More

    ಬಿಹಾರ ಕಾರ್ವಿುಕರಿಗೆ ಊಟ- ವಸತಿ ವ್ಯವಸ್ಥೆ

    ಹಾನಗಲ್ಲ: ಬಿಹಾರದಿಂದ ಉದ್ಯೋಗ ಅರಸಿ ಪಟ್ಟಣಕ್ಕೆ ಬಂದಿದ್ದ 11 ಜನ ಕಾರ್ವಿುಕರಿಗೆ ಸ್ಥಳೀಯ ಪುರಸಭೆ, ತಾಲೂಕು ಆಡಳಿತ ಊಟೋಪಚಾರದೊಂದಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದೆ.

    ತಾಲೂಕಿಗೆ ಆಗಮಿಸಿದ್ದ ಬಿಹಾರದ ಕೂಲಿ ಕಾರ್ವಿುಕರು ಲಾಕ್​ಡೌನ್ ಹಿನ್ನೆಲೆಯಲ್ಲಿ ನಿರಾಶ್ರಿತರಾಗಿದ್ದರು. ಇದನ್ನು ಗಮನಿಸಿದ ಪುರಸಭೆ ಹಾಗೂ ತಾಲೂಕು ಆಡಳಿತ ಸ್ಥಳೀಯ ಸಮುದಾಯ ಭವನದಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿದ್ದು, ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದ ಮೂಲಕ ಊಟ-ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಕಾರ್ವಿುಕರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ.

    ತರಕಾರಿ ಮಾರಾಟಕ್ಕೆ ವ್ಯವಸ್ಥೆ: ಪಟ್ಟಣದ 23 ವಾರ್ಡ್​ಗಳಲ್ಲಿ ಪರವಾನಗಿ ಹೊಂದಿರುವವರಿಂದ ಪ್ರತ್ಯೇಕ ತರಕಾರಿ ಅಂಗಡಿ ತೆರೆಯಲಾಗಿದ್ದು, ಇವರನ್ನು ಹೊರತುಪಡಿಸಿ ಬೇರಾರೂ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ತರಕಾರಿಗಳ ಬೆಲೆಗಳ ಬಗೆಗೂ ನಿಗಾ ವಹಿಸಲಾಗಿದೆ. ಹುಬ್ಬಳ್ಳಿ-ಹಾವೇರಿ, ಬೆಳಗಾವಿಗಳಿಂದ ತರಕಾರಿ ಖರೀದಿಸಿ ತರುವುದಕ್ಕಾಗಿ ವಾಹನಕ್ಕೆ ಪಾಸ್ ನೀಡಲಾಗಿದೆ.

    ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಸಾಕಲಾಗಿರುವ ಹಂದಿಗಳೆಲ್ಲವನ್ನೂ ಜಿಲ್ಲೆಯಿಂದ ಹೊರಸಾಗಿಸುವಂತೆ ಸಾಕಾಣಿಕೆದಾರರಿಗೆ ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಂದಿಗಳು ಮತ್ತೆ ಪಟ್ಟಣದಲ್ಲಿ ತಿರುಗಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಮಾಲೀಕರಿಗೆ ನೀಡಲಾಗಿದೆ.

    ಐಸೋಲೇಶನ್ ವಾರ್ಡಗಳಿಗೆ ಸ್ಥಳದ ಹುಡುಕಾಟ : ಜಿಲ್ಲಾಡಳಿತ ಪ್ರತಿ ತಾಲೂಕುವಾರು ಐಸೋಲೇಶನ್ ವಾರ್ಡ್​ಗಳ ಸ್ಥಾಪನೆ ಹಾಗೂ ಹೋಮ್ ಕ್ವಾರಂಟೈನ್ ವಿಭಾಗ ತೆರೆಯುವುದಕ್ಕಾಗಿ ತಲಾ 50 ಹಾಸಿಗೆಯ, ಶೌಚಗೃಹ, ಅಡುಗೆಮನೆ ಹೊಂದಿರುವ ಸುಸಜ್ಜಿತ ಕಟ್ಟಡಗಳ ಹುಡುಕಾಟ ಮಾಡುತ್ತಿದೆ. ತಾಲೂಕಿನ ಬಿಸಿಎಂ, ಸಮಾಜಕಲ್ಯಾಣ ಇಲಾಖೆ ವಸತಿ ನಿಲಯಗಳನ್ನು ಪರಿಶೀಲಿಸಲಾಗಿದೆ. ಅಲ್ಲದೆ, ರಾಣಿ ಚನ್ನಮ್ಮ ವಸತಿ ಶಾಲೆ, ಮುರಾರ್ಜಿ ವಸತಿ ಶಾಲೆಗಳನ್ನೂ ಪರಿಶೀಲಿಸಲಾಗಿದ್ದು, ಬಹುತೇಕ ಯಳವಟ್ಟಿಯ ಮುರಾರ್ಜಿ ವಸತಿ ಶಾಲೆ ಆಯ್ಕೆಗೊಳಿಸುವ ಸಾಧ್ಯತೆ ಇದೆ. ತಹಸೀಲ್ದಾರ್, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಈ ಕಟ್ಟಡಗಳನ್ನು ಪರಿಶೀಲಿಸಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts