಿರುವುದರಿಂದ ಖರೀದಿ ಪ್ರಕ್ರಿಯೆ ನೋಡಿ ಮಾವನ್ನು ಮಾರಾಟಕ್ಕೆ ತರಲು ಬೆಳೆಗಾರರಿಗೆ ಸೂಚಿಸಿದ್ದೆವೆ.
    ಸುಮಿತ್ರಾ ಹೂವಣ್ಣನವರ, (ಎ.ಪಿ.ಎಂ.ಸಿ ಕಾರ್ಯದರ್ಶಿ)

    ಎ.ಪಿ.ಎಂ.ಸಿ ಸೂಚಸಿದಂತೆ ಕ್ವಿಂಟಾಲ್​ಗೆ 1700ರೂಗಳಿಗೆ ನಾವು ಖರೀದಿಸಿದ ಮಾವನ್ನು ಇವತ್ತು ಕ್ವಿಂಟಾಲ್​ಗೆ 1500 ರೂಪಾಯಿಗೆ ನೀಡಲು ಬಂದರೂ ಮಾವು ಕೈಗಾರಿಕೆಗಳು ಮುಂದೆ ಬರುತ್ತಿಲ್ಲ. ಖರೀದಿಸಿದ ಮಾವು ಮೂರು ದಿನಗಳಿಂದ ಸಾಗಾಟವಾಗದೇ ಉಳಿದಿದೆ.
    ಅಬ್ದುಲ್ ದಲಾಲ (ಮಾವು ಖರೀದಿದಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts