More

    ಬೇಟೆಯಾಡಿದ್ದ ಜಿಂಕೆ ಕಳೇಬರ ಬಿಟ್ಟು ಪರಾರಿ

    ನಂಜನಗೂಡು: ತಾಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಜಿಂಕೆ ಬೇಟೆಯಾಡಿ ಚರ್ಮ ಸುಲಿಯುತ್ತಿದ್ದ ವೇಳೆ ಫಸಲು ಕಾಯುತ್ತಿದ್ದ ಸ್ಥಳೀಯ ರೈತರ ಕಣ್ಣಿಗೆ ಬೀಳುತ್ತಿದ್ದಂತೆ ಜಿಂಕೆ ಕಳೇಬರವನ್ನು ಬಿಟ್ಟು ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.


    ಕೋಣನೂರು ಕುರುಚಲು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಂತಿರುವ ಎತ್ತಿನ ಮುಂಟೆ ಬಳಿ ದುಷ್ಕರ್ಮಿಗಳು ಜೀಪಿನಲ್ಲಿ ಬಂದು ಆಯುಧಗಳನ್ನು ಬಳಸಿ ಜಿಂಕೆ ಬೇಟೆಯಾಡಿ ಅದನ್ನು ಮರಕ್ಕೆ ನೇತುಹಾಕಿ ಮಾಂಸಕ್ಕಾಗಿ ಚರ್ಮ ಸುಲಿಯುತ್ತಿದ್ದ ವೇಳೆ ಸಮೀಪದ ಜಮೀನಿನಲ್ಲಿ ಬೀಡುಬಿಟ್ಟಿದ್ದ ರೈತರು ಇವರ ಸದ್ದು ಗದ್ದಲವನ್ನು ಆಲಿಸಿ ಪಂಪ್‌ಸೆಟ್ ಮೋಟಾರ್ ಕಳವು ಮಾಡಲು ಕಳ್ಳರು ಲಗ್ಗೆಯಿಟ್ಟಿರಬಹುದು ಎಂದು ಕೂಗಿಕೊಂಡಿದ್ದಾರೆ.


    ಇದರಿಂದ ವಿಚಲಿತರಾದ ಬೇಟೆಗಾರರು ಜಿಂಕೆಯ ಕಳೇಬರವನ್ನು ಅಲ್ಲೇ ಬಿಟ್ಟು ಜೀಪಿನಲ್ಲಿ ಪರಾರಿಯಾಗಲು ಮುಂದಾಗಿದ್ದಾರೆ. ಸಮೀಪದಲ್ಲೇ ಹಳ್ಳಕ್ಕೆ ಜೀಪ್ ಉರುಳಿ ಬಿದ್ದ ಪರಿಣಾಮ ಗಾಬರಿಗೊಂಡ ದುಷ್ಕರ್ಮಿಗಳು ಜೀಪನ್ನು ಬಿಟ್ಟು ಓಡಿ ಹೋಗಿದ್ದಾರೆ. ಇನ್ನು ರೈತರು ಇವರ ಚಲನವಲನವಿದ್ದ ಕಡೆ ತೆರಳಿ ನೋಡಿದಾಗ ಮರಕ್ಕೆ ಜಿಂಕೆಯನ್ನು ನೇತು ಹಾಕಿರುವುದು ಕಂಡುಬಂದಿದೆ. ಜೀಪಿನಲ್ಲಿ ಬೇಟೆಗೆ ಬಳಸಿದ್ದ ಆಯುಧಗಳು, ವಿದ್ಯುತ್ ದೀಪಗಳು ಪತ್ತೆಯಾಗಿವೆ.


    ಕೂಡಲೇ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಜಿಂಕೆಯ ಕಳೇಬರವನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಬೇಟೆಗೆ ಬಳಸಿದ್ದ ಜೀಪ್, ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.
    ಈ ಕುರಿತು ಪ್ರತಿಕ್ರಿಯಿಸಿರುವ ವಲಯಾರಣ್ಯಾಧಿಕಾರಿ ಕಿರಣ್‌ಕುಮಾರ್ ಕರತಂಗಿ, ಶನಿವಾರ ರಾತ್ರಿ ಗಸ್ತಿನಲ್ಲಿದ್ದಾಗ ಕೋಣನೂರು ಭಾಗದ ರೈತರು ಜಿಂಕೆ ಬೇಟೆಯಾಡಿರುವ ಬಗ್ಗೆ ವಿಷಯ ಮುಟ್ಟಿಸಿದರು. ದೊಡ್ಡಕವಲಂದೆ ಪೊಲೀಸರ ನೆರವಿನೊಂದಿಗೆ ಮೂರು ತಂಡಗಳಾಗಿ ಹುಡುಕಾಟ ನಡೆಸಿದರೂ ಬೇಟೆಗಾರರ ಸುಳಿವು ಸಿಗಲಿಲ್ಲ. ಪತ್ತೆಯಾಗಿರುವ ಜೀಪ್ ಕೇರಳದ ಪಲಕಾರ್‌ನ ರಾಜೇಶ್ ಎಂಬುವರಿಗೆ ಸೇರಿದ್ದಾಗಿದ್ದು, ದಸ್ತಗಿರಿ ನಡೆಸಿ ತನಿಖೆ ನಡೆಸಲಾಗುವುದು. ಈ ಕುರಿತು ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts