More

    ಬೃಂದಾವನದಲ್ಲಿ ಕೊನೆಗೂ ಬಲೆಗೆ ಬಿದ್ದ ಚಿರತೆ

    ಕೆ.ಆರ್.ಸಾಗರ: ಕೃಷ್ಣರಾಜಸಾಗರದ ಬೃಂದಾವನದಲ್ಲಿ ಕಳೆದ ಎರಡು ತಿಂಗಳಿಂದ ಬಲೆಗೆ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಪದೇ ಪದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.
    ಕಳೆದ ಅಕ್ಟೋಬರ್‌ನಲ್ಲಿ ಬೃಂದಾವನದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗಾಗಿ ಅರಣ್ಯ ಸಿಬ್ಬಂದಿ ಕಳೆದೆರಡು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಚಿರತೆ ಮಾತ್ರ ಬಲೆಗೆ ಬಿದ್ದಿರಲಿಲ್ಲ. ಇದೀಗ ಉತ್ತರ ಬೃಂದಾವನದ ಹಣ್ಣಿನ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

    ಬುಧವಾರ ಬೆಳಗ್ಗೆ ಗಸ್ತಿನಲ್ಲಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಉಸ್ತುವಾರಿ ಅಧಿಕಾರಿ ಸಂತೋಷ್ ಮತ್ತು ಸಿಬ್ಬಂದಿ ಚಿರತೆ ಸೆರೆಯಾಗಿರುವ ಬಗ್ಗೆ ಅರಣ್ಯ ಇಲಾಖೆ, ಕಾ.ನೀ.ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಎ.ಸಿ.ಎಫ್ ಶಂಕರೇಗೌಡ , ಪಾಂಡವಪುರ ವಿಭಾಗದ ಆರ್.ಎಫ್.ಒ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆ ಸೆರೆಯಾಗಿದ್ದ ಬೋನನ್ನು ಸುರಕ್ಷಿತ ಪಡಿಸಿದರು. ಬೋನಿನಲ್ಲಿದ್ದ ನಾಯಿಯನ್ನು ಬಿಡುಗಡೆ ಮಾಡಿದರು.

    ಚಿರತೆಯನ್ನು ಗೂಡ್ಸ್ ವಾಹನದ ಮೂಲಕ ಮೈಸೂರು ಪ್ರಾಣಿ ಸಂಗ್ರಹಾಲಯಯ ಪುರ್ನವಸತಿ ಕೇಂದ್ರಕ್ಕೆ ಸಾಗಿಸಲಾಗುವುದು. ಬಳಿಕ ಪಶು ವೈದ್ಯಕೀಯ ಅಧಿಕಾರಿಗಳಿಂದ ಆರೋಗ್ಯ ಪರಿಶೀಲಿಸಿ ಡಿಸಿಎಫ್ ಸೂಚಿಸಿದ ಅರಣ್ಯದಲ್ಲಿ ಚಿರತೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

    ಆರ್‌ಎಫ್‌ಒ ಪುಟ್ಟಸ್ವಾಮಿ, ಕೆ.ಎಸ್.ಐ.ಎಸ್.ಎಫ್ ಉಸ್ತುವಾರಿ ಅಧಿಕಾರಿ ಸಂತೋಷ್, ಕಾ.ನೀ.ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿಶೋರ್ ಕುಮಾರ್, ಕಿರಿಯ ಅಭಿಯಂತರ ಗಣೇಶ್, ಅರಣ್ಯ ಇಲಾಖೆ ಡಿ.ಆರ್.ಒ ಇಮ್ರಾನ್, ಫಾರೆಸ್ಟ್ ಗಾರ್ಡ್ ಧನಂಜಯ, ಲವಕುಮಾರ್, ವೀರಭದ್ರಪ್ಪ, ಕುಮಾರ, ಸ್ವಾಮಿ, ಪ್ರಸನ್ನ, ಡ್ರೈವರ್ ಮಂಜು ಇದ್ದರು.

    1 ತಿಂಗಳು ಪ್ರವಾಸಿಗರಿಗೆ ನಿಷೇಧ
    ಅಕ್ಟೋಬರ್ 22 ರಂದು ಬೃಂದಾವನದಲ್ಲಿ ಚಿರತೆ ಓಡಾಟದ ಕುರಿತು ಕಾವೇರಿ ನೀರಾವರಿ ನಿಗಮ ಸಿಬ್ಬಂದಿ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬೃಂದಾವನದ ಎರಡು ಭಾಗದಲ್ಲಿ 8 ಬೋನು ಹಾಗೂ 25ಕ್ಕೂ ಹೆಚ್ಚು ಟ್ರಾೃಪ್ ಕ್ಯಾಮರಾ ಇರಿಸಿ ಕೂಬಿಂಗ್ ಸಮೇತ ಕಾರ್ಯಾಚರಣೆ ನಡೆಸಿದರೂ ಚಿರತೆ ಸಿಕ್ಕಿರಲಿಲ್ಲ. ಚಿರತೆ ಚಲನ-ವಲನ ಹಿನ್ನೆಲೆಯಲ್ಲಿ ಹಾಗೂ ಪ್ರವಾಸಿಗರ ಸುರಕ್ಷತೆ ಸಂಬಂಧ ಬೃಂದಾವನಕ್ಕೆ ನವೆಂಬರ್1 ರಿಂದ 3 ರತನಕ ಪ್ರವಾಸಿಗರಿಗೆ ಒಂದು ತಿಂಗಳು ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಚಿರತೆ ಸೆರೆಯಾಗದ ಕಾರಣ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಡಿಸೆಂಬರ್ 1 ರಿಂದ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts