More

    ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್ ಸಂಭ್ರಮ

    ಬೆಳಗಾವಿ: ಇಲ್ಲಿನ ಮಹಾನಗರ ಕೋಟೆ ಆವರಣದಲ್ಲಿರುವ ದುರ್ಗಾದೇವಿ ರಾಜ್ಯಾದ್ಯಂತ ಹೆಸರಾಗಿರುವ ಶಕ್ತಿ ದೇವತೆಯಾಗಿದ್ದು, ನವರಾತ್ರಿ ಅಂಗವಾಗಿ ಪ್ರತಿ ವರ್ಷ ಒಂಬತ್ತು ದಿನಗಳ ಕಾಲ ನಡೆಯುವ ದುರ್ಗಾ ಮಾತಾ ದೌಡ್ (ಓಟ)ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ.

    ಸೋಮವಾರ ನಗರದ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಹಿರಿಯರು ದುರ್ಗೆಗೆ ಪೂಜೆ ಸಲ್ಲಿಸುವ ಮೂಲಕ ದೌಡ್‌ಗೆ ಚಾಲನೆ ನೀಡಿದರು. ಬಳಿಕ ದುರ್ಗಾಮಾತಾ ದೌಡ್ ಹುಲಬತ್ತಿ ಕಾಲನಿ ರಸ್ತೆ, ಮಹಾತ್ಮ ಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಪಾಟಿದಾರ್ ಭವನ, ಗೂಡ್ಸ್ ಶೆಡ್ ರಸ್ತೆ, ಕಪಿಲೇಶ್ವರ ಕಾಲನಿ, ಶಾಸ್ತ್ರಿ ನಗರ, ಅಟ್ಲೆ ರೋಡ್, ಮಹಾದ್ವಾರ ರಸ್ತೆ, ಮಾಣಿಕಭಾಗ ರಸ್ತೆ, ಸಮರ್ಥ ನಗರ, ಸಂಭಾಜಿ ಗಲ್ಲಿ ಮೂಲಕ ಹಾದು ಮತ್ತೆ ಎಸ್‌ಪಿಎಂ ಮಾರ್ಗವಾಗಿ ಕಪಿಲೇಶ್ವರ ಮಂದಿರಕ್ಕೆ ಬಂದು ಮಧ್ಯಾಹ್ನ ಸಂಪನ್ನಗೊಂಡಿತು.
    ನವರಾತ್ರಿಯ ಒಂಬತ್ತೂ ದಿನ ನಿತ್ಯ ಬೆಳಗ್ಗೆ 6 ಗಂಟೆಗೆ ಸಾವಿರಾರು ಜನರು ನಗರದ ವಿವಿಧ ಪ್ರದೇಶಗಳಲ್ಲಿ ಓಡುವ ದುರ್ಗಾಮಾತಾ ದೌಡ್ ರಾಜ್ಯದಲ್ಲಿಯೇ ವಿನೂತನ ಸಂಪ್ರದಾಯವಾಗಿದೆ. ಸಾವಿರಾರು ಜನರು ಶ್ವೇತ ವಸ್ತ್ರಧಾರಿಗಳಾಗಿ, ಕೇಸರಿ ಪೇಟ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಬೆಳಗ್ಗೆ 6 ಗಂಟೆಗೆ ದುರ್ಗಾಮಾತಾ ದೌಡ್‌ದಲ್ಲಿ ಪಾಲ್ಗೊಂಡರು. ಅದಕ್ಕೂ ಮೊದಲು ಮಹಿಳೆಯರು ತಿಲಕ ಇಟ್ಟು, ಆರತಿ ಬೆಳಗಿದ ತಕ್ಷಣ ಓಟ ಆರಂಭವಾಯಿತು.

    ನಗರದಲ್ಲಿ ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆ ಕಳೆದ 20 ವರ್ಷಗಳಿಂದ ಈ ದುರ್ಗಾ ಮಾತಾ ದೌಡ್ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಉತ್ಸಾಹ, ಶಕ್ತಿ ಹಾಗೂ ಸ್ಥೈರ್ಯ ತುಂಬುವ ದೇವಿಯಾಗಿ ಕೋಟೆ ದುರ್ಗಾದೇವಿ ಭಕ್ತರ ಆರಾಧ್ಯ ದೈವವಾಗಿದ್ದಾಳೆ. ನವರಾತ್ರಿಯ ಸಂದರ್ಭ ಈ ದೇವತೆಗೆ ಸಲ್ಲಿಸುವ ಪೂಜೆ ಮತ್ತು ಸಾಂಪ್ರದಾಯಿಕ ಆಚರಣೆಗಳು ವಿಶಿಷ್ಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts