More

    ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರವೇ ಪ್ರತಿಭಟನೆ

    ಹಾಸನ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರವೇ(ಪ್ರವೀಣ್‌ಶೆಟ್ಟಿ)ಬಣದ ಕಾರ್ಯಕರ್ತರು ಶನಿವಾರ ಬೇಲೂರು ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.


    ಕರವೇ(ಪ್ರವೀಣ್‌ಶೆಟ್ಟಿ)ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಬೇಲೂರು ಬಸ್ ನಿಲ್ದಾಣದಿಂದ ಸರಿಯಾದ ಸಮಯಕ್ಕೆ ಬಸ್‌ಗಳು ಗ್ರಾಮಾಂತರ ಪ್ರದೇಶಕ್ಕೆ ಹೋಗುತ್ತಿಲ್ಲ. ಹೋದರೂ ಜನರಿಲ್ಲವೆಂದು ಚಾಲಕ, ನಿರ್ವಾಹಕರು ಅರ್ಧ ದಾರಿಯಲ್ಲೆ ಬಸ್‌ನಲ್ಲಿರುವ ಪ್ರಯಾಣಿಕರನ್ನು ಇಳಿಸಿ ವಾಪಸ್ ಬರುತ್ತಿದ್ದಾರೆ ಎಂದು ಆರೋಪಿಸಿದರು.


    ಬೆಳಗಿನ ಸಮಯದಲ್ಲಿ ಹಾಸನ ಚಿಕ್ಕಮಗಳೂರಿಗೆ ವಿದ್ಯಾಭ್ಯಾಸಕ್ಕೆಂದು ತೆರಳುವ ವಿದ್ಯಾರ್ಥಿಗಳು ಬಸ್‌ಪಾಸ್ ಹೊಂದಿದ್ದಾರೆ ಎಂದು ಎಕ್ಸ್‌ಪ್ರೆಸ್ ಬಸ್‌ಗಳಿಗೆ ಹತ್ತಿಸುತ್ತಿಲ್ಲ. ಕೇಳಿದರೆ ಟಿಕೆಟ್ ಪಡೆದು ಬನ್ನಿ ಇಲ್ಲವಾದರೆ ಕೆಳಕ್ಕಿಳಿಯಿರಿ ಎನ್ನುತ್ತಿದ್ದಾರೆ. ಪ್ರಯಾಣಿಕರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಶುಕ್ರವಾರ ನಮ್ಮ ಸಂಘಟನೆ ಪದಾಧಿಕಾರಿಗಳು ಬೇಲೂರು ಬಸ್ ಡಿಪೋ ವ್ಯವಸ್ಥಾಪಕ ಭೈರೇಗೌಡರನ್ನು ಕೇಳಿದರೆ ಅವರು ಉಡಾಫೆ ಉತ್ತರ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿದರು.


    ಡಿಪೋ ವ್ಯವಸ್ಥಾಪಕ ಭೈರೇಗೌಡರನ್ನು ತಕ್ಷಣ ಅಮಾನತುಪಡಿಸಿ ವರ್ಗಾವಣೆ ಮಾಡಬೇಕು. ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಬೇಲೂರಿನ ಬಸ್ ಡಿಪೋದಿಂದ ಯಾವುದೇ ಬಸ್‌ಗಳು ಹೊರ ಹೋಗದಂತೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಬಸಪ್ಪಗೆ ಮನವಿ ಸಲ್ಲಿಸಿದರು.


    ಮನವಿ ಸ್ವೀಕರಿಸಿ ಮಾತನಾಡಿದ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಬಸಪ್ಪ, ಎಕ್ಸ್‌ಪ್ರೆಸ್ ಬಸ್‌ಗಳಲ್ಲೂ ವಿದ್ಯಾರ್ಥಿಗಳನ್ನು ಕರೆದೊಯ್ಯಲು ತಿಳಿಸಲಾಗುವುದು. ಮನ ಪರಿಶೀಲಿಸಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

    ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಕಾರ್ಮಿಕ ಘಟಕದ ಅಧ್ಯಕ್ಷ ಮಂಜಾಚಾರ್, ಯುವ ಘಟಕ ಅಧ್ಯಕ್ಷ ಅರುಣ್‌ಸಿಂಗ್, ವಿದ್ಯಾರ್ಥಿ ಘಟಕದ ಮೋಹಿತ್, ಮುಖಂಡರಾದ ಆರಾಧ್ಯ, ಸತೀಶ್, ಕಾರ್ತಿಕ್, ಹುಸೇನ್, ಲೋಹಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts