More

    ಬಿಜೆಪಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ; ಡಿಕೆಶಿಯನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ: ಕಾಗೋಡು ತಿಮ್ಮಪ್ಪ ಕಿಡಿ

    ಸಾಗರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಿಮ್ಮೆಟ್ಟಿಸಲು ವಿನಾಕಾರಣ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಸಿಬಿಐ ದಾಳಿ ಖಂಡಿಸಿ ಸಾಗರ ಹೋಟೆಲ್ ವೃತ್ತದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
    ರಾಜ್ಯದ ಜನ ಬಿಜೆಪಿ ಸರ್ಕಾರದ ಸುಳ್ಳು ಭರವಸೆಯಿಂದ ಬೇಸತ್ತಿದ್ದಾರೆ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತಗೊಂಡಿವೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಎಂದರೆ ಗಣಪತಿಕೆರೆಯ ಒಂದು ದಂಡೆ ಮಾತ್ರ ಎಂದುಕೊಂಡಿದ್ದಾರೆ, ಬಡವರಿಗೆ ಒಂದು ನಿವೇಶನ, ಮನೆ ಹಂಚಿಕೆ ಮಾಡಲಿಲ್ಲ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಟ್ಟಿಲ್ಲ ಎಂದು ದೂರಿದರು.
    ಬಿಜೆಪಿಯವರು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕುಕ್ಕರ್ ಸ್ಫೋಟ ಪ್ರಕರಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆಯೇ ವಿನಃ ಭಯೋತ್ಪಾದಕರು, ದೇಶದ್ರೋಹಿಗಳನ್ನು ಬೆಂಬಲಿಸಿ ಅವರು ಮಾತನಾಡಿಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು. ದೇಶದ್ರೋಹಿಗಳನ್ನು, ಭಯೋತ್ಪಾದಕರನ್ನು ಗಲ್ಲಿಗೇರಿಸಿ. ಇದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರ ಪಕ್ಷ ಸಂಘಟನೆಯ ವೇಗ ಕುಂಠಿತಗೊಳಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನೀತಿ ಖಂಡನೀಯ ಎಂದು ಹೇಳಿದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಗಮನಕ್ಕೆ ಬಂದಮೇಲೆ ಬಿಜೆಪಿಯವರು ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts