More

    ಬೆಂಗಳೂರು ಬಸ್ ಭರ್ತಿ, ಉಳಿದೆಡೆ ಖಾಲಿ

    ಶಿರಸಿ: ಶಿರಸಿಯಲ್ಲಿ ಮಂಗಳವಾರದಿಂದ ದೂರದೂರುಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರು ಬಸ್ ಹೊರತುಪಡಿಸಿ ಉಳಿದ ಮಾರ್ಗಗಳ ಬಸ್​ಗಳು ಪ್ರಯಾಣಿಕರ ಕೊರತೆ ಅನುಭವಿಸಿವೆ.
    ಸಾರಿಗೆ ಸಂಸ್ಥೆಯು ಸೋಮವಾರ ರಾತ್ರಿಯಿಂದ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಿತ್ತು. ಒಂದು ತಾಸಿನಲ್ಲಿ ಶಿರಸಿ- ಬೆಂಗಳೂರು ಬಸ್​ಗಳ ಟಿಕೆಟ್​ಗಳು ಖಾಲಿಯಾದವು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬಸ್ ಹೊರಡುವ ಸಮಯ ನಿಗದಿಯಾಗಿತ್ತು. ಹೊಸ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಬಸ್​ನಲ್ಲಿ ಪ್ರಯಾಣಿಕರು ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣಿಸಿದರು. ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
    ಪರೀಕ್ಷೆ ಕಡ್ಡಾಯ: ಎಲ್ಲ ಬಸ್ ನಿಲ್ದಾಣದ ಆವರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯು ಪ್ರತಿಯೊಬ್ಬರನ್ನೂ ಪರೀಕ್ಷಿಸಿಯೇ ಬಸ್ ನಿಲ್ದಾಣದ ಒಳಗೆ ಬಿಟ್ಟರು. ಮಾಸ್ಕ್ ಕಡ್ಡಾಯಗೊಳಿಸಿದ್ದರು. ಸ್ಯಾನಿಟೈಸರ್ ಬಳಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಿದರು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು.
    ನಿಲ್ದಾಣದಲ್ಲೇ ನಿಂತ ಬಸ್: ಯಲ್ಲಾಪುರ ಬಸ್ ಘಟಕದಿಂದ ಎರಡು ತಿಂಗಳುಗಳ ನಂತರ ಮಂಗಳವಾರ ಬಸ್​ಗಳು ರಸ್ತೆಗಿಳಿದಿದ್ದರೂ, ಪ್ರಯಾಣಿಕರಿಲ್ಲದೆ ಬಹುತೇಕ ಬಸ್​ಗಳ ನಿಲ್ದಾಣದಲ್ಲೇ ನಿಲ್ಲುವಂತಾಯಿತು. ಹುಬ್ಬಳ್ಳಿಗೆ ಒಂದು ಬಸ್ ಮಾತ್ರ ಬಿಡಲಾಗಿದ್ದು, ಉಳಿದಂತೆ ಬೆಳಗಾವಿ, ಮುಂಡಗೋಡ, ಶಿರಸಿ ಭಾಗಕ್ಕೆ ಹೋಗುವ ಬಸ್​ಗಳು ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣದಲ್ಲೇ ನಿಂತಿದ್ದವು. 30 ಪ್ರಯಾಣಿಕರು ಇದ್ದರೆ ಮಾತ್ರ ಒಂದು ಊರಿಗೆ ಬಸ್ ಓಡಿಸುವುದಾಗಿ ಘಟಕದ ಅಧಿಕಾರಿಗಳು ಹೇಳಿದರು. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ ಬಸ್ ಓಡಿಸಲು ಸಾಧ್ಯವಾಗಿಲ್ಲ.
    ಕನಿಷ್ಠ 20 ಪ್ರಯಾಣಿಕರಿದ್ದರೆ ಓಡಾಟ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕಾರವಾರ ಘಟಕದಿಂದ ಮಂಗಳವಾರ ಹುಬ್ಬಳ್ಳಿ ಹಾಗೂ ಕುಮಟಾ ಮಾರ್ಗ ಸೇರಿ ಒಟ್ಟು ನಾಲ್ಕು ಬಸ್​ಗಳನ್ನು ಮಾತ್ರ ಓಡಿಸಲಾಗಿದೆ. ಕರೊನಾ ಲಾಕ್​ಡೌನ್ ನಂತರ ಕಾರವಾರದಿಂದ ಹುಬ್ಬಳ್ಳಿಗೆ ತೆರಳುವ ಮೊದಲ ಸಾಮಾನ್ಯ ಸಾರಿಗೆ ಬಸ್ ಅನ್ನು ಎನ್​ಡಬ್ಲ್ಯುಕೆಆರ್​ಟಿಸಿ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಬಸ್​ಗಳಿಗೆ ತಾಲೂಕು ಬಸ್ ನಿಲ್ದಾಣ ಹೊರತುಪಡಿಸಿ ನಡುವೆ ನಿಲುಗಡೆ ಇರಲಿಲ್ಲ. ಇನ್ನೂ ಕೆಲ ದಿನ ಸ್ಥಳೀಯ ಗ್ರಾಮೀಣ ಮಾರ್ಗಗಳಿಗೆ ಬಸ್ ಓಡಾಟದ ಸಾಧ್ಯತೆ ಕಡಿಮೆ. ಕಾರವಾರ-ಕುಮಟಾ, ಕಾರವಾರ-ಹುಬ್ಬಳ್ಳಿ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು, ಕನಿಷ್ಠ 20 ಪ್ರಯಾಣಿಕರಿದ್ದರೆ ಬಸ್ ಬಿಡಲಾಗುವುದು ಎಂದು ಕಾರವಾರ ಘಟಕ ವ್ಯವಸ್ಥಾಪಕ ರವೀಂದ್ರ ಫಾತರಫೇಕರ್ ತಿಳಿಸಿದ್ದಾರೆ.
    ಧಾರವಾಡ, ದಾಂಡೇಲಿಗೆ ಮಾತ್ರ ಸಂಚಾರ: ಧಾರವಾಡ ಸಾರಿಗೆ ವಿಭಾಗೀಯ ವಲಯಕ್ಕೆ ಬರುವ ಹಳಿಯಾಳ ಸಾರಿಗೆ ಘಟಕದಲ್ಲಿಯೂ ಬಸ್ ಸಂಚಾರ ಆರಂಭಿಸಲಾಯಿತು. ಬಸ್ ಬಂದು ಹೋಗಲು ಒಂದೇ ದ್ವಾರ ಮಾಡಲಾಗಿದ್ದು, ಅನಗತ್ಯವಾಗಿ ಸಾರ್ವಜನಿಕರು ಪ್ರವೇಶಿಸದಂತೆ ನಿಗಾ ವಹಿಸಲಾಗಿತ್ತು. ಹಳಿಯಾಳ ಘಟಕದಿಂದ ಬೆಳಗಾವಿ, ಧಾರವಾಡ, ಅಳ್ನಾವರ, ಯಲ್ಲಾಪುರ ಮತ್ತು ಕಲಘಟಗಿಗೆ ಬಸ್​ಗಳನ್ನು ಬಿಡಲು ಯೋಜಿಸಲಾಗಿತ್ತು. ಆದರೆ, ಧಾರವಾಡ ಮತ್ತು ದಾಂಡೇಲಿಗೆ ಮಾತ್ರ ಬಸ್​ಗಳು ಹೋಗಿವೆ. ಉಳಿದ ರೂಟ್​ಗಳಿಗೆ ಪ್ರಯಾಣಿಕರಿಲ್ಲದೆ ಬಸ್​ಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ಎಲ್.ಎಚ್. ರಾಥೋಡ ತಿಳಿಸಿದರು.
    ತೆಂಗಿನಕಾಯಿ ಒಡೆದು ಬಸ್ ಏರಿದ ಚಾಲಕರು
    ಕುಮಟಾ ಮುಖ್ಯ ಬಸ್ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ ಚಾಲಕರು ಬಸ್ ಎದುರು ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಘಟಕ ವ್ಯವಸ್ಥಾಪಕಿ ಸೌಮ್ಯಾ ನಾಯಕ ‘ವಿಜಯವಾಣಿ’ ಜತೆ ಮಾತನಾಡಿ, ‘ಈಗಾಗಲೇ ಶಿರಸಿಗೆ ಒಂದು ಬಸ್ ಬಿಡಲಾಗಿದೆ. ಕಾರವಾರ, ಅಂಕೋಲಾ, ಗೋಕರ್ಣ, ಶಿರಸಿ, ಹೊನ್ನಾವರ, ಹುಬ್ಬಳ್ಳಿಗೆ ಬಸ್ ಸಂಚಾರ ಒದಗಿಸುವ ಯೋಜನೆಯೊಂದಿಗೆ ಕಾರ್ಯಪ್ರವೃತ್ತವಾಗಿದ್ದೇವು. ಪ್ರಯಾಣಿಕರ ಕೊರತೆಯಿಂದ ಈ ಬಸ್​ಗಳನ್ನು ಓಡಿಸಲಿಲ್ಲ. ಕುಮಟಾದಿಂದ ಬೆಂಗಳೂರಿಗೆ ಕೂಡ ಬುಧವಾರ ಬೆಳಗ್ಗೆ ಬಸ್ ಬಿಡಲಾಗುತ್ತಿದ್ದು ಸಾಕಷ್ಟು ಪ್ರಯಾಣಿಕರು ಈಗಾಗಲೇ ಆನ್​ಲೈನ್ ಮೂಲಕ ಸೀಟು ಕಾದಿರಿಸಿದ್ದಾರೆ. ಪ್ರಯಾಣಿಕರ ಸ್ಪಂದನೆ ಗಮನಿಸಿ ಬಸ್ ಸಂಚರಿಸಲಿವೆ ಎಂದು ತಿಳಿಸಿದರು.
    ಹಲವು ಮಾರ್ಗಗಳ ಬಸ್ ಬಂದ್: ದಾಂಡೇಲಿಯಿಂದ ಕಾರವಾರ, ಯಲ್ಲಾಪುರ, ರಾಮನಗರ, ಜೊಯಿಡಾ, ಕುಮಟಾ ಮಾರ್ಗಗಳಿಗೆ ಬಸ್ ಸಂಚಾರ ನಡೆಸುತ್ತದೆ ಎಂದು ಹೇಳಲಾಗಿತ್ತು. ಆದರೆ, ಧಾರವಾಡಕ್ಕೆ 4 ಬಸ್ಸುಗಳು ಮಾತ್ರ ಸಂಚಾರ ನಡೆಸಿದವು. ಪ್ರಯಾಣಿಕರ ಕೊರತೆಯಿಂದ ಉಳಿದ ಮಾರ್ಗಗಳ ಬಸ್ ಸಂಚಾರ ನಡೆಸಲಿಲ್ಲ.
    ಗೋಕರ್ಣಕ್ಕೆ ಬಾರದ ಬಸ್: ಮಂಗಳವಾರ ಬಸ್ ಸಂಚಾರ ಪ್ರಾರಂಭ ಮಾಡುವುದಾಗಿ ತಿಳಿಸಲಾಗಿದ್ದರೂ ಗೋಕರ್ಣದಲ್ಲಿ ಮಾತ್ರ ಬಸ್ ನಿಲ್ದಾಣ ಖಾಲಿಯಾಗಿತ್ತು. ಯಾವ ಡಿಪೋದಿಂದಲೂ ಗೋಕರ್ಣಕ್ಕೆ ಬಸ್ ಆಗಮಿಸಲಿಲ್ಲ. ಈ ನಡುವೆ ಮಂಗಳವಾರ ಮಧ್ಯಾಹ್ನದಿಂದ ಇಲ್ಲಿನ ನಿಲ್ದಾಣದಲ್ಲಿ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲಾಯಿತು. ಪ್ರಯಾಣಿಕರ ಗುರುತು ಪಡೆಯುವ ಕೌಂಟರ್ ಮತ್ತು ಆರೋಗ್ಯ ತಪಾಸಣೆ ಬಗ್ಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಪ್ರಯಾಣಿಕರು ಸರದಿಯಲ್ಲಿ ಬಸ್ ಹತ್ತಲು ಲೈನ್ ಹಾಕಬೇಕಾಗಿದೆ.
    ಆಧಾರ್ ಕಾರ್ಡ್ ಪಡೆದು ಪ್ರಯಾಣಿಕರ ನೋಂದಣಿ
    ಎಲ್ಲ ಬಸ್ ನಿಲ್ದಾಣದಲ್ಲೂ ಥರ್ಮಲ್ ಸ್ಕ್ರೀನಿಂಗ್
    ಅನಗತ್ಯ ಪ್ರವೇಶಕ್ಕೆ ನಿರಾಕರಣೆ
    ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ
    ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಿದ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts