More

    ಬೆಳಗಾವಿ ಅಭಿವೃದ್ಧಿಗೆ ಅಗತ್ಯ ಸಹಕಾರ – ಪ್ರಹ್ಲಾದ ಜೋಶಿ

    ಬೆಳಗಾವಿ: ಮಹಾನಗರ ಸೇರಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ.

    ನಗರದ ವಿದ್ಯಾಧಿರಾಜ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ-ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗಾವಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ, ಅನುದಾನ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ನಗರದ ಶಾಸಕರು ನಿಯೋಗದೊಂದಿಗೆ ಬಂದರೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.

    ರೈಲ್ವೆ ಯೋಜನೆ ಶೀಘ್ರ ಅನುಷ್ಠಾನ: ದಿ.ಸುರೇಶ ಅಂಗಡಿ ಅವರ ಕನಸಿನ ಯೋಜನೆಯಾದ ಧಾರವಾಡ-ಬೆಳಗಾವಿ ನೇರ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಹಕಾರ, ಅನುದಾನ ನೀಡಲು ಬದ್ಧವಿದೆ ಎಂದು ತಿಳಿಸಿದರು.

    ಮೋದಿಯಿಂದ ಆಮೂಲಾಗ್ರ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಪರಿಸರ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಯೋಜನೆ ಜಾರಿಗೆ ತಂದಿದ್ದಾರೆ. ಮೂಲಸೌಕರ್ಯ, ಉತ್ಪಾದನೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಕೋಟಿ ರೂ.ಬಳಕೆ ಮಾಡಲಾಗುತ್ತಿದೆ. ಯಾವುದೇ ದೇಶದಲ್ಲಿ ಆಗಲಾರದಷ್ಟುಬದಲಾವಣೆ ದೇಶದ ಪರಿಸರ, ಸಾಮಾಜಿಕ ನ್ಯಾಯ ಕ್ಷೇತ್ರದಲ್ಲಿ ಆಗಿದೆ ಎಂದರು.

    ನೂರಾರು ಕೋಟಿ ಖರ್ಚು: ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ವ್ಯವಸ್ಥೆ ಮಾದರಿಯಲ್ಲಿಯೇ ಅಂಗವಿಕಲರಿಗೆ, ವಯೋವೃದ್ಧರಿಗೂ ನೀಡಲಾಗಿದೆ. ಅಂಗವಿಕಲರಿಗಿದ್ದ ಶೇ.3 ಮೀಸಲಾತಿಯನ್ನು ಶೇ.4ಕ್ಕೆ ಏರಿಕೆ ಮಾಡಲಾಗಿದೆ. 2,500 ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲಾಗಿದೆ.

    70 ಸಾವಿರ ಶಿಬಿರ ಏರ್ಪಡಿಸಿ ಮಾಡಿ 9 ಲಕ್ಷ ಫಲಾನುಭವಿಗಳಿಗೆ ಸಾಧನ-ಸಲಕರಣೆ ವಿತರಣೆ ಮಾಡಲಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಹೇಳಿದರು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ದೇಶಾದ್ಯಂತ ವಯೋವೃದ್ಧ, ಅಂಗವಿಕಲರಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಸೌಲಭ್ಯ ಕಲ್ಪಿಸಿಕೊಟ್ಟಿದೆ ಎಂದರು. ಶಾಸಕರಾದ ಅಭಯ ಪಾಟೀಲ, ಡಿ.ಎಂ. ಐಹೊಳೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕ ಅಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇತರರು ಇದ್ದರು.

    ಒಲಿಪಿಂಕ್ಸ್‌ನಲ್ಲಿ ರಾಜಕಾರಣಿಗಳಿಗೆ ನಿರ್ಬಂಧ: ಈ ಮೊದಲು ಜಗತ್ತಿನ ಯಾವುದೇ ದೇಶದಲ್ಲಿ ಒಲಿಪಿಂಕ್ಸ್ ನಡೆಯುತ್ತಿದ್ದರೆ ದೇಶದಿಂದ ಕ್ರೀಡಾಪಟುಗಳಿಗಿಂತ ಹೆಚ್ಚು ರಾಜಕಾರಣಿಗಳು, ಅಧಿಕಾರಿಗಳು ಹೋಗುತ್ತಿದ್ದರು. ಕ್ರೀಡಾಪಟುಗಳನ್ನು ನಿರ್ಲಕ್ಷೃ ಮಾಡಲಾಗುತ್ತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಆಯೋಜಿಸಿದ ಮೂರು ಒಲಿಪಿಂಕ್ಸ್‌ಗಳಲ್ಲಿ ಕ್ರೀಡಾಪಟುಗಳು, ತರಬೇತುದಾರರನ್ನು ಹೊರತುಪಡಿಸಿ ಇನ್ನುಳಿದವರಿಗೆ ನಿರ್ಬಂಧಿಸಿದರು. ಅಲ್ಲದೆ, ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ನೀಡಿದರು. ಹಾಗಾಗಿಯೇ ಪ್ಯಾರಾ ಒಲಿಪಿಂಕ್ಸ್‌ನಲ್ಲಿ 10 ಪದಕಗಳನ್ನು ನಮ್ಮ ದೇಶ ಪಡೆದುಕೊಂಡಿದೆ. ಕ್ರೀಡಾ ಕ್ಷೇತ್ರಕ್ಕೆ ಮೋದಿ ಅವರು ವಿಶೇಷ ಆದ್ಯತೆ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts