More

    ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ – ಪ್ರವಾಸೋದ್ಯಮದ ಜತೆ ಜೋಡಣೆಗೆ ಕ್ರಮ -ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿಕೆ 

    ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ ಕಲ್ಪಿಸುವ ಜತೆಗೆ ಪ್ರವಾಸೋದ್ಯಮದ ಜತೆ ಜೋಡಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
    ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ ಕಲ್ಪಿಸುವ ಸಂಬಂಧ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಧಿಕಾರಿಗಳು ಹಾಗೂ ನಗರದ ಬೆಣ್ಣೆದೋಸೆ ಮಾಲೀಕರ ಜತೆಗಿನ ಸಭೆಯಲ್ಲಿ ಮಾತನಾಡಿದರು.
    ದಾವಣಗೆರೆ ಬೆಣ್ಣೆದೋಸೆಗೆ ರಾಜ್ಯದಲ್ಲೇ ವಿಶಿಷ್ಟ ಹೆಸರಿದೆ. ಇಲ್ಲಿ ಬೆಣ್ಣೆದೋಸೆಗೆ ಬಳಸುವ ಆಹಾರಧಾನ್ಯ, ಮಾಡುವ ವಿಧಾನಗಳ ಬಗ್ಗೆ ಜನರಲ್ಲಿ ವಿಶ್ವಾಸದ ಜತೆಗೆ ಗುಣ್ಣಮಟ್ಟದ ಖಾತ್ರಿ ಕಲ್ಪಿಸಬೇಕಿದೆ. ಇದನ್ನು ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಿಲ್ಲೆಯ ಹೆಸರನ್ನು ಹೆಚ್ಚಿಸಬೇಕಿದೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಚಿಂತನೆ ಇದೆ ಎಂದರು.
    ದಾವಣಗೆರೆ ನಗರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಗೋವಾ, ಮಹಾರಾಷ್ಟ್ರಕ್ಕೆ ತೆರಳುವ ಪ್ರವಾಸಿಗರು, ಅಂತಾರಾಜ್ಯ ಪ್ರಯಾಣಿಕರು ಇಲ್ಲಿನ ಬೆಣ್ಣೆದೋಸೆ ಸವಿಯುವಂತೆ ಮಾಡುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ರುಚಿಕರ, ಶುಚಿಕರ, ಗುಣಮಟ್ಟದ ದೋಸೆ ಪೂರೈಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.
    ಹೋಟೆಲ್ಗಳಿಗೆ ಪ್ರಮಾಣಪತ್ರ:
    ಆಹಾರ ಸುರಕ್ಷತಾ ಕಾಯ್ದೆಯನ್ವಯ ಹೋಟೆಲ್‌ಗಳ ಗುಣಮಟ್ಟದ ಖಾತರಿ ಕುರಿತು ಪರಿಶೀಲನೆ ನಡೆಸಲಾಗುವುದು. ದೋಸೆಗೆ ಬಳಸುವ ಧಾನ್ಯಗಳು, ಬೆಣ್ಣೆ, ಎಣ್ಣೆ ಮತ್ತು ಇತರೆ ವಸ್ತುಗಳು, ಅಲ್ಲಿನ ಆರೋಗ್ಯವಂತ ಸಿಬ್ಬಂದಿ ತಪಾಸಣೆ ಸೇರಿ ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಮಾನದಂಡಗಳನ್ನು ಪರಿಶೀಲಿಸಿ ಜಿಲ್ಲಾಡಳಿತದಿಂದ ಬ್ರ್ಯಾಂಡಿಂಗ್ ಪ್ರಮಾಣಪತ್ರ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಈ ಹೋಟೆಲ್ಗಳನ್ನು ಜೋಡಣೆ ಮಾಡಲಾಗುವುದು ಎಂದು ಡಿಸಿ ಹೇಳಿದರು.
    ಪ್ರಮಾಣ ಪತ್ರ ನೀಡುವ ಸಂಬಂಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಪಾಲಿಕೆ ಆಯುಕ್ತರು, ಆಹಾರ ಸುರಕ್ಷತಾ ಕಾಯ್ದೆ ಅಂಕಿತ ಅಧಿಕಾರಿಗಳು, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಒಳಗೊಂಡ ಸಮಿತಿ ರಚಿಸಿ ಅಧ್ಯಯನ ವರದಿ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದರು.
    ಶೀಘ್ರ ದೋಸೆ ಹಬ್ಬ:
    ದಾವಣಗೆರೆ ಬೆಣ್ಣೆದೋಸೆ ರುಚಿ ಸವಿಯಲು ಮತ್ತು ಮೆರುಗು ನೀಡಲು ಡಿಸೆಂಬರ್ ಮೂರನೇ ವಾರದ ಅಂತ್ಯದಲ್ಲಿ ದೋಸೆ ಹಬ್ಬವನ್ನು ಆಚರಿಸಲಾಗುವುದು. ಇಲ್ಲಿನ ದೋಸೆಗೆ ಅಂತಾರಾಜ್ಯ ಮಟ್ಟದ ರುಚಿ ತೋರಿಸಲು ದೆಹಲಿ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ನಡೆಯುವ ವಿಶೇಷ ಉತ್ಸವ, ಸಮ್ಮೇಳನಗಳಿಗೆ ಇಲ್ಲಿನ ಹೋಟೆಲ್ ಮಾಲೀಕರನ್ನು ಪ್ರತಿನಿಧಿಯನ್ನಾಗಿ ಕಳುಹಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತೆ ಎನ್. ರೇಣುಕಾ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಸಿದ್ರಾಮ ಮಾರಿಹಾಳ್ ಹಾಗೂ ವಿವಿಧ ಇಲಾಖಾಧಿಕಾರಿಗಳು, ನಗರದ ವಿವಿಧ ಬೆಣ್ಣೆದೋಸೆ ಹೋಟೆಲ್‌ಗಳ ಮಾಲೀಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts