More

    ಬೆಂಬಲ ಬೆಲೆ ಕಡಲೆ ಖರೀದಿ ಆರಂಭ

    ನವಲಗುಂದ: ನವಲಗುಂದ ಪಟ್ಟಣದ ಅಣ್ಣಿಗೇರಿ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಡಲೆ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಪ್ರಕ್ರಿಯೆ ನಡೆಯುತ್ತಿದೆ.

    ಫೆ. 28ರಿಂದ ಆರಂಭಗೊಂಡ ಕಡಲೆ ಖರೀದಿ ಕೇಂದ್ರವನ್ನು ಕರೊನಾ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇಲ್ಲಿಯವರೆಗೆ ಸತತ ಎರಡು ತಿಂಗಳ ಕಾಲ ಕಡಲೆ ಖರೀದಿ ಪ್ರಕ್ರಿಯೆ ನಡೆಸಲಾಗಿದೆ.

    ಅಣ್ಣಿಗೇರಿ ಎಪಿಎಂಸಿ ಉಪಮಾರುಕಟ್ಟೆ ಖರೀದಿ ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟು 3,730ಕ್ಕೂ ಹೆಚ್ಚು ರೈತರು ಕಡಲೆ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಆ ಪೈಕಿ ನಿತ್ಯ 50 ರಿಂದ 60 ಜನ ರೈತರಿಂದ 500 ರಿಂದ 600 ಕ್ವಿಂಟಾಲ್ ಕಡಲೆ ಖರೀದಿಸಲಾಗುತ್ತಿದೆ. ಈವರೆಗೆ 1,300 ರೈತರಿಂದ ಅಂದಾಜು 11,211 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ. ನೋಂದಣಿಯಾದವರ ಪೈಕಿ ಇನ್ನೂ 2,200 ರೈತರು ಕಡಲೆ ಫಸಲು ತಂದಿಲ್ಲ.

    ರೈತರು ಬೆಂಬಲ ಯೋಜನೆಯ ಲಾಭ ಪಡೆಯಲು ಏ. 30ರವರೆಗೆ ನೋಂದಣಿ ಮಾಡಿಸಲು ಕಾಲಾವಕಾಶ ನೀಡಲಾಗಿದೆ. ಮೇ 12ರವರೆಗೆ ಕಡಲೆ ಖರೀದಿ ಪ್ರಕ್ರಿಯೆ ಕೊನೆಗೊಳ್ಳಲಿದೆ. ಈಗಾಗಲೇ ಒಂದು ಕಡೆ ಕರೋನಾ ಸೊಂಕು ಹರಡುವಿಕೆಯಿಂದ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್​ಡೌನ್​ಗೆ ಸಹಕರಿಸುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಅಣ್ಣಿಗೇರಿ ಎಪಿಎಂಸಿಯಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದವರು ಕಡಲೆ ಪ್ರಕ್ರಿಯೆ ನಿರಂತರವಾಗಿ ಮುಂದುವರಿಸಿದ್ದಾರೆ.

    ಎಪಿಎಂಸಿ ಖರೀದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಸಾಳುಂಕಿ ಮತ್ತು ಮಂಜುನಾಥ ಹೊಸಳ್ಳಿ ಅವರು, ರೈತರಿಂದ ಬೆಂಬಲ ಯೋಜನೆಗೆ ಅಗತ್ಯ ದಾಖಲೆ ಪಡೆದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ನೋಂದಣಿ ಮಾಡಿಸಿದ ರೈತರಿಂದ ಕಡಲೆ ಖರೀದಿಸುತ್ತಿದ್ದಾರೆ. ಖರೀದಿ ಕೇಂದ್ರದ ಎದುರು ನೂಕು ನುಗ್ಗಲು ಆಗದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಮೊಬೈಲ್ ಫೋನ್ ನಂಬರ್ ಪಡೆದಿದ್ದಾರೆ. ರೈತರು ಸಹ ನಿಯಮಾನುಸಾರವಾಗಿ ಕಡಲೆ ತಂದು ಮಾರಾಟ ಮಾಡುತ್ತಿದ್ದಾರೆ.

    ಕರೊನಾ ಮುಂಜಾಗ್ರತೆ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರೈತರಿಂದ ಕಡಲೆ ಖರೀದಿ ಪ್ರಕ್ರಿಯೆ ಮುಂದುವರಿಸಿದ್ದೇವೆ. ನೋಂದಣಿ ಮಾಡಿಸಿದ ರೈತರಿಗೆ ನಿಯಮಾಸಾರವಾಗಿ ರೈತರಿಂದ ಕಡಲೆ ಖರೀದಿಸುತ್ತಿದ್ದೇವೆ. ರೈತರು ಸಹಕಾರ ನೀಡಿದ್ದಾರೆ. ತಾಲೂಕಾಡಳಿತ ಮತ್ತು ಕೃಷಿ ಅಧಿಕಾರಿಗಳ ಮಾರ್ಗಸೂಚಿಯಂತೆ ಖರೀದಿ ಪ್ರಕ್ರಿಯೆ ನಡೆದಿದೆ.
    | ಬಸನಗೌಡ ಕುರಹಟ್ಟಿ
    ಅಧ್ಯಕ್ಷ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಅಣ್ಣಿಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts