More

    ಬೂತ್ ವಿಜಯ್ ಅಭಿಯಾನ ಇಂದಿನಿಂದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

    ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಬೂತ್​ಗಳಲ್ಲಿ ಬಿಜೆಪಿ ಉಳಿದವರಿಗಿಂತ ಕನಿಷ್ಠ ಒಂದು ಮತ ಹೆಚ್ಚು ಪಡೆಯಬೇಕು, ಅದಕ್ಕಾಗಿ ಸಶಕ್ತೀಕರಣ ಮಾಡಲಾಗಿದೆ. ಅಲ್ಲದೇ ಜ. 2ರಿಂದ 12ರವರೆಗೆ ರಾಜ್ಯದಲ್ಲಿ ಬೂತ್ ವಿಜಯ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿ ನಂತರ ಅನೇಕ ಸಂಘಟನಾತ್ಮಕ ಸಭೆಗಳನ್ನು ನಡೆಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕಡಿಮೆ ಮತಗಳು ಬಂದಿರುವ ಬೂತ್​ಗಳನ್ನು ಗುರುತಿಸಿ ಅಲ್ಲಿ ಪಕ್ಷ ಬಲಪಡಿಸಲು ಒತ್ತು ನೀಡಲಾಗುತ್ತಿದೆ ಎಂದರು.

    ಬಿಜೆಪಿ ಸರ್ಕಾರ ನೀಡಿದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಭಿಯಾನದ ಉದ್ದೇಶ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಪಕ್ಷದ 25 ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಧ್ವಜ ಹಾರಬೇಕು. ರಾಜ್ಯದಲ್ಲಿ ಒಟ್ಟು 50 ಲಕ್ಷ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವ ಗುರಿ ಇದೆ. 20 ಲಕ್ಷ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ಜೋಡಿಸಲಾಗಿದೆ ಎಂದರು.

    ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿ ಪಕ್ಷದ ಹಿರಿಯರು ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಈ ಮೂಲಕ ಶೇ. ನೂರರಷ್ಟು ಮತದಾನವಾಗಿಸುವ ಉದ್ದೇಶ ಹೊಂದಲಾಗಿದೆ. ಜ. 21ರಿಂದ 29ರ ವರೆಗೆ ಮನೆಮನೆಗೆ ಬಿಜೆಪಿ ಅಭಿಯಾನ ಶುರುವಾಗಲಿದೆ ಎಂದರು.

    12ರಂದು ಪ್ರಧಾನಿ ಕಾರ್ಯಕ್ರಮ: ಜನವರಿ 12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಾರೆ. ರೈಲ್ವೆ ಮೈದಾನದಲ್ಲಿ ಅಂದು ಮಧ್ಯಾಹ್ನ 2.30ಕ್ಕೆ ಆಯೋಜನೆಯಾಗಿರುವ ಯುವ ಸಮಾವೇಶ ಉದ್ಘಾಟಿಸುವರು. ಇದರಲ್ಲಿ ದೇಶದ ವಿವಿಧೆಡೆಯ 30 ವರ್ಷದೊಳಗಿನ ಸುಮಾರು 8 ಸಾವಿರ ಯುವಕರು ಭಾಗಿಯಾಗುವರು. ಇದೊಂದು ಬೃಹತ್ ಸಮಾವೇಶ ಆಗಲಿದೆ. ನಂತರ ಐದು ದಿನ ಧಾರವಾಡದಲ್ಲಿ ಯುವಜನೋತ್ಸವ ನಡೆಯಲಿದೆ. ಇದರಲ್ಲಿ ಒಂದು ದಿನ ಜನಪ್ರಿಯ ಬಾಲಿವುಡ್ ನಟ ಅಕ್ಷಯ ಕುಮಾರ ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

    ಶೀಘ್ರ ಕಳಸಾ ಬಂಡೂರಿ ಜಾರಿ: ಮಹದಾಯಿ ಉಪನದಿಗಳಾದ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯ ಕಾಮಗಾರಿಗೆ ಎರಡು ತಿಂಗಳಲ್ಲಿ ಟೆಂಡರ್ ಕರೆದು ಆರಂಭಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಮಾಡಿಕೊಳ್ಳುತ್ತಿದೆ. ಇದರಲ್ಲಿ ಸಮಸ್ಯೆ ಇಲ್ಲ. ವಿನಾಕಾರಣ ಕಾಂಗ್ರೆಸ್​ನವರು ಹುಳುಕು ಹುಡುಕುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

    ಕಾಂಗ್ರೆಸ್​ನವರಿಗೆ ಮಹಾತ್ಮ ಗಾಂಧಿ ಬಗ್ಗೆ ಗೌರವ, ಹೆಮ್ಮೆ ಇದ್ದರೆ ಅವರು ಹೇಳಿದಂತೆ ಪಕ್ಷ ವಿಸರ್ಜನೆ ಮಾಡಬೇಕು. ಈಗಿರುವುದು ಕಾಂಗ್ರೆಸ್ ಅಲ್ಲ, ಇಟಾಲಿಯನ್ ಪಾರ್ಟಿ. ಕಸಬ್​ಗೆ ಬಿರಿಯಾನಿ ತಿನ್ನಿಸಿದವರು ಭಯೋತ್ಪಾದನೆ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅವರು ತಮ್ಮ ಆಸ್ತಿ ಘೋಷಣೆ ಮಾಡಲಿ ಎಂದರು.

    ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಎಲ್ಲ ವರದಿಗಳನ್ನು ಆಧರಿಸಿ ಕ್ರಮ ಕೈಗೊಂಡಿದೆ. ಮುಂದೆಯೂ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಿದೆ. ರಾಜ್ಯದ ನಂದಿನಿ ಹಾಗೂ ಗುಜರಾತ್​ನ ಅಮೂಲ್ ಕಂಪನಿ ವಿಲೀನ ಮಾಡುವ ಯಾವುದೇ ಪ್ರಸ್ತಾಪ ಇಲ್ಲ. ಅಮಿತ್ ಷಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಎರಡೂ ಸಂಸ್ಥೆಗಳು ಜತೆಗೂಡಿ ಮಾರ್ಕೆಟಿಂಗ್ ಸಹಕಾರದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ ಎಂದು ಸಚಿವರು ಪ್ರಶ್ನೆಗಳಿಗೆ ಉತ್ತರಿಸಿದರು.

    ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ರವಿ ನಾಯಕ್, ದತ್ತಮೂರ್ತಿ ಕುಲಕರ್ಣಿ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts