More

    ಬೆಳಗಾವಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್​ ನಿಷೇಧ ಆಪರೇಷನ್​ ಚುರುಕು!

    ಬೆಳಗಾವಿ: ನಿಷೇಧಿತ ಪ್ಲಾಸ್ಟಿಕ್​ ವಿಷವು ಪರಿಸರ ಮಡಿಲಿಗೆ ಸೇರುವುದನ್ನು ತಡೆಗಟ್ಟುವುದಕ್ಕಾಗಿ ನಗರದಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಜೂನ್​ ಹಾಗೂ ಜುಲೈ ತಿಂಗಳಲ್ಲಿ ಸರ್ಕಾರದಿಂದ ಪಾಲಿಕೆಗೆ ಪ್ಲಾಸ್ಟಿಕ್​ ನಿಷೇಧಿಸುವಂತೆ ಆದೇಶಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರದಲ್ಲಿ 4 ತಂಡ ರಚಿಸಿಕೊಂಡು ಸಂಚರಿಸುತ್ತಿದ್ದಾರೆ. ಸಣ್ಣ ಸಣ್ಣ ಅಂಗಡಿಗಳನ್ನು ಒಂದು ತಂಡ ಪರಿಶೀಲಿಸಿದರೆ, ಹೋಲ್​ಸೇಲ್​ ಹಾಗೂ ಹೋಟೆಲ್​ ಪರಿಶೀಲಿಸಲು ಮತ್ತೊಂದು ತಂಡ ಹೀಗೆ ಅಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದ್ದಾರೆ.

    ಜುಲೈ 1ರಿಂದ ಈ ವರೆಗೆ 27 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 14 ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದ್ದು, ಒಟ್ಟು 49,900 ರೂ. ದಂಡ ವಸೂಲಿ ಮಾಡಿ, 72 ಕೆಜಿ ನಿಷೇಧಿತ ಪ್ಲಾಸ್ಟಿಕ್​ ವಶಕ್ಕೆ ಪಡೆದಿದ್ದಾರೆ. ಜತೆಗೆ ನಿಷೇಧವಾದ ಪ್ಲಾಸ್ಟಿಕ್​ ಬಳಸದಂತೆ ಅರಿವು ಮೂಡಿಸುತ್ತಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ಈ ಮೊದಲು ಪ್ಲಾಸ್ಟಿಕ್​ ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ಪರ್ಯಾಯ ಬ್ಯಾಗ್​ಗಳು ಪತ್ತೆಯಾಗಿದ್ದು, ಪ್ಲಾಸ್ಟಿಕ್​ ಬಳಕೆ ಬಗ್ಗೆ ವ್ಯಾಪಾರಸ್ಥರು ಜಾಗೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಲಾಸ್ಟಿಕ್​ ಹೋಲ್​ಸೇಲ್​ ಅಂಗಡಿಗಳು, ಹೋಟೆಲ್​ಗಳು, ಸಣ್ಣ ಮಳಿಗೆಗಳು, ಫುಟ್​ಪಾತ್​ ಮೇಲಿನ ಅಂಗಡಿಗಳ ಮೇಲೆ ಪಾಲಿಕೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

    ಪೂರೈಕೆಯಾದ ಪ್ಲಾಸ್ಟಿಕ್​ ಬಳಕೆಯಲ್ಲಿದೆ: ಪ್ಲಾಸ್ಟಿಕ್​ ಬಳಕೆಯನ್ನು ಈ ಬಾರಿ ದೇಶಾದ್ಯಂತ ನಿಷೇಧಿಸಿರುವುದರಿಂದ ಇದಕ್ಕೆ ಕಡಿವಾಣ ಬೀಳುವ ಸಾಧ್ಯತೆಯೂ ಕಂಡುಬಂದಿದೆ. ಇದಕ್ಕೆ ಪೂರಕವಾಗಿ ಜನರಲ್ಲಿ ಅರಿವು ಮೂಡಬೇಕಾದ ಅಗತ್ಯವೂ ಇದೆ. 2016ರಲ್ಲೆ ನಿಷೇಧಿಸಿದ್ದರೂ ಕೆಲವೇ ಕಡೆಗಳಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿತ್ತು. ಪಕ್ಕದ ಮಹಾರಾಷ್ಟ್ರದಲ್ಲಿ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್​ ಕದ್ದುಮುಚ್ಚಿ ಇತರ ಕಡೆಗಳಿಗೂ ಬರುತ್ತಿರುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಈಗಾಗಲೇ ಪೂರೈಕೆಯಾಗಿರುವ ಪ್ಲಾಸ್ಟಿಕ್​ ಬಳಕೆ ಅಲ್ಲಲ್ಲಿ ಕಂಡುಬರುತ್ತಿದೆ. ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುತ್ತಿದ್ದಾರೆ. ಮಾಹಿತಿ ಕೊರತೆ ಕಾರಣದಿಂದಾಗಿ ಅಲ್ಲಲ್ಲಿ ವರ್ತಕರು ನಿಷೇಧದ ನಡುವೆಯೂ ಪಾಸ್ಟಿಕ್​ ಬಳಸುತ್ತಿದ್ದಾರೆ. ಪ್ಲಾಸ್ಟಿಕ್​ ಕ್ಯಾರಿ ಬ್ಯಾಗ್​, ಬ್ಯಾನರ್​, ಬಂಟಿಂಗ್ಸ್​, ಫ್ಲೆಕ್ಸ್​, ಪ್ಲೇಟ್​, ಧ್ವಜಗಳು, ಕಪ್​ ಸೇರಿ ಇತರ ಉತ್ಪನ್ನಗಳನ್ನು ಸದ್ಯ ನಿಷೇಧಿಸಲಾಗಿದೆ.


    ಬಟ್ಟೆ ಬ್ಯಾಗ್​ ಅನಿವಾರ್ಯ: ಪ್ಲಾಸ್ಟಿಕ್​ ಬ್ಯಾಗ್​ಗೆ ಪರ್ಯಾಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ದಿನಸಿ, ತರಕಾರಿ, ಸಣ್ಣಪುಟ್ಟ ಪದಾರ್ಥದೊಂದಿಗೆ ಉಚಿತವಾಗಿ ದೊರೆಯುತ್ತಿದ್ದ ಪ್ಲಾಸ್ಟಿಕ್​ ಕ್ಯಾರಿ ಬ್ಯಾಗ್​ ಬದಲಾಗಿ ಬಟ್ಟೆ ಬ್ಯಾಗ್​ ಖರೀದಿಸಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ. ಕಿರಾಣಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್​ಗಳವರೆಗೆ ಪರ್ಯಾಯ ಬ್ಯಾಗ್​ಗಳು ದುಬಾರಿ ಎನಿಸಿವೆ. ಪ್ಲಾಸ್ಟಿಕ್​ ನಿಷೇಧದಿಂದಾಗಿ ಜನಸಾಮಾನ್ಯರಿಗೆ ಪರ್ಯಾಯ ಬ್ಯಾಗ್​ ವಿಷಯದಲ್ಲಿ ಹೊರೆ ಆಗಿದೆ. ಕೆಲವರು, ಮನೆಯಿಂದಲೇ ಬಟ್ಟೆ ಮತ್ತಿತರ ಬ್ಯಾಗ್​ ಒಯ್ಯುತ್ತಿರುವುದು ಕಂಡುಬರುತ್ತಿದೆ. ಒಟ್ಟಾರೆ ಪ್ಲಾಸ್ಟಿಕ್​ ನಿಷೇಧದ ಪ್ರಯತ್ನ ಪ್ರಹಸನ ನಡೆದಿದೆ. ಕೆಲವು ವರ್ತಕರು, ದಂಡಕ್ಕೆ ಹೆದರಿ ಪ್ಲಾಸ್ಟಿಕ್​ ಬ್ಯಾಗ್​ ಕೊಡದಿರಲು ನಿರ್ಧರಿಸಿದ್ದಾರೆ. ಸ್ಥಳಿಯ ಆಡಳಿತ ಸಂಸ್ಥೆ ಸೇರಿ ಸಂಬಂಧಿಸಿದ ಏಜೆನ್ಸಿಗಳು ನಿಷೇಧ ಆದೇಶದ ಅನುಷ್ಠಾನಕ್ಕೆ ಮತ್ತಷ್ಟು ಕಠಿಣ ಕ್ರಮ ವಹಿಸಬೇಕಾದ ಅಗತ್ಯವಿದೆ.

    ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್​ ಬಳಕೆ ತಡೆಗೆ ಅಧಿಕಾರಿಗಳ ತಂಡೆ ರಚಿಸಲಾಗಿದ್ದು, ಈ ಅಧಿಕಾರಿಗಳು ಪ್ಲಾಸ್ಟಿಕ್​ ಬಳಕೆ ಕುರಿತಂತೆ ನಿಗಾ ವಹಿಸಿದೆ. ಸಾರ್ವಜನಿಕರು ಪ್ಲಾಸ್ಟಿಕ್​ ಬ್ಯಾಗ್​ ಬದಲು ಪರ್ಯಾಯ ಬ್ಯಾಗ್​ ಬಳಸಬೇಕು.
    | ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ ಬೆಳಗಾವಿ

    ಉತ್ಪಾದನಾ ಕೇಂದ್ರದ ಮೇಲೆ ನಿಯಂತ್ರಣ: ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್​ ಉತ್ಪಾದನೆ ಕೇಂದ್ರಗಳಿಲ್ಲ. ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್​ ಉತ್ಪಾದನೆ ಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಈಗಾಗಲೇ ಉತ್ಪಾದನೆಯಾಗಿ ಮಾರುಕಟ್ಟೆಗೆ ಹೋಗಿರುವ ಪ್ಲಾಸ್ಟಿಕ್​ ಮಾತ್ರ ಬಳಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್​ ಬಳಕೆ ತೀರಾ ಕುಗ್ಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    |ಜಗದೀಶ ಹೊಂಬಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts