More

    ಬೆಳೆ ಹಾನಿ ಪರಿಹಾರಕ್ಕೆ ರೈತರ ಮನವಿ

    ಹಾನಗಲ್ಲ: ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಸಂಭವಿಸಿದೆ. ಕೃಷಿ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ಕೈಗೊಂಡಿದ್ದರೂ ಹಾನಿ ಪ್ರದೇಶ ಕಡಿಮೆ ದಾಖಲಿಸಲಾಗಿದೆ. ಇದರೊಂದಿಗೆ ನೀರಾವರಿ ಕ್ಷೇತ್ರದ ಬೆಳೆಗಳು ಖುಷ್ಕಿ ಎಂದು ತಪ್ಪಾಗಿ ದಾಖಲಿಸಿರುವುದರಿಂದ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರೊಂದಿಗೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಮುಂಗಾರಿನ ಆರಂಭದಲ್ಲಿ ಸಕಾಲಕ್ಕೆ ಮಳೆ ಬಾರದಿದ್ದರಿಂದ ರೈತರು ಎರಡು-ಮೂರು ಬಾರಿ ಬಿತ್ತನೆ ಕೈಗೊಂಡಿದ್ದರು. ಇದರಿಂದಾಗಿ ರೈತರಿಗೆ ಆರ್ಥಿಕ ಹೊಡೆತ ಬಿದ್ದಿದೆ. ನಂತರದಲ್ಲಿ ಮೂರು ತಿಂಗಳವರೆಗೆ ಸತತ ಅಧಿಕ ಮಳೆಯಿಂದ ಸಂಪೂರ್ಣ ಬೆಳೆಗಳು ಹಾನಿಯಾಗಿವೆ. ಸರ್ಕಾರ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ದೊಡ್ಡ ಹಿಡುವಳಿಯ ರೈತರಿಗೆ 2 ಹೆಕ್ಟೇರ್​ವರೆಗೆ ಪ್ರತಿ ಹೆಕ್ಟೇರ್​ಗೆ ಖುಷ್ಕಿ ಜಮೀನಿಗೆ 13,600 ರೂ, ನೀರಾವರಿ ಭೂಮಿಗೆ 25,000 ರೂ ಪರಿಹಾರ ನೀಡಲು ಅವಕಾಶವಿತ್ತು. ಆದರೆ, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಬಿತ್ತನೆಯಾದ ಕ್ಷೇತ್ರದಲ್ಲಿ ಬೆಳೆ ಹಾನಿ ಪ್ರದೇಶವನ್ನು ಕಡಿಮೆ ದಾಖಲಿಸಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಕೂಡಲೇ ಬೆಳೆ ಹಾಳಾದ ಸಂಪೂರ್ಣ ಕ್ಷೇತ್ರ ದಾಖಲಿಸಿ ಪರಿಹಾರ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ನೀರಾವರಿ ಜಮೀನನ್ನು ಖುಷ್ಕಿ ಎಂದು ದಾಖಲಿಸಿದ್ದರಿಂದ ರೈತರಿಗೆ ಆಗಿರುವ ಆರ್ಥಿಕ ಹಾನಿ ಸರಿಪಡಿಸಬೇಕು ಎಂದು ಮನವಿ ಮಾಡಿದರು.

    ಸಹಾಯಕ ಕೃಷಿ ನಿರ್ದೇಶಕ ಡಾ. ದೇವೇಂದ್ರಪ್ಪ ಕಡ್ಲೇರ ಮಾತನಾಡಿ, ಜಂಟಿ ಸಮೀಕ್ಷೆ ಕೈಗೊಂಡ ನಂತರದಲ್ಲಿ ಅಧಿಕ ಮಳೆಯಾಗಿದ್ದು, ಮತ್ತಷ್ಟು ಬೆಳೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಅದೇ ಕ್ಷೇತ್ರದ ಬೆಳೆಹಾನಿಯನ್ನು ಮತ್ತೊಮ್ಮೆ ದಾಖಲಿಸಲು ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ತಂತ್ರಾಂಶದಲ್ಲಿ ಇನ್ನುಳಿದ ಹಾನಿಯಾದ ಕ್ಷೇತ್ರ ದಾಖಲಿಸಲು ಅವಕಾಶ ಕಲ್ಪಿಸಿದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಬೆಳೆ ಹಾನಿಯಾದ ನೀರಾವರಿ ಕ್ಷೇತ್ರವನ್ನು ಮಳೆಯಾಶ್ರಿತ ಎಂದು ದಾಖಲಾಗಿರುವುದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಬಿತ್ತನೆ ಕ್ಷೇತ್ರದಲ್ಲಿ ಬೆಳೆಗಳು ಸಂಪೂರ್ಣ ಹಾಳಾದ ಬಗ್ಗೆ ತಂತ್ರಾಂಶದಲ್ಲಿ ಅಳವಡಿಸಲು ಸರ್ಕಾರಕ್ಕೆ ಅವಕಾಶ ಕೋರಲಾಗುವುದು. ಸಮಸ್ಯೆಗೊಳಪಟ್ಟ ರೈತರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಸವಣೂರ ಎಸಿ ರಾಯಪ್ಪ ಹುಣಸಗಿ, ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಪದಾಧಿಕಾರಿಗಳಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಮಲ್ಲೇಶಪ್ಪ ಪರಪ್ಪನವರ, ಷಣ್ಮುಖ ಅಂದಲಗಿ, ಮಹೇಶ ವಿರುಪಣ್ಣನವರ, ಶ್ರೀಕಾಂತ ದುಂಡಣ್ಣವರ, ಶ್ರೀಧರ ಮಲಗುಂದ, ಮಾಲತೇಶ ಕಲ್ಲಿಕರೆಣ್ಣನವರ ಇದ್ದರು.

    ಜಿಲ್ಲಾಡಳಿತವು ಕಂದಾಯ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗೆ ಬೆಳೆಹಾನಿ ಸಮೀಕ್ಷೆ ಹಾಗೂ ದಾಖಲಿಸುವ ಪ್ರಕ್ರಿಯೆ ಬಗ್ಗೆ ಸರಿಯಾಗಿ ತರಬೇತಿ ನೀಡದಿರುವುದರಿಂದ ನೀರಾವರಿ ಜಮೀನುಗಳು ಮಳೆಯಾಶ್ರಿತ ಎಂದು ದಾಖಲಾಗಿವೆ. ಬಿತ್ತನೆ ಕ್ಷೇತ್ರದಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದ್ದನ್ನು ದಾಖಲಿಸಲು ಅವಕಾಶವಿದ್ದರೂ, ಕಡಿಮೆ ಕ್ಷೇತ್ರ ದಾಖಲಿಸಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ.
    | ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts