More

    ಬೀದಿಗೆ ಬಿತ್ತು ಆರ್ಕೆಸ್ಟ್ರಾದವರ ಬದುಕು

    ಶಿವಮೊಗ್ಗ: ಲಾಕ್​ಡೌನ್ ಹಿನ್ನೆಲೆಯಲ್ಲಿ ಹಲವರ ಸಮಸ್ಯೆ ಮತ್ತು ಸವಾಲುಗಳನ್ನು ಅರಿತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಅಸಂಘಟಿತ ಕಾರ್ವಿುಕರ ಬೆನ್ನಿಗೆ ನಿಂತಿದೆ. ಆದರೆ ಆರ್ಕೆಸ್ಟ್ರಾವನ್ನೇ ನಂಬಿದ ರಾಜ್ಯದ 50 ಸಾವಿರಕ್ಕೂ ಅಧಿಕ ಕಲಾವಿದರು ಇಂದಿಗೂ ಸರ್ಕಾರದ ನೆರವಿನ ದಾರಿ ಎದುರು ನೋಡುತ್ತಿದ್ದಾರೆ.

    ಹೌದು, ಬೆಂಗಳೂರು, ತುಮಕೂರು ಸೇರಿ ರಾಜ್ಯಾದ್ಯಂತ ಸಾವಿರಾರು ಆರ್ಕೆಸ್ಟ್ರಾ ಕಲಾವಿದರಿದ್ದು ಅದರಲ್ಲಿ ಶಿವಮೊಗ್ಗ ನಗರ ಮತ್ತು ಭದ್ರಾವತಿ ಭಾಗದವರು ಅತ್ಯಧಿಕವಾಗಿದ್ದಾರೆ. ಆರ್ಕೆಸ್ಟ್ರಾದಿಂದಲೇ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಲಾಕ್​ಡೌನ್​ನಿಂದ ಒಪ್ಪತ್ತಿನ ಊಟಕ್ಕಿಲ್ಲದೆ ಪರದಾಡುವಂತಾಗಿದೆ. ಗಣಪತಿ ಹಬ್ಬದಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳವರೆಗೆ ಆರ್ಕೆಸ್ಟ್ರಾಗಳು ಹೆಚ್ಚು ನಡೆಯುತ್ತವೆ. ಸಭೆ, ಸಮಾರಂಭ, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ ಕರೆಸುವುದು ಮಾಮೂಲಿಯಾಗಿದೆ. ಆದರೆ ರಾಜ್ಯಕ್ಕೆ ಕರೊನಾ ಕಾಲಿಟ್ಟ ಮೇಲೆ ಆರ್ಕೆಸ್ಟ್ರಾಗಳು ಕೂಡ ಮೂಲೆ ಸೇರಿವೆ. ಕಲೆಯನ್ನೇ ನೆಚ್ಚಿಕೊಂಡಿದ್ದವರ ಬದುಕು ಮೂರಾಬಟ್ಟೆಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕೆಲವರು ಆತ್ಮಹತ್ಯೆ ದಾರಿಯನ್ನೂ ಹಿಡಿಯುವಂತಾಗಿದೆ.

    ಆರ್ಕೆಸ್ಟ್ರಾವನ್ನೇ ನಂಬಿಕೊಂಡಿರುವ 30 ಸಾವಿರ ಕುಟುಂಬಗಳಿವೆ. ನಮಗೆ ಸರ್ಕಾರದಿಂದ ತಾತ್ಕಾಲಿಕ ನೆರವಿಗಿಂತ ಶಾಶ್ವತ ಪರಿಹಾರ ಬೇಕು. ಆರ್ಕೆಸ್ಟ್ರಾದವರನ್ನು ಕಲಾವಿದರೆಂದು ಪರಿಗಣಿಸಬೇಕು. ನಮ್ಮ ಬದುಕಿಗೆ ಸರ್ಕಾರ ಆಸರೆಯಾಗಬೇಕಿದೆ. ಇಲ್ಲವಾದರೆ ಬಹಳಷ್ಟು ಮಂದಿಗೆ ಆತ್ಮಹತ್ಯೆಯೊಂದೇ ದಾರಿಯಾಗಲಿದೆ ಎನ್ನುತ್ತಾರೆ ಭದ್ರಾವತಿ ನ್ಯೂ ಚಂದನ್ ಮ್ಯೂಸಿಕಲ್ ನೈಟ್ಸ್ ಕಲಾವಿದ ವಿಶ್ವನಾಥ್.

    50 ಸಾವಿರ ಕಲಾವಿದರು, 30 ಸಾವಿರ ಕುಟುಂಬ: ರಾಜ್ಯದಲ್ಲಿ ಬೆಂಗಳೂರು ಮತ್ತು ತುಮಕೂರಿನಲ್ಲಿ ಹೆಚ್ಚಿನ ಪ್ರಮಾಣದ ಆರ್ಕೆಸ್ಟ್ರಾಗಳಿವೆ. ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಆರ್ಕೆಸ್ಟ್ರಾ ನಡೆಸುತ್ತಿದ್ದಾರೆ. ಬರೋಬ್ಬರಿ 50 ಸಾವಿರ ಕಲಾವಿದರು ಹಾಗೂ ಅವರನ್ನು ನಂಬಿಕೊಂಡ 30 ಸಾವಿರ ಕುಟುಂಬಗಳಿಗೆ ಆರ್ಕೆಸ್ಟ್ರಾಗಳೇ ಆಸರೆಯಾಗಿವೆ. ಆದರೆ ಮೂರು ತಿಂಗಳಿಂದ ಒಂದೇ ಒಂದು ಆರ್ಕೆಸ್ಟ್ರಾ ನಡೆಸಲಾಗದ ಸ್ಥಿತಿ ಎದುರಾಗಿದೆ. ಇದರಿಂದ ಕಲಾವಿದರು ಆರ್ಥಿಕವಾಗಿ ಕುಗ್ಗುವ ಜತೆಗೆ ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ.

    ಬೇರೆ ಉದ್ಯೋಗವೇ ಗೊತ್ತಿಲ್ಲ: ಲಾಕ್​ಡೌನ್​ನಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ನಮಗೆ ಸರ್ಕಾರದ ತಾತ್ಕಾಲಿಕ ನೆರವು ಅಗತ್ಯವಿಲ್ಲ. ಬದಲಿಗೆ ಶಾಶ್ವತವಾಗಿ ಕಲಾವಿದರೆಂದು ಪರಿಗಣಿಸಿ ರಂಗಭೂಮಿ ಕಲಾವಿದರಂತೆ ಮಾಸಾಶಸನ ನೀಡಬೇಕೆಂಬುದು ಆರ್ಕೆಸ್ಟ್ರಾದವರ ಒತ್ತಾಸೆ. ಆರ್ಕೆಸ್ಟ್ರಾ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. 30-40 ವರ್ಷಗಳಿಂದ ಹಲವರು ಇದೇ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಇದೀಗ ಸರ್ಕಾರ ನಮ್ಮ ಕೈ ಹಿಡಿಯದಿದ್ದರೆ ಆತ್ಮಹತ್ಯೆಯೊಂದೇ ಉಳಿದಿರುವ ದಾರಿಯಾಗಿದೆ ಎನ್ನುತ್ತಾರೆ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆಯ ಜಿಲ್ಲಾ ಸಮಿತಿ ಸಂಚಾಲಕ ವಿಶ್ವನಾಥ.

    15ರಿಂದ 20 ಜನರ ತಂಡ: ಆರ್ಕೆಸ್ಟಾವೊಂದರಲ್ಲಿ ಮ್ಯೂಜಿಷಿಯನ್ಸ್, ಸಿಂಗರ್ಸ್, ಡ್ಯಾನ್ಸರ್​ಗಳು ಸೇರಿ 15ರಿಂದ 20 ಜನರ ತಂಡಗಳಿವೆ. ಯಾವುದೇ ಸಭೆ, ಸಮಾರಂಭಗಳಿಗೆ ಆರ್ಕೆಸ್ಟ್ರಾಗಳನ್ನು ಆಹ್ವಾನಿಸುವುದು ಸಹಜ. ಆದರೆ ಒಳ್ಳೆಯ ಸೀಜನ್ ಸಮಯದಲ್ಲಿ ಲಾಕ್​ಡೌನ್ ಬಡ ಕಲಾವಿದರ ಬದುಕನ್ನೇ ಲಾಕ್ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts