More

    ಬುದ್ಧಿವಂತರಿಂದ ದೇಶ ಉದ್ಧಾರ

    ಮುಂಡರಗಿ: ಶಿಕ್ಷಣವಂತರಿಂದ ದೇಶ ಉದ್ಧಾರವಾಗುವುದಿಲ್ಲ. ಬುದ್ಧಿವಂತರಿಂದ ದೇಶ ಉದ್ಧಾರವಾಗುತ್ತದೆ. ಗುರುವಿನ ದಿವ್ಯ ಕೃಪಾದೃಷ್ಟಿ ತುಂಬಾ ದೊಡ್ಡದು. ಡಾ.ಅನ್ನದಾನೀಶ್ವರ ಸ್ವಾಮೀಜಿಯವರು ಸಾಹಿತ್ಯದಲ್ಲಿ ಮೇರು ಪರ್ವತವಿದ್ದಂತೆ ಅವರು ಶಬ್ಧಬ್ರಹ್ಮ ಎಂದು ಶಿರಸಿ ಬಣ್ಣದಮಠದ ಶ್ರೀ ಅಟವಿಶಿವಲಿಂಗ ಸ್ವಾಮೀಜಿ ಹೇಳಿದರು.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 152ನೇ ಯಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ‘ಪ್ರಕೃತಿಯನ್ನು ನಾಶ ಮಾಡುತ್ತಿರುವುದರ ಫಲವಾಗಿ ಕರೊನಾದಂತಹ ರೋಗ ಹರಡುತ್ತಿದೆ. ಪ್ರಾಣಿಗಳನ್ನು ನಾಶ ಮಾಡುತ್ತಿರುವುದರಿಂದ ಅವುಗಳ ಶಾಪದ ಪರಿಣಾಮವಾಗಿ ವಾಸಿಯಾಗದ ಕಾಯಿಲೆಗಳು ಬರುತ್ತಿವೆ. ಎಲ್ಲಿಯವರೆಗೂ ಪ್ರಾಣಿ ವದೆ, ಮದ್ಯಪಾನ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಹೊಸ ಕಾಯಿಲೆಗಳು ಉದ್ಭವವಾಗುತ್ತವೆ. ಪ್ರಕೃತಿಯನ್ನು ಹಾಳು ಮಾಡದೆ, ಗೋಹತ್ಯೆ ನಿಷೇಧಿಸಿ, ಮದ್ಯಪಾನ ನಿಲ್ಲಿಸಬೇಕು. ಆರೋಗ್ಯವಾಗಿದ್ದರೆ ಐಶ್ವರ್ಯ ವೃದ್ಧಿಯಾಗುತ್ತದೆ’ ಎಂದರು.

    ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಸ್ವೀಕರಿಸಿದ ಶ್ರೀಮಠದ ಉತ್ತರಾಧಿಕಾರಿ ಹಾಗೂ ಘಟಪ್ರಭಾ ಕೆಂಪಯ್ಯಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇವರಿಗೆ ನಿಜವಾದ ಭಕ್ತಿ ಬೇಕು. ಗುರುವಿನ ಆಶೀರ್ವಾದ ತುಂಬಾ ದೊಡ್ಡದು. ಗುರುವಿನ ಸ್ಥಾನವೇ ಶ್ರೇಷ್ಠವಾದ ಸ್ಥಾನ. ದೇಶಕ್ಕೆ ಗುರು, ಶಿಷ್ಯರ ಸಂಬಂಧ ಬಹುದೊಡ್ಡದಿದೆ. ಗುರುವನ್ನು ನಿಂದಿಸಿ ಅವಮಾನಿಸಿದರೆ ತಕ್ಕ ಶಾಸ್ತಿ ಪಡಬೇಕಾಗುತ್ತದೆ. ಡಾ.ಅನ್ನದಾನೀಶ್ವರ ಶ್ರೀಗಳಿಗೆ ಉತ್ತಮ ಶಿಷ್ಯನಾಗಿ ಶ್ರೀಮಠದ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

    ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧರ್ಮದ ಪರಿಕಲ್ಪನೆ ನಮ್ಮೆಲ್ಲರಿಗೂ ಆಗಬೇಕು. ಯಾರು ಪರಮ ಸಂತೋಷ ಅನುಭವಿಸುತ್ತಿದ್ದಾನೋ ಅಂಥವರಿಂದ ಧರ್ಮ ಬೋಧನೆ ಕೇಳಬೇಕು ಎಂದರು.

    ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ರಚನೆಯ ಅಂತ್ಯೇಷ್ಠಿ ವಿಧಾನ ಮತ್ತು ಶ್ರೀ ಚನ್ನಬಸವರ ಕರಣ ಹಸಿಗೆ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಇತರರು ಮಾತನಾಡಿದರು. ಬನ್ನಿಕೊಪ್ಪ ಜಗದ್ಗುರು ಅನ್ನದಾನೀಶ್ವರ ಶಾಲೆಯ ವಿದ್ಯಾರ್ಥಿಗಳು ಹಾಗೂ ಮತ್ತಿತರ ಮಕ್ಕಳು ವಚನ ನೃತ್ಯ ಪ್ರಸ್ತುತ ಪಡಿಸಿದರು. ಅಕ್ಷತಾ ಬಣ್ಣದಬಾವಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

    ಶ್ರೀ ಚನ್ನವೀರ ಸ್ವಾಮೀಜಿ, ಡಾ.ಚನ್ನಮಲ್ಲ ಸ್ವಾಮೀಜಿ, ಶ್ರೀವೀರೇಶ್ವರ ಶಿವಾಚಾರ್ಯರು, ಶ್ರೀಶಾಂತವೀರ ಸ್ವಾಮೀಜಿ, ಯು.ಸಿ. ಹಂಪಿಮಠ, ಟಿ.ಬಿ. ದಂಡಿನ, ಶರಣಪ್ಪ ಕುಬಸದ, ಡಾ. ಬಿ.ಜಿ. ಜವಳಿ ಇತರರು ಇದ್ದರು. ಶಿಕ್ಷಕರಾದ ಎಸ್.ಆರ್. ರಿತ್ತಿ, ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts