More

    ಬುಡಾ ಹಗರಣ ಸಿಐಡಿ ತನಿಖೆಗೆ – ಸಚಿವ ಸತೀಶ ಜಾರಕಿಹೊಳಿ

    ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಸಿಐಡಿ ತನಿಖೆಗೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಬುಡಾದಲ್ಲಿ 20ರಿಂದ 25 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.

    ಅಧಿಕಾರಿಗಳು ಹೇಳುವ ಪ್ರಕಾರ ಎರಡು ಸಾರಿ ನೋಟಿಪಿಕೇಷನ್ ಮಾಡಿದರೂ ಜನ ಬಂದಿಲ್ಲ. ಬರದೆ ಇದ್ದರೆ ಹರಾಜು ಮಾಡಲು ನಿಯಮವಿದೆ ಎನ್ನುತ್ತಾರೆ. ಅದು ಸರಿ ಇರಬಹುದು. ಆದರೆ, ನಮ್ಮ ವಾದ ಪಕ್ಕದ ಆಸ್ತಿ 1 ಕೋಟಿ ರೂ. ಬೆಲೆಗೆ ಮಾರಾಟವಾಗುತ್ತದೆ, ಆದರೆ ಬುಡಾ ಮಾರಾಟ ಮಾಡಿದ್ದು 25 ಲಕ್ಷ ರೂ.ಗೆ. ಸುಮಾರು 100 ಕೋಟಿ ರೂ. ನಷ್ಟವಾಗಿದೆ.

    ಯಾವುದೇ ಕಾರಣಕ್ಕೂ ಈ ಪ್ರಕರಣ ಬಿಡುವ ಮಾತೇ ಇಲ್ಲ ಎಂದರು. ದೊಡ್ಡ ಜಿಲ್ಲೆ ಬೆಳಗಾವಿ ಮುನ್ನಡೆಸುವುದು ಸುಲಭವಲ್ಲ. ಹಾಗಾಗಿ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಮಾಡಲೇಬೇಕಾಗಿದೆ. 50 ಲಕ್ಷ ಜನ, 18 ಶಾಸಕರು, ಎರಡೂವರೆ ಸಂಸದರು ಇರುವ ಜಿಲ್ಲೆಯನ್ನು ಮುನ್ನಡೆಸುವುದು ಸವಾಲಿನ ಕೆಲಸ. ಹಾಗಾಗಿ. ಜಿಲ್ಲೆ ವಿಭಜನೆಯಾಗಲೇಬೇಕು. ಮಾಡೇ ಮಾಡುತ್ತೇವೆ ಎಂದರು.

    ಎರಡು ಜಿಲ್ಲೆ ಕೇಳಲಿ, ಮೂರು ಜಿಲ್ಲೆ ಕೇಳಲಿ, ಕೇಳಲು ಎಲ್ಲರಿಗೂ ಹಕ್ಕಿದೆ. ಆದರೆ ಅಂತಿಮ ತೀರ್ಮಾನ ಸರ್ಕಾರದ್ದು. ಬೆಳಗಾವಿ, ಚಿಕ್ಕೋಡಿ, ಗೋಕಾಕ ಮೂರು ಜಿಲ್ಲೆಯಾದರೂ ಸತೀಶ್ ಜಾರಕಿಹೊಳಿಗೆ ಪ್ರವೇಶವಿದೆ. ಗೋಕಾಕದಲ್ಲಿ, ಬೆಳಗಾವಿಯಲ್ಲಿ ನನ್ನ ಮನೆಯಿದೆ. ಚಿಕ್ಕೋಡಿಯಲ್ಲಿ ನನ್ನ ವಿಧಾನಸಭಾ ಕ್ಷೇತ್ರವಿದೆ ಎಂದು ಸತೀಶ್ ಮುಗುಳು ನಗೆ ಬೀರಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲೆಗೆ ನಮ್ಮ ಬೇಡಿಕೆ ಇದೆ ಎಂದರು. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಇದಕ್ಕೆ ಮೊದಲಿನಿಂದಲೂ ನನ್ನ ವಿರೋಧವಿದೆ. ಒಬ್ಬ ಅಧಿಕಾರಿ ಇಲ್ಲಿ ಬಂದರೆ ಮತ್ತೊಬ್ಬ ಬೆಂಗಳೂರಲ್ಲೇ ಇರುತ್ತಾನೆ.

    ಇಲ್ಲೊಬ್ಬ ಅಧಿಕಾರಿ ಸಹಿ ಹಾಕಿದರೆ ಮತ್ತೊಂದು ಸಹಿ ಆಗುವುದೇ ಇಲ್ಲ. ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲದ್ದು. ಇದಕ್ಕೆ ನಾನು ಯಾವತ್ತೂ ವಿರೋಧಿ. ಅದರ ಬದಲು ವಿವಿಧ ಸಭೆಗಳನ್ನು ನಡೆಸುವ ಮೂಲಕ ಸುವರ್ಣ ವಿಧಾನಸೌಧವನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ. ಸಂಪುಟ ಸಭೆಗಳನ್ನು ಇಲ್ಲಿ ನಡೆಸಲು ಪ್ರಯತ್ನಿಸುತ್ತೇವೆ ಎಂದರು.

    ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಹೊಸ ಶಿಕ್ಷಣ ನೀತಿಗೆ ನಮ್ಮ ಸರ್ಕಾರದ ವಿರೋಧ ಇದೆ. ಪಠ್ಯಕ್ರಮದಲ್ಲಿನ ಅನವಶ್ಯಕ ವಿಷಯಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು. ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಮಹೇಂದ್ರ ತಮ್ಮಣ್ಣವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts