More

    ಬೃಹತ್ ಬೈಕ್ ಜಾಥಾ

    ಚಾಮರಾಜನಗರ: ಬಿಜೆಪಿ ಜಿಲ್ಲಾ ಯುವ ಸಮಾವೇಶದ ಅಂಗವಾಗಿ ಶುಕ್ರವಾರ ಗುಂಡ್ಲುಪೇಟೆಯ ತಾಲೂಕಿನ ಬೇಗೂರಿನಿಂದ ಗುಂಡ್ಲುಪೇಟೆ ಪಟ್ಟಣದವರೆಗೆ ಬೃಹತ್ ಬೈಕ್ ರ‌್ಯಾಲಿ ನಡೆಸಲಾಯಿತು.
    ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು 800ಕ್ಕೂ ಹೆಚ್ಚಿನ ಬೈಕ್‌ಗಳಲ್ಲಿ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಮಾಡಲು ಪೊಲೀಸರು ಹರಸಾಹಸಪಟ್ಟರು. ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳದಲ್ಲಿ ಬೀಡುಬಿಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದರು.
    ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಬೆಂಗಳೂರಿನ ಅವರ ಯಡಿಯೂರಪ್ಪ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಿನ ಉಪಾಹಾರಕ್ಕೆ ಆಗಮಿಸಿದ್ದರಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸುಮಾರು ಎರಡು ಗಂಟೆ ತಡವಾಗಿ ಸಮಾವೇಶಕ್ಕೆ ಆಗಮಿಸಿದರು. ಆದರೂ ಜನತೆ ತಾಳ್ಮೆ ಕಳೆದುಕೊಳ್ಳದೆ ಉರಿ ಬಿಸಿಲಿನನಲ್ಲೇ ಕಾದು ನಿಂತಿದ್ದರು. 12.30ಕ್ಕೆ ಆಗಮಿಸಿದ ವಿಜಯೇಂದ್ರಗೆ ಬೇಗೂರಿನಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಭವ್ಯವಾದ ಸ್ವಾಗತ ಕೋರಿದರು. ಕಾರಿನ ಮೇಲೆ ಹೂಮಳೆಗರೆದು ರಾಜಾಹುಲಿ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆ ಕೂಗಿದರು.


    ಗ್ರಾಮದ ಕಮರಹಳ್ಳಿ ರಸ್ತೆಯ ಬಳಿ ಬೈಕ್ ರ‌್ಯಾಲಿಗೆ ವಿಜಯೇಂದ್ರ ಚಾಲನೆ ನೀಡಿದರು. ತೆರೆದ ವಾಹನದ ಮೇಲೆ ಶಾಸಕರಾದ ಸಿ.ಎಸ್.ನಿರಂಜನಕುಮಾರ್, ಎನ್.ಮಹೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಎಪಿಎಂಸಿ ಅಧ್ಯಕ್ಷ ರವಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಿರೀಕಾಟಿ ಸೋಮಶೇಖರ್, ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಶಕ್ತಿಕೇಂದ್ರದ ಅಧ್ಯಕ್ಷರ ಜತೆಗೂಡಿ ರೋಡ್ ಶೋ ನಡೆಸಿದರು.
    ಬಿಜೆಪಿ ಕಾರ್ಯಕರ್ತರು ಗ್ರಾಮದ ಬಸ್ ನಿಲ್ದಾಣದ ಬಳಿ ಬೃಹತ್ ಸೇಬಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಸೇಬು ಕಿತ್ತುಕೊಳ್ಳಲು ನೂಕುನುಗ್ಗುಲು ಉಂಟಾಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ನಂತರ ಮಾಡ್ರಹಳ್ಳಿ ಹಾಗೂ ವೀರನಪುರ ಗ್ರಾಮಸ್ಥರು ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು.

    ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಕಲರವ
    ದಿ.ಎಚ್.ಎಸ್.ಮಹದೇವಪ್ರಸಾದ್ ಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆಯಾದ ಬೇಗೂರಿನಲ್ಲಿ ಶುಕ್ರವಾರ ಬಿಜೆಪಿ ಬೃಹತ್ ಬೈಕ್ ರ‌್ಯಾಲಿ ಆಯೋಜಿಸುವ ಮೂಲಕ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಕಳೆದಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಾಗೂ ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಗಳಿಂದ ಬೀಗುತ್ತಿದ್ದ ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಬೇಗೂರಿನಲ್ಲಿ ಬೈಕ್ ರ‌್ಯಾಲಿಗೆ ಆಗಮಿಸಿದ್ದ ಜನಸ್ತೋಮ ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts