More

    ಬೀದಿನಾಯಿ, ಹಂದಿ ಹಾವಳಿಗೆ ಬೇಸತ್ತ ಜನ

    ರಟ್ಟಿಹಳ್ಳಿ: ಪಟ್ಟಣದ ವಿವಿಧೆಡೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಓಡಾಡಲು ಭಯ ಪಡುವಂತಾಗಿದೆ. ಸ್ಥಳೀಯ ಆಡಳಿತ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಪಟ್ಟಣದ ಕೋಟೆ ಓಣಿ, ರಾಣೆಬೆನ್ನೂರ ರಸ್ತೆ, ಕುರಬಗೇರಿ, ಮಳಗಿ ರಸ್ತೆ, ಮಾಸೂರು ರಸ್ತೆ ಸೇರಿದಂತೆ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. 15-20 ನಾಯಿಗಳ ಗುಂಪು ಕಚ್ಚಾಡುತ್ತ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಬೆಳಗ್ಗೆ 6 ಗಂಟೆಗೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರಿಗೆ, ಹಾಲು ಮತ್ತು ಪತ್ರಿಕೆ ವಿತರಕರನ್ನು ನಾಯಿಗಳು ಬೆನ್ನಟ್ಟಿ ಹೆದರಿಸುತ್ತವೆ. ಕಳೆದ ವಾರ 4-5 ಜನರಿಗೆ ಈ ನಾಯಿಗಳು ಕಚ್ಚಿವೆ. ಬೀದಿ ನಾಯಿಗಳ ಹಾವಳಿಗೆ ವರ್ಷಗಳ ಹಿಂದೆ ಸ್ಥಳೀಯ ಗ್ರಾಮ ಪಂಚಾಯಿತಿ ಕಡಿವಾಣ ಹಾಕಿತ್ತು. ನಂತರ ಮತ್ತೆ ಕ್ರಮಕ್ಕೆ ಮುಂದಾಗಲಿಲ್ಲ. ಹೀಗಾಗಿ ಮತ್ತೆ ಇವುಗಳ ಹಾವಳಿ ಹೆಚ್ಚಾಗಿದೆ.

    ಹಂದಿ-ಬಿಡಾಡಿ ಕುದುರೆ ಕಾಟ: ಪಟ್ಟಣದಲ್ಲಿ ಹಂದಿಗಳು ಮತ್ತು ಕುದುರೆಗಳ ಹಾವಳಿಯೂ ವಿಪರೀತವಾಗಿದ್ದು, ರೈತರ ಬೆಳೆ, ಮನೆಯ ಅಕ್ಕಪಕ್ಕದ ಗಿಡಗಂಟಿಗಳನ್ನು ಹಾಳು ಮಾಡುತ್ತಿವೆ. ಮೇವಿನ ಬಣವೆಗಳನ್ನು ಹಂದಿಗಳ ಹಿಂಡು ಕೆದರುತ್ತಿದ್ದು, ಮೇವು ಕೆಟ್ಟು ಹೋಗುತ್ತಿದೆ. ಪಟ್ಟಣದ ಅಕ್ಕಪಕ್ಕದ ಹೊಲಗಳಲ್ಲಿ ಹಂದಿಗಳ ಓಡಾಟ ಹೆಚ್ಚಿರುವುದರಿಂದ ಬೆಳೆಗಳು ಹಾಳಾಗುತ್ತಿದೆ.

    ಒಂದು ವರ್ಷದ ಹಿಂದೆ ಅಲೆಮಾರಿ ಜನಾಂಗದವರು ಪಟ್ಟಣಕ್ಕೆ ಬಂದು ವಾಸವಾಗಿದ್ದರು. ತಮ್ಮ ಜತೆಯಲ್ಲಿ ಸಾಮಗ್ರಿಗಳನ್ನು ಸಾಗಿಸಲು ಈ ಕುದುರೆಗಳನ್ನು ತಂದಿದ್ದರು. ಆರು ತಿಂಗಳ ನಂತರ ಈ ಜನಾಂಗದವರು ತಮ್ಮ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸಿ, ಕುದುರೆಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಸುಮಾರು 20-25 ಕುದುರೆಗಳಿರುವ ಹಿಂಡು ಗೋವಿನಜೋಳ, ಬಾಳೆ, ಹತ್ತಿ ಬೆಳೆಗಳ ಜಮೀನುಗಳಿಗೆ ನುಗ್ಗಿ ಹಾನಿ ಉಂಟು ಮಾಡುತ್ತಿವೆ. ಈ ಕುದುರೆಗಳನ್ನು ದೂರದ ಗುಡ್ಡದ ಪ್ರದೇಶಗಳಿಗೆ ಬಿಟ್ಟು ಬರುವಂತೆ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.

    ಪಟ್ಟಣದಲ್ಲಿ ಬೀದಿ ನಾಯಿಗಳು ಇತ್ತೀಚೆಗೆ ನನ್ನ ಕಣ್ಣೆದುರೇ ವ್ಯಕ್ತಿ ಮೇಲೆ ದಾಳಿ ಮಾಡಿದ್ದವು. ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೆಳಗ್ಗೆ ಸಂಚಾರಕ್ಕೆ ತೊಂದರೆಯಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ.
    | ಎಸ್.ಬಿ. ಪಾಟೀಲ ಗ್ರಾ.ಪಂ. ಮಾಜಿ ಅಧ್ಯಕ್ಷ

    ಮಠದ ಆವರಣಕ್ಕೂ ನಾಯಿ, ಹಂದಿಗಳು ನುಗ್ಗಿ ಗಲೀಜು ಮಾಡುತ್ತಿದ್ದು, ತೊಂದರೆಯಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಗಮನಕ್ಕೆ ತರಲಾಗಿದೆ.
    | ಶಿವಲಿಂಗ ಶಿವಾಚಾರ್ಯರು ಕಬ್ಬಿಣಕಂತಿಮಠ ರಟ್ಟಿಹಳ್ಳಿ


    ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ತಂಡಕ್ಕೆ ಶೀಘ್ರದಲ್ಲಿಯೇ ತಿಳಿಸಲಾಗುವುದು. ಮಾಲೀಕರನ್ನು ಕರೆಯಿಸಿ, ಹಂದಿಗಳನ್ನು ಪಟ್ಟಣದಲ್ಲಿ ಬಿಡದಂತೆ ಎಚ್ಚರಿಕೆ ನೀಡಲಾಗುವುದು. ಬಿಡಾಡಿ ಕುದುರೆಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಹಾಯದಿಂದ ದೂರದ ಪ್ರದೇಶಗಳಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡಲಾಗುವುದು.
    | ರಾಜರಾಂ ಪವಾರ ಪಪಂ ಮುಖ್ಯಾಧಿಕಾರಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts