More

    ಬೇಡಿಕೆಗೆ ಅನುಗುಣವಾಗಿ ರಸ್ತೆಗಿಳಿದ ಬಸ್​ಗಳು

    ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್​ಗಳನ್ನು ಬಿಡಲಾಯಿತು.

    ಪೊಲೀಸರ ಭದ್ರತೆಯಲ್ಲಿ ಬಸ್​ಗಳನ್ನು ಓಡಿಸಲಾಯಿತು. ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 2 ಬಸ್​ಗಳನ್ನು ಹಾಗೂ ಸಿಟಿ ವ್ಯಾಪ್ತಿಯಲ್ಲಿ 12 ಬಸ್​ಗಳನ್ನು ಬಿಡಲಾಯಿತು. ಮುಷ್ಕರ ಹಿಂಪಡೆದ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಬರಲಾರಂಭಿಸಿದರು. ಹಾಗಾಗಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ ಸೇರಿ ಇತರೆಡೆ 125 ಬಸ್​ಗಳನ್ನು ಬಿಡಲಾಯಿತು. ಬಿಆರ್​ಟಿಎಸ್ ಬಸ್​ಗಳೂ ಸಂಚರಿಸಿದವು. ಯಾವುದೇ ಅಹಿತಕರ ಘಟನೆಯಾಗಿಲ್ಲ. ನಾಳೆಯಿಂದ ಎಲ್ಲ ಬಸ್​ಗಳು ಸಂಚರಿಸಲಿವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಡಿಸಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.

    ಭದ್ರತಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಬಸ್ ನಿಲ್ದಾಣದಲ್ಲಿಯೇ ಇದ್ದರು. ಬರುವ ಪ್ರಯಾಣಿಕರಿಗೆ ಬಸ್ ಯಾವ ಸಮಯಕ್ಕೆ ತೆರಳಲಿವೆ ಎಂದು ಮಾಹಿತಿ ನೀಡುತ್ತಿದ್ದರು. ಬಹಳಷ್ಟು ಪ್ರಯಾಣಿಕರು ಬೆಳಗ್ಗೆಯಿಂದ ಬಸ್​ಗಾಗಿ ಕಾಯುತ್ತಿದ್ದರು. ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬಸ್​ಗಳನ್ನು ಶೀಘ್ರವೇ ಬಿಡಲಾಗುವುದು ಎಂದು ಪ್ರಯಾಣಿಕರಿಗೆ ತಿಳಿಸಿದರು. ಅಲ್ಲದೆ, ಮಾಸ್ಕ್​ಗಳನ್ನು ವಿತರಿಸಿದರು. ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದರು.

    ನೌಕರರ ಮನವೊಲಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಇನ್ನೂ ಕೆಲವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಬಸ್​ಗಳನ್ನು ಓಡಿಸಲಾಗುವುದು. ಮೂರು ದಿನಗಳ ಮುಷ್ಕರದಿಂದ ಸಂಸ್ಥೆಗೆ 12 ಕೋಟಿ ರೂ. ನಷ್ಟವಾಗಿದೆ. -ಕೃಷ್ಣ ಬಾಜಪೈ, ವಾಕರಸಾ ಸಂಸ್ಥೆ ಎಂ.ಡಿ.

    ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವರು. ಪ್ರಯಾಣಿಕರು ಆತಂಕವಿಲ್ಲದೇ ಪ್ರಯಾಣ ಮಾಡಬಹುದು. ಪರಿಪೂರ್ಣ ಬಸ್ ಸಂಚಾರ ಆಗಲಿದೆ. ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. -ನಿತೇಶ ಪಾಟೀಲ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts