More

    ಬಿಟ್ಟುಹೋದವರಿಗೆ ಪರಿಹಾರಕ್ಕೆ ಠರಾವು

    ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೊಷಿಸಿದ್ದರಿಂದ ತಾಲೂಕಿನ ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳಗೆಗಳನ್ನು ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಘೊಷಿಸಿರುವ ಪರಿಹಾರಧನ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಬೆಳೆ ಬೆಳೆದಿದ್ದರೂ ಪಟ್ಟಿಯಿಂದ ಬಿಟ್ಟು ಹೋಗಿದ್ದು, ಪರಿಹಾರ ಸಿಕ್ಕಿಲ್ಲ. ಈಗಲಾದರೂ ಪರಿಹಾರ ನೀಡುವಂತೆ ಒತ್ತಾಯಿಸಿ ಠರಾವು ಕಳುಹಿಸಲು ತಾಪಂ ಸಾಮಾನ್ಯ ಸಭೆ ನಿರ್ವಹಿಸಿತು.

    ತಾ.ಪಂ. ಸಭಾಭವನದಲ್ಲಿ ರವಿವರ್ಮ ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು.

    ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸದಸ್ಯ ಮಲ್ಲಪ್ಪ ಭಾವಿಕಟ್ಟಿ ವಿಷಯ ಪ್ರಸ್ತಾಪಿಸಿ, ಗೋವಿನಜೋಳ ಬೆಳೆದ ರೈತರಿಗೆ ಪರಿಹಾರ ಸಿಗಬೇಕು. ಆದರೆ, ನಿಜವಾಗಿಯೂ ಗೋವಿನ ಜೋಳ ಬೆಳೆದ ಅನೇಕರು ಯೋಜನೆಯಿಂದ ಹೊರಗುಳಿದಿದ್ದಾರೆ. ಗ್ರಾಮ ಸೇವಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಸರ್ವೆ ನಡೆಸಿಲ್ಲ. ಅನರ್ಹರನ್ನೂ ಗೋವಿನಜೋಳ ಬೆಳೆದಿರುವವರ ಯಾದಿಯಲ್ಲಿ ಸೇರಿಸಿದ್ದಾರೆ. ಈ ಮೂಲಕ ಅರ್ಹ ರೈತರಿಗೆ ಮೋಸ ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹ ರೈತರಿಗೆ ಪರಿಹಾರಧನ ನೀಡಲಾಗದಿದ್ದರೆ ಯೋಜನೆಯನ್ನು ರದ್ದುಪಡಿಸಬೇಕು ಎಂದರು.

    ಈ ಕುರಿತು ಠರಾವು ಮಾಡಿ ಕಳುಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

    ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರನ್ನೊಳಗೊಂಡ ಪ್ರತ್ಯೇಕ ಸಭೆ ಜರುಗಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸದಸ್ಯರಾದ ಈರಪ್ಪ ಏಣಗಿ ಹಾಗೂ ಮಹಾವೀರ ಜೈನರ ಪ್ರಸ್ತಾಪಿಸಿದರು.

    ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ, ಎಸ್​ಎಸ್​ಎಲ್​ಸಿ ಪರೀಕ್ಷೆ ವ್ಯವಸ್ಥೆ ಮತ್ತು ಇತರ ಕಾರಣಕ್ಕಾಗಿ ಶಹರ ಹಾಗೂ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾ.ಪಂ. ಸದಸ್ಯರು ಧನ್ಯವಾದ ತಿಳಿಸಿದರು.

    ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಹಣ ಕೈತಪ್ಪದಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧ್ಯಕ್ಷ ರವಿವರ್ಮ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

    ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇರುವ ಲೈನ್​ವುನ್ ಹುದ್ದೆಗಳಿಗೆ ಬದಲಿ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು ಎಂದು ಕೆಲ ಸದಸ್ಯರು ಸೂಚಿಸಿದರು.

    ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಬುಡ್ಡೇಕಾಯಿ, ತಾ.ಪಂ. ಎಡಿ ಗಿರೀಶ ಕೋರಿ ವೇದಿಕೆಯಲ್ಲಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಗಳ ಪ್ರಗತಿ ಪರಿಶೀಲನೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts