More

    ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗೆ ಬದ್ಧ : ಬಿ.ಶ್ರೀರಾಮುಲು

    ಮೈಸೂರು: ಬುಡಕಟ್ಟು ಸಮುದಾಯದ ಜನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
    ಮೈಸೂರು ವಿಶ್ವವಿದ್ಯಾಲಯ ವಿಜ್ಞಾನ ಭವನದಲ್ಲಿ ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ‘ಕೊರಗ ಮತ್ತು ಸೋಲಿಗ ಬುಡಕಟ್ಟು ಸಮುದಾಯಗಳ ಭಾಷೆಗಳಲ್ಲಿ ಪ್ರಾಥಮಿಕೆಗಳ ರಚನೆ ಕುರಿತ ಕಾರ್ಯಾಗಾರ’ ಉದ್ಘಾಟಿಸಿ ವಾತನಾಡಿದರು.
    ರಾಜ್ಯದಲ್ಲಿ ಸಾಕಷ್ಟು ಬುಡಕಟ್ಟು ಸಮುದಾಯಗಳಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಅವುಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡಲು ಗಮನಹರಿಸುತ್ತೇನೆ. ಬುಡಕಟ್ಟು ಜನರಿಗೆ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹಾಗಾಗಿ, ಬುಡಕಟ್ಟು ಜನರ ಶಿಕ್ಷಣ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ 1,471 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
    ನಾನು ಸಮಾಜ ಕಲ್ಯಾಣ ಸಚಿವನಾಗಿ ಜವಾಬ್ದಾರಿ ಹೊತ್ತ ಬಳಿಕ ಹಲವಾರು ಜನರೊಂದಿಗೆ ಚರ್ಚಿಸಿ ಮಾಹಿತಿ, ಅಭಿಪ್ರಾಯ ಪಡೆದಿದ್ದೇನೆ. ಬುಡಕಟ್ಟು ಸಮುದಾಯದಿಂದ ಬಂದಿರುವ ಕಾರಣ ನನಗೂ ಹಲವಾರು ಸಮಸ್ಯೆಯ ಬಗ್ಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಹಂತಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
    ಪರಿವಾರ-ತಳವಾರ ಪದಗಳನ್ನು ಎಸ್ಟಿಗೆ ಸೇರಿಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ನೀಡಿದ್ದರಿಂದ ಕೇಂದ್ರ ಸರ್ಕಾರ ಪರಿಗಣಿಸಿ ಎಸ್ಟಿಗೆ ಸೇರಿಸಲು ಸಹಕಾರಿಯಾಯಿತು. ಅದೇ ರೀತಿ ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ ನಡೆಸಿ ಅವರ ಸ್ಥಿತಿಗತಿಯನ್ನು ಬದಲಿಸಲು ಕೊಡುವ ವರದಿಯನ್ನು ಸ್ವೀಕರಿಸಿ ಅದರಂತೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
    ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಜನರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸಬೇಕಿದೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ತಲುಪಿಸಬೇಕಾಗಿದೆ. ನಶಿಸಿ ಹೋಗುತ್ತಿರುವ ಬುಡಕಟ್ಟು ಜನರ ಜೀವನ ಶೈಲಿ, ಆಚಾರ-ವಿಚಾರಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
    ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ ಮಾತನಾಡಿ, ರಾಜ್ಯದಲ್ಲಿ 121 ಗಿರಿಜನ ಆಶ್ರಮ ಶಾಲೆಗಳಿದ್ದು, ಅವುಗಳ ಸ್ಥಿತಿಗತಿಯ ಕುರಿತು ಅಧ್ಯಯನ ನಡೆಸಿ ವರದಿ ಕೊಡಲಾಗಿದೆ. ದೇಶದಲ್ಲಿ ಮೂರು ಸಾವಿರ ಭಾಷೆಗಳಿವೆ. ಅದರಲ್ಲಿ 50 ಭಾಷೆಗಳು ಬುಡಕಟ್ಟು ಸಮುದಾಯಕ್ಕೆ ಸೇರಿದೆ. ಇವುಗಳನ್ನು ದಾಖಲಿಸದಿದ್ದಲ್ಲಿ ಉಳಿಸುವುದು ಕಷ್ಟ ಎಂದರು.
    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇರುವ ಕೊರಗ ಸಮುದಾಯದ ಜನರು ಕಾಡಿನಿಂದ ಹೊರ ಬಂದ ಮೇಲೆ ಬೇರೆ ಉದ್ಯೋಗ ಇಲ್ಲದೆ ಮಲಹೊರುವ ಪದ್ಧತಿಯಲ್ಲಿ ಸಿಲುಕಿದ್ದಾರೆ. ಕೊರಗಕ್ಕೆ ಸೇರಿದ 14500 ಜನರಿದ್ದು, ಅವರ ಜನಸಂಖ್ಯೆ ಕ್ಷೀಣವಾಗುತ್ತಿದೆ. ಹಾಗಾಗಿ, ಅವರಿಗೆ ಪರ್ಯಾಯ ಉದ್ಯೋಗದ ಜತೆಗೆ ಅವರ ಜೀವನಶೈಲಿ, ಭಾಷೆಯನ್ನು ಉಳಿಸುವ ಕೆಲಸ ಮಾಡಲು ಅಧ್ಯಯನ ನಡೆಸಿ ವರದಿ ಕೊಡಲಾಗಿದೆ ಎಂದು ಹೇಳಿದರು.
    ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts