More

    ಬೆಂಬಲ ಬೆಲೆ ಸಿಕ್ಕರೂ ತಾಪತ್ರಯ ಹತ್ತಾರು!

    ಹುಬ್ಬಳ್ಳಿ: ಹಿಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಕಡಲೆಕಾಳು ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆ ಇಳಿಮುಖವಾಗಿ ಬೆಳೆಗಾರರು ಕಂಗಾಲಾಗಿ ಹೋರಾಟ ಮಾಡಿ ಕೊನೆಗೂ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗುವಂತೆ ಮಾಡಿದ್ದಾರೆ. ಆದರೆ, ಖರೀದಿ ಕೇಂದ್ರಕ್ಕೆ ಕೊಡಬೇಕಾದ ದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದು ಅನಿವಾರ್ಯವಾಗಲಿದೆ.

    ಇತ್ತೀಚೆಗೆ ನಡೆದ ಧಾರವಾಡ ಜಿಲ್ಲಾ ಟಾಸ್ಕ್​ಪೋರ್ಸ್ ಸಭೆಯಲ್ಲಿ ತೀರ್ವನಿಸಿದಂತೆ ಜಿಲ್ಲೆಯಲ್ಲಿ 13 ಕಡೆ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪ್ರತಿ ಕ್ವಿಂಟಾಲ್ ಕಡಲೆಕಾಳನ್ನು 4875 ರೂ.ನಂತೆ ಒಬ್ಬ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿಸಲು ಸೂಚಿಸಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರಾಜ್ಯದಲ್ಲಿ ಖರೀದಿ ಸಂಸ್ಥೆಯಾಗಿದೆ.

    ಖರೀದಿ ಪೂರ್ವದಲ್ಲಿ ರೈತ ನೋಂದಣಿಗೆ ಅವಕಾಶ ನೀಡಲಾಗಿದ್ದು, ಉತ್ಪನ್ನ ಬೆಳೆದಿರುವುದಕ್ಕೆ ಪಹಣಿ ಪತ್ರ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ವಿಪರ್ಯಾಸವೆಂದರೆ, ರೈತರ ಹೊಲಗಳನ್ನು ಖಾಸಗಿಯಾಗಿ ಸಮೀಕ್ಷೆ ಮಾಡಿಸಿ ಬೆಳೆ ದರ್ಶಕ ಆಪ್​ನಲ್ಲಿ ಯಾವ ಬೆಳೆ ಇದೆ ಎಂದು ಅಪ್​ಲೋಡ್ ಮಾಡಿಸಲಾಗಿದೆ. ಬಹಳಷ್ಟು ರೈತರ ಜಮೀನಿನಲ್ಲಿ ಇರುವ ಬೆಳೆಯೇ ಬೇರೆ, ಆದರೆ ಬೆಳೆದರ್ಶಕದಲ್ಲಿ ತೋರಿಸುತ್ತಿರುವುದೇ ಬೇರೆಯಾಗಿದೆ.

    ಈ ಬಗ್ಗೆ ಇಲಾಖೆಯನ್ನು ಕೇಳಿದರೆ ಸಮೀಕ್ಷೆ ಮಾಡುವಾಗ ತಾಂತ್ರಿಕ ಕಾರಣಗಳಿಗೆ ಬೇರೆ ಬೆಳೆ ತೋರಿಸುತ್ತಿದೆ. ಅಕ್ಕಪಕ್ಕದ ಸರ್ವೆ ನಂಬರ್​ಗಳಿಗೆ ಒಂದೇ ಬೆಳೆ ನಮೂದಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

    ಒಂದು ವೇಳೆ ಬೆಳೆದರ್ಶಕದಲ್ಲಿ ತಪ್ಪಾಗಿ ನಮೂದಾಗಿದ್ದರೆ ರೈತರು ಕಂದಾಯ ಇಲಾಖೆ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬಹುದು. ಕಡಲೆ ಬೆಳೆ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಸಮೀಕ್ಷೆಯಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿದ್ದರಿಂದ ಈ ಪರ್ಯಾಯ ಅವಕಾಶವನ್ನು ರೈತರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏನೇ ಆದರೂ, ಯಾರೋ ಮಾಡಿದ ತಪ್ಪಿಗೆ ರೈತರಿಗೆ ಕಚೇರಿ ಅಲೆಯುವ ಶಿಕ್ಷೆ ನೀಡಿದಂತಾಗಿದೆ. ನೇರವಾಗಿ ಉತಾರ ತೆಗೆದುಕೊಂಡು ನೋಂದಣಿ ಮಾಡಬೇಕಾಗಿದ್ದ ರೈತರು ಈಗ ಮತ್ತೊಂದು ದಾಖಲೆ ತರಲು ಕಂದಾಯ ಇಲಾಖೆಗೆ ಅಲೆಯಬೇಕು. ಉಳಿದಂತೆ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ಸಂಖ್ಯೆ ಇತರೆ ದಾಖಲೆಗಳನ್ನು ಕೊಡಲು ರೈತರು ಸಿದ್ಧರಿದ್ದಾರೆ.

    6.23 ಲಕ್ಷ ಕ್ವಿಂಟಾಲ್: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಕಡಲೆಕಾಳು 91667 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಅಂದಾಜು 6.23 ಲಕ್ಷ ಕ್ವಿಂಟಾಲ್ ಫಸಲು ಬರುವ ನಿರೀಕ್ಷೆ ಇದೆ. ಧಾರವಾಡ ಜಿಲ್ಲೆಯಲ್ಲಿ ಈ ವರ್ಷದ ಹಿಂಗಾರು ಬಿತ್ತನೆಯೇ 1.86 ಲಕ್ಷ ಹೆಕ್ಟೇರ್ ಆಗಿದೆ. ಅದರಲ್ಲಿ ಅರ್ಧ ಪಾಲು ಕಡಲೆಕಾಳು ಪಡೆದಿದೆ. ಜೋಳ 46 ಸಾವಿರ ಹೆಕ್ಟೇರ್, ಗೋದಿ 30 ಸಾವಿರ ಹೆಕ್ಟೇರ್ ನಂತರದ ಸ್ಥಾನದಲ್ಲಿವೆ.

    ಹಿಂಗಾರಿನ ಪ್ರಮುಖ ಬೆಳೆಯಾಗಿದ ಕಡಲೆ ಬಗ್ಗೆ ರೈತರಿಗೆ ಬಹಳ ನಿರೀಕ್ಷೆ ಇದೆ. ಬೆಳೆ ಈಗಾಗಲೇ ಕೈ ಸೇರಿದ್ದು, ಅನೇಕ ರೈತರು ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಲ್ಲಿ ಪ್ರತಿ ಕ್ವಿಂಟಾಲ್​ಗೆ ಹೆಚ್ಚೆಂದರೆ 3500 ರೂ.ವರೆಗೆ ಸಿಗುತ್ತಿದೆ. ಹಾಗಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗಿರುವುದು ಆಶಾಭಾವ ಮೂಡಿಸಿದೆ.

    ಕಡಲೆ ಖರೀದಿಗೆ ರೈತ ನೋಂದಣಿ ಮಾಡಲು ಪಹಣಿ ಪತ್ರ ಅಗತ್ಯವಾಗಿದೆ. ಒಂದು ವೇಳೆ ಪಹಣಿಯಲ್ಲಿ ಬೆಳೆ ನಮೂದಾಗಿರದಿದ್ದರೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಸಲ್ಲಿಸಲು ರೈತರಿಗೆ ಪರ್ಯಾಯ ಅವಕಾಶ ಕಲ್ಪಿಸಲಾಗಿದೆ.

    |ರಾಜಶೇಖರ ಬಿಜಾಪುರ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

    13 ಕೇಂದ್ರಗಳ ಸ್ಥಾಪನೆ

    ಧಾರವಾಡ: 2019- 20ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಎಫ್​ಎಕ್ಯೂ ಗುಣಮಟ್ಟದ ಕಡಲೆಕಾಳು ಪ್ರತಿ ಕ್ವಿಂಟಾಲ್​ಗೆ 4,875 ರೂ. ದರದಲ್ಲಿ ಖರೀದಿಸಲು ಸರ್ಕಾರದಿಂದ ಜಿಲ್ಲೆಯಾದ್ಯಂತ 13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್​ಫೋರ್ಸ್ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಹುಬ್ಬಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ, ನೂಲ್ವಿ, ಹೆಬಸೂರು ಉಪ ಮಾರುಕಟ್ಟೆಗಳು, ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ, ಹೆಬ್ಬಳ್ಳಿ, ಉಪ್ಪಿನಬೆಟಗೇರಿ ಉಪ ಮಾರುಕಟ್ಟೆಗಳು, ಅಣ್ಣಿಗೇರಿ ತಾಲೂಕಿನ ಎಪಿಎಂಸಿ ಮುಖ್ಯ ಮಾರುಕಟ್ಟೆ, ನವಲಗುಂದ, ತಿರ್ಲಾಪುರ, ಮೊರಬ ಉಪ ಮಾರುಕಟ್ಟೆ ಪ್ರಾಂಗಣಗಳು, ಕುಂದಗೋಳ ಎಪಿಎಂಸಿ ಮುಖ್ಯ ಮಾರುಕಟ್ಟೆ, ಯರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಾಂಗಣ ಹಾಗೂ ಯಲಿವಾಳ ಗ್ರಾಮದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

    ಕಡಲೆಕಾಳು ಖರೀದಿಸಲು ಆಧಾರ್ ಗುರುತಿನ ಚೀಟಿಯ ಮೂಲಪ್ರತಿ ಹಾಗೂ ನಕಲು ಪ್ರತಿ, 2019- 20ನೇ ಸಾಲಿನ ಪಹಣಿಪತ್ರ ಮತ್ತು ಪಹಣಿಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು. ಗ್ರಾಮ ಲೆಕ್ಕಾಧಿಕಾರಿಗಳಿಂದ ಕಡಲೆಕಾಳು ಬೆಳೆದ ಬಗ್ಗೆ ದೃಢೀಕರಣ ಪತ್ರ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್​ಪುಸ್ತಕದ ನಕಲು ಪ್ರತಿ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖೆಯ ಶಾಖಾ ವ್ಯವಸ್ಥಾಪಕರ ದೂ: 8722726875 ಸಂರ್ಪಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts