More

    ಬಿಹಾರಕ್ಕೆ ಹೊರಟಿದ್ದ ವಲಸೆ ಕಾರ್ವಿುಕರು ವಾಪಸ್

    ಹುಬ್ಬಳ್ಳಿ: ಬಿಹಾರಕ್ಕೆ ಪ್ರಯಾಣ ಬೆಳೆಸಿದ್ದ ಸುಮಾರು 70 ಜನ ವಲಸೆ ಕಾರ್ವಿುಕರು ಹುಬ್ಬಳ್ಳಿಗೆ ಮರಳಿದ ಘಟನೆ ನಡೆದಿದೆ.

    ಭಾನುವಾರ ಸಂಜೆ ಹುಬ್ಬಳ್ಳಿಯಿಂದ ಲಾರಿ ಏರಿದ್ದ ಇವರನ್ನು ಬೆಳಗಾವಿ ಜಿಲ್ಲೆ ಕಿತ್ತೂರು ಬಳಿ ಪೊಲೀಸರು ತಡೆದಿದ್ದಾರೆ. ಜಿಲ್ಲಾಡಳಿತದ ಅನುಮತಿ, ಇ-ಪಾಸ್, ಯಾವುದೂ ಇಲ್ಲದ ಕಾರಣಕ್ಕೆ ಮುಂದೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ. ರಾತ್ರಿ ವೇಳೆ ಲಾರಿ ಚಾಲಕ ವಲಸೆ ಕಾರ್ವಿುಕರನ್ನು ಧಾರವಾಡ ಬೇಲೂರ ಬಳಿ ಬಿಟ್ಟು ಹೋಗಿದ್ದಾನೆ. ಅಲ್ಲಿಂದ ಹಾಗೋ ಹೀಗೋ ಲಾರಿ, ಇನ್ನಿತರ ವಾಹನ ಹಿಡಿದು ಸೋಮವಾರ ಬೆಳಗ್ಗೆ ವಿಧಿಯಿಲ್ಲದೇ ತಿರುಮಲಕೊಪ್ಪ ಸೇರಿಕೊಂಡಿದ್ದರು.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್​ಪಿ ರವಿ ನಾಯ್ಕ ಹಾಗೂ ಸಿಬ್ಬಂದಿ ವಲಸೆ ಕಾರ್ವಿುಕರ ವಿಚಾರಣೆ ನಡೆಸಿ ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಇಲಾಖೆ ಅಧಿಕಾರಿಗಳು 70 ಜನ ವಲಸೆ ಕಾರ್ವಿುಕರಿಗೆ ಧಾರವಾಡದ ಗೌರಿ ಶಂಕರ ವಸತಿ ನಿಲಯದಲ್ಲಿ ಊಟ, ಉಪಾಹಾರ ಸಹಿತ ವಸತಿ ವ್ಯವಸ್ಥೆ ಮಾಡಿದ್ದಾರೆ.

    ಇವರೆಲ್ಲ ತಿರುಮಲಕೊಪ್ಪ, ಪಾಲಿಕೊಪ್ಪ ಸುತ್ತಮುತ್ತ ಹೆದ್ದಾರಿ ಬಳಿ ಟೆಂಟ್ ಹಾಕಿಕೊಂಡು ವಾಸವಾಗಿದ್ದರು. ಹುಬ್ಬಳ್ಳಿ-ಹಾವೇರಿ-ಚಿತ್ರದುರ್ಗ ಷಟ್ಪಥ ರಸ್ತೆ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದರು. ಕಾಮಗಾರಿಯ ಗುತ್ತಿಗೆ, ಉಪ ಗುತ್ತಿಗೆ ಹಿಡಿದವರು ದೇಶದ ವಿವಿಧೆಡೆಯಿಂದ ಕಾರ್ವಿುಕರನ್ನು ಕರೆತಂದಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಇವರಿಗೆ ನಿತ್ಯ ಕೆಲಸವಿರಲಿಲ್ಲ. ವಾರದಲ್ಲಿ 1-2 ದಿನ ಮಾತ್ರ ಕೆಲಸ. ಹಾಗೇ ದುಡಿಸಿಕೊಂಡ ಗುತ್ತಿಗೆದಾರರು ಕಳೆದ 2 ತಿಂಗಳಿಂದ ಕೂಲಿಯನ್ನೂ ಕೊಟ್ಟಿರಲಿಲ್ಲವಂತೆ. ಊಟಕ್ಕೆ ಒಂದಿಷ್ಟು ವ್ಯವಸ್ಥೆ ಮಾಡಿದ್ದರು. ಲಾಕ್​ಡೌನ್​ನಿಂದ ಇಲ್ಲಿಯೇ ಉಳಿಯುವುದು ದುಸ್ತರವಾಗಿತ್ತು.

    ಭಾನುವಾರ ಸಂಜೆ ತಿರುಮಲಕೊಪ್ಪ ದಿಂದ ಇವರೆಲ್ಲ ತಾಯ್ನಾಡಿಗೆ ಮರಳಲು ಸಾಮಾನು-ಸರಂಜಾಮುಗಳ ಮೂಟೆ ಹೊತ್ತುಕೊಂಡು ಗಬ್ಬೂರ್ ಬೈಪಾಸ್​ವರೆಗೆ ಸುಮಾರು 20-22 ಕಿ.ಮೀ. ನಡೆದುಕೊಂಡೇ ಬಂದಿದ್ದರು. ಅಲ್ಲಿಂದ ಉತ್ತರ ಪ್ರದೇಶ ಮೂಲದ ಲಾರಿ ಹತ್ತಿ ಪ್ರಯಾಣಿಸಿದ್ದರು.

    ಹೆದ್ದಾರಿ ಕಾಮಗಾರಿಯಲ್ಲಿ 226 ಜನ ವಲಸೆ ಕಾರ್ವಿುಕರಿದ್ದಾರೆ. ತಿರುಮಲಕೊಪ್ಪದಲ್ಲಿ ನೆಲೆಸಿದ್ದ ಬಿಹಾರ ಮೂಲದ ವಲಸೆ ಕಾರ್ವಿುಕರಲ್ಲಿ ಕೆಲವರು ಮೇ 3 ಮತ್ತು 4ರಂದು ತಾಯ್ನಾಡಿಗೆ ಮರಳಲು ಸೇವಾಸಿಂಧು ವೆಬ್​ಸೈಟ್​ನಲ್ಲಿ ಕೋರಿಕೆ ಸಲ್ಲಿಸಿದ್ದಾರೆ. ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಇದು ಎರಡು ರಾಜ್ಯಗಳ ನೋಡಲ್ ಅಧಿಕಾರಿ ಮಟ್ಟದಲ್ಲಿ ನಿರ್ಧಾರವಾಗಬೇಕಿರುವ ವಿಷಯ. ಒಪ್ಪಿಗೆ ಸಿಕ್ಕ ತಕ್ಷಣ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಕೆಲ ದಿನ ಕಾಯಿರಿ ಎಂದು ಕಾರ್ವಿುಕರಿಗೆ ಹೇಳಿದ್ದೇವೆ.
    | ಪ್ರಕಾಶ ನಾಶಿ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts