More

    ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

    ಮೈಸೂರು: ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ, ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.


    ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ತನಿಖಾ ಸಂಸ್ಥೆಗಳನ್ನು ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಗಾಂಧಿ ಕುಟುಂಬದ ರಾಜಕೀಯ ವರ್ಚಸ್ಸು ನಾಶಕ್ಕೆ ಬಿಜೆಪಿ ಷಡ್ಯಂತ್ರ, ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಗಾಂಧಿ ವೃತ್ತದಿಂದ ಪಾದಯಾತ್ರೆ ಮೂಲಕ ನಜರ್‌ಬಾದ್‌ನಲ್ಲಿರುವ ಆದಾಯ ತೆರಿಗೆ ಕಚೇರಿಯತ್ತ ನಡೆದರು. ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ದೊಡ್ಡ ಗಡಿಯಾರ ವೃತ್ತದಲ್ಲಿ ಪ್ರತಿಭಟನಾಕಾರರನ್ನು ತಡೆದರು.


    ಪರಮೇಶ್ವರ್ ಬಂಧಿಸಲು ಹರಸಾಹಸ: ಘೋಷಣೆ ಕೂಗುತ್ತ ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದರು. ಆದರೆ, ಡಾ.ಜಿ.ಪರಮೇಶ್ವರ್ ಅವರು ರಸ್ತೆಯಲ್ಲಿಯೇ ಪ್ರತಿಭಟನೆ ಕುಳಿತರು. ಪಾದಯಾತ್ರೆಗೆ ಹೊರಟ ಕಾರ್ಯಕರ್ತರ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಮೇಶ್ವರ್ ಅವರು ಸುಮಾರು 20 ನಿಮಿಷ ರಸ್ತೆಯಲ್ಲಿಯೇ ಕುಳಿತರು. ಪೊಲೀಸರು ಮನವರಿಕೆ ಮಾಡಿದರು. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರ ಬಂಧನದ ಬಳಿಕ ಪೊಲೀಸರು ಪರಮೇಶ್ವರ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.


    ಡಾ.ಜಿ.ಪರಮೇಶ್ವರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜವಾಹರಲಾಲ್ ನೆಹರು 1937ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪಿಸುತ್ತಾರೆ. ಆ ಸಂಸ್ಥೆಗೆ 5 ಸಾವಿರ ಜನ ಷೇರುದಾರರು. 2008ರವರೆಗೆ ಪತ್ರಿಕೆ ನಡೆಯುತ್ತದೆ. ಆನಂತರ ಅನೇಕ ಸಂಕಷ್ಟಗಳಿಗೆ ಸಿಲುಕಿ ನಿಲ್ಲಿಸಲಾಗುತ್ತದೆ. ಆಗ ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಬರೆದುಕೊಟ್ಟವರು ಸ್ವಾತಂತ್ರೃ ತಂದುಕೊಟ್ಟವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದರು.


    2012ರಲ್ಲಿ ಸುಬ್ರಹ್ಮಣ್ಯಸ್ವಾಮಿ ಪ್ರಕರಣ ದಾಖಲಿಸಿದ್ದರು. 10 ವರ್ಷಗಳ ನಂತರವೂ ಕರೆಸಿ ಸತತ 50 ಗಂಟೆ ವಿಚಾರಣೆ ಮಾಡುವುದು ಅನವಶ್ಯಕ. ಈ ಪ್ರಕರಣದಲ್ಲಿ ಕನಿಷ್ಠ ಎಫ್‌ಐಆರ್ ಕೂಡ ಹಾಕಿಲ್ಲ. ಸೋನಿಯಾ ಗಾಂಧಿ ಅವರ ಆರೋಗ್ಯ ಸರಿಯಿಲ್ಲ. ಆದರೂ ಮಾನಸಿಕ ಹಿಂಸೆ ಕೊಡುತ್ತಿದ್ದೀರಿ. ಬ್ರಿಟಿಷರ ಗುಂಡೇಟಿಗೇ ಅಂಜಿಲ್ಲ, ಇನ್ನು ನಿಮ್ಮ ಬೆದರಿಕೆಗೆ ಅಂಜುತ್ತೇವೆಯೇ ಎಂದು ಗುಡುಗಿದರು.
    ದೇಶದಲ್ಲಿ ಯಾವ ಬೃಹತ್ ಯೋಜನೆ ರೂಪಿಸಲು ಆಹಾರ ಪದಾರ್ಥಗಳ ಮೇಲೆ ಶೇ.5 ಜಿಎಸ್‌ಟಿ ಹಾಕಿದ್ದೀರಿ ಎಂದು ಪ್ರಶ್ನಿಸಿದ ಪರಮೇಶ್ವರ್, ಕೈಗಾರಿಕೋದ್ಯಮಿಗಳನ್ನು ಬೆಳೆಸಲು ಬಡ ಜನರಿಂದ ಸುಲಿಗೆ ಮಾಡುತ್ತಿದ್ದೀರಿ. 2014ರಲ್ಲಿ ಕೊಟ್ಟ ವಾಗ್ದಾನ ಈಡೇರಿಸಲಿಲ್ಲ. ಯುವಜನರಿಗೆ ಉದ್ಯೋಗ ಕೊಡಲಿಲ್ಲ. ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣಲಾಗುತ್ತಿದೆ. ಈ ದೇಶವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತೀರಿ ಎಂದ ಪ್ರಧಾನಿಯನ್ನು ಪ್ರಶ್ನಿಸಿದರು.


    ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ. ಶಾಲಾ ಮಕ್ಕಳಿಗೆ ಶೂ ಕೊಡಲು ಅವರಿಂದ ಸಾಧ್ಯವಾಗಿಲ್ಲ. 3 ತಿಂಗಳಿಗೊಮ್ಮೆ ಸಂಬಳ ಕೊಡುತ್ತಿದ್ದಾರೆಂದು ಸಾರಿಗೆ ನೌಕರರು ಅವಲತ್ತುಕೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದ್ದು ಇಂತಹ ಕೆಟ್ಟ ಆಡಳಿತ ನೀಡಲೆಂದೇ ಎಂದು ಪ್ರಶ್ನಿಸಿದರು.


    ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ ಸೋನಿಯಾಗಾಂಧಿ ಹಾಗೂ ಅಧಿಕಾರ ತ್ಯಾಗ ಮಾಡಿದ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಮಾನಸಿಕ ಕಿರುಕುಳ, ಹಿಂಸೆ ನೀಡುತ್ತಿದೆ. ಕಾಂಗ್ರೆಸ್ ನಾಯಕರ ವರ್ಚಸ್ಸು ಕುಗ್ಗಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಎನ್.ಕೇಶವಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಧರ್ಮಸೇನ, ಮುಖಂಡರಾದ ಚಂದ್ರಮೌಳಿ, ಸುಧೀಂದ್ರ, ಡಿ.ರವಿಶಂಕರ್, ಎಚ್.ಎ.ವೆಂಕಟೇಶ್, ಸಿ.ನರೇಂದ್ರ, ಮರೀಗೌಡ, ಮಾಜಿ ಮೇಯರ್ ಅಯೂಬ್ ಖಾನ್, ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಎಂ.ಶಿವಣ್ಣ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಈಶ್ವರ್ ಚಕ್ಕಡಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts