More

    ಬಿಜೆಪಿ ಪಾಲಾಗಲಿದೆ ಪುರಸಭೆ ಗದ್ದುಗೆ

    ಮುಂಡರಗಿ: ಸ್ಥಳೀಯ ಪುರಸಭೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಅ ವರ್ಗ) ಮೀಸಲಾತಿ ಪ್ರಕಟವಾಗಿದ್ದು ಈವರೆಗೂ ತಟಸ್ಥವಾಗಿದ್ದ ಪುರಸಭೆ ರಾಜಕೀಯ ಗದಿಗೆದರಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದ್ದು, ಕೆಲ ಬಿಜೆಪಿ ಸದಸ್ಯರು ಮುಖಂಡರ ದುಂಬಾಲು ಬಿದ್ದಿದ್ದಾರೆ.

    2019ರ ಮೇ 29ರಂದು ಪಟ್ಟಣದ ಪುರಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮೇ 31ರಂದು ಫಲಿತಾಂಶ ಪ್ರಕಟಗೊಂಡಿತ್ತು. ಆದರೆ, ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿರಲಿಲ್ಲ. ಆಯ್ಕೆಯಾದ ಸದಸ್ಯರು ಮೀಸಲಾತಿಗಾಗಿ ಕಾಯ್ದು ಕುಳಿತಿದ್ದರು. ಇದೀಗ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ,-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ತುರುಸುಗೊಂಡಿದೆ.

    ಪುರಸಭೆಯ ಒಟ್ಟು 23 ವಾರ್ಡ್​ಗಳ ಪೈಕಿ 12 ಬಿಜೆಪಿ, 6 ಕಾಂಗ್ರೆಸ್, 1 ಜೆಡಿಎಸ್ ಹಾಗೂ 4 ಸ್ಥಾನಗಳಿಗೆ ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿಜೆಪಿ ಬಹುಮತ ಇರುವ ಹಿನ್ನೆಲೆ ಬಿಜೆಪಿಯು ಪುರಸಭೆ ಅಧಿಕಾರ ಗದ್ದುಗೆಗೆ ಏರುವುದು ಪಕ್ಕಾ ಆಗಿದೆ. ಬಿಜೆಪಿ ಸದಸ್ಯರ ಜೊತೆಗೆ ಸ್ಥಳೀಯ ಶಾಸಕ, ಸಂಸದರ ಮತಗಳು ಬಿಜೆಪಿಗೆ ಪ್ಲಸ್ ಆಗಲಿವೆ. ಹೀಗಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರುವ ದಾರಿ ಸುಲಭವಾಗಲಿದೆ.

    ಸಾಮಾನ್ಯ ಮೀಸಲಾತಿ ಎಂದ ತಕ್ಷಣ ಅಧ್ಯಕ್ಷ ಗದ್ದುಗೆ ಏರಲು ನಾನು, ನೀನು ಎನ್ನುತ್ತಿದ್ದಾರೆ. ಕೆಲ ಬಿಜೆಪಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿಯೇ ನಡೆಸುತ್ತಿದ್ದಾರೆ. ಮೀಸಲಾತಿ ಪ್ರಕಟಿಸುವ ಮುಂಚೆಯಿಂದಲೂ ಅನೇಕರು ಅಧ್ಯಕ್ಷರಾಗಬೇಕೆಂಬ ನಿರೀಕ್ಷೆಯಲ್ಲಿದ್ದರು. ಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಬಿಜೆಪಿ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಕವಿತಾ ಉಳ್ಳಾಗಡ್ಡಿ, ಶಿವಪ್ಪ ಚಿಕ್ಕಣ್ಣವರ ಅವರ ಹೆಸರು ಕೇಳಿಬರುತ್ತಿದೆ. ಇನ್ನು ಕೆಲವರು ತಾವು ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ.

    ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗದ ಮೀಸಲಾತಿ ಇದ್ದು, ಆ ಪೈಕಿ ಬಿಜೆಪಿಯಲ್ಲಿ ಅನೇಕರಿದ್ದಾರೆ. ಆದರೆ, ಈಗ ಹೆಚ್ಚಾಗಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಸದ್ಯ ಮೌನವಾಗಿದ್ದು, ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆಯಿಂದ ಅಸಮಾಧಾನ ಉಂಟಾದರೆ ಆಗ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ತಮ್ಮ ಪರ ಬಹುಮತ ಸಾಬೀತು ಪಡಿಸಲು ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಸದಸ್ಯರ ಮೊರೆ ಹೋಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಆದರೂ, ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧವಾಗಿ ಮುನ್ನಡೆಯುತ್ತಾರೆ ಎನ್ನುವ ಮಾತು ಸಹ ಕೇಳಿಬಂದಿದೆ.

    ಸ್ಥಳೀಯವಾಗಿ ಬಿಜೆಪಿ ಶಾಸಕರಿದ್ದಾರೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿಯವರಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಬಿಜೆಪಿ ಸದಸ್ಯರಲ್ಲಿ ಯಾವುದೆ ಅಸಮಾಧಾನವಿದ್ದರೂ ಬಿಜೆಪಿ ವರಿಷ್ಠರು ಮುಂದೆ ಕುಳಿತು ಸರಿಪಡಿಸಿ ಯಾವುದೇ ಗೊಂದಲವಿಲ್ಲದೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

    ಬಿಜೆಪಿ ಪಕ್ಷದ ಜಿಲ್ಲಾ ವರಿಷ್ಠರು, ಶಾಸಕರು, ಸಂಸದರು, ಸಚಿವರು ಮತ್ತು ಬಿಜೆಪಿಯ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯದ ಮೂಲಕ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಗುವುದು.

    | ಹೇಮಗಿರೀಶ ಹಾವಿನಾಳ, ಮುಂಡರಗಿ ಮಂಡಳ ಬಿಜೆಪಿ ಅಧ್ಯಕ್ಷ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts