More

    ಬಿಜೆಪಿ ಇರಲ್ಲ, ಜೆಡಿಎಸ್ ಬಗ್ಗೆ ಮಾತನಾಡೋಲ್ಲ ; ಶಿರಾ ಕ್ಷೇತ್ರದಲ್ಲಿ ಡಿಕೆಶಿ ಮತಬೇಟೆ

    ಶಿರಾ: ಶಿರಾ ಉಪಚುನಾವಣೆಯಲ್ಲಿ ಗೆಲುವಿನ ಪ್ರತಿಷ್ಠೆಗೆ ಬಿದ್ದಿರುವ ಅಭ್ಯರ್ಥಿಗಳು ಪ್ರಚಾರ ಬಿರುಸಾಗಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಕಳ್ಳಂಬೆಳ್ಳ ಹೋಬಳಿಯಲ್ಲಿ ಪ್ರಚಾರ ನಡೆಸಿದರು. ಯತ್ತಪ್ಪನಹಟ್ಟಿ, ದೊಡ್ಡ ಅಗ್ರಹಾರ, ತರೂರು ಮತ್ತಿತರ ಗ್ರಾಮಗಳಲ್ಲಿ ಡಿಕೆಶಿ ಹಾಗೂ ತಂಡ ಬಿರುಸಿನ ಪ್ರಚಾರ ನಡೆಸಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಮುಖಂಡರು ಡಿಕೆಶಿಗೆ ಸಾಥ್ ನೀಡಿದರು.

    ರಾಜ್ಯದಲ್ಲಿ ರೈತ, ದಲಿತ, ಮಹಿಳೆಯರ ಪರವಾಗಿ ಮಾತನಾಡುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ವಾತ್ರ, ಶಿರಾ ಮತದಾರರು ರಾಜ್ಯಕ್ಕೆ ಸಂದೇಶ ನೀಡಬೇಕಿದೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮತ ಚಲಾಯಿಸುವಂತೆ ಶಿವಕುಮಾರ್ ಮನವಿ ಮಾಡಿದರು.

    ರಾಜ್ಯದಲ್ಲಿ ಮುಂದೆ ಬಿಜೆಪಿ ಇರುವುದಿಲ್ಲ, ದಳದ ಬಗ್ಗೆ ಮಾತನಾಡಲ್ಲ, ಶಿರಾ ಉಪ ಚುನಾವಣೆಯಲ್ಲಿ ಜಯಚಂದ್ರ ಅವರ ಕೈ ಬಲಪಡಿಸಲು ಬಂದಿದ್ದೇವೆ, ಒಗ್ಗಟ್ಟಿನಿಂದ ಹೋರಾಡುವ ಮೂಲಕ ಕಾಂಗ್ರೆಸ್ ಗೆಲ್ಲಿಸಲು ಎಲ್ಲ ಮುಖಂಡರು ಶ್ರಮಿಸುತ್ತಿದ್ದಾರೆ ಎಂದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಾತನಾಡಿ, ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಎಂತ ಆಡಳಿತ ನೀಡುತ್ತಿದೆ ಎನ್ನುವುದನ್ನು ಜನರೇ ತಿಳಿದುಕೊಂಡಿದ್ದಾರೆ, ಕರೊನಾದಿಂದ ಜನರು ಸಂಕಷ್ಟದಲ್ಲಿದ್ದರೂ ಬಿಜೆಪಿ ಬಂಡವಾಳಶಾಹಿಗಳ ಪರವಾಗಿ ನಿಂತಿದೆ ಎಂದು ಹರಿಹಾಯ್ದರು. ಶಿರಾ ಅಭಿವೃದ್ಧಿಗೆ ಜಯಚಂದ್ರ ಕಾರಣ, 2500ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ, ಬಡವರ ಕೆಲಸ ವಾಡುವುದು ಕಾಂಗ್ರೆಸ್, ಸರ್ವಧರ್ಮದ ಅಭ್ಯುದಯ ಕಾಂಗ್ರೆಸ್ ಬದ್ಧತೆ, ಕೋವಿಡ್ ಸಂದರ್ಭದಲ್ಲಿಯೂ ಜನರು ನೆಮ್ಮದಿಯಾಗಿರಲು ಕಾಂಗ್ರೆಸ್ ನೀಡಿದ್ದ ಕಾರ್ಯಕ್ರಮ ಕಾರಣ ಎಂದರು.

    ಕೋವಿಡ್ ವೇಳೆ ಅನ್ನಭಾಗ್ಯದಿಂದ ಅನುಕೂಲ ಆಗಿದೆ, ಅಂತಹ ಬದ್ಧತೆ ಇರುವುದು ಕಾಂಗ್ರೆಸ್ ಸರ್ಕಾರಕ್ಕೆ ವಾತ್ರ, ಜಯಚಂದ್ರ ಅವರು ಪಶು ಸಚಿವರಾಗಿದ್ದಾಗ, ಆಕಸ್ಮಿಕವಾಗಿ ಕುರಿ, ಮೇಕೆ ಮೃತಪಟ್ಟರೆ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿದ್ದರು, ಬಿಜೆಪಿ ಸರ್ಕಾರ ಈ ಪರಿಹಾರ ಹಿಂಪಡೆದಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಕಿಡಿಕಾರಿದರು. ಮದಲೂರು ಕೆರೆಗೆ ಹೇವಾವತಿ ಹರಿಸುವುದು ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಬಿಜೆಪಿಗರು ಈಗ ನೀರು ಹರಿಸುವ ವಾತನಾಡುತ್ತಿದ್ದಾರೆ, ಮದಲೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಅಪ್ಪ ಅಮ್ಮ ನಾನೇ, ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ಒಂದು ತಿಂಗಳೊಳಗೆ ನೀರು ಹರಿಸುತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಭರವಸೆ ನೀಡಿದರು. ವಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ, ಎಂ.ಸಿ.ವೇಣುಗೋಪಾಲ್ ಮತ್ತಿತರರು ಇದ್ದರು. 

    ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ ಎಂಬುದು ಅದೇ ಪಕ್ಷದ ಯತ್ನಾಳ್ ಹೇಳಿದ್ದಾರೆ, ಸರ್ಕಾರ ಅಸ್ಥಿರವಾಗಲಿದ್ದು ದುರಾಡಳಿತಕ್ಕೆ ಬಿಜೆಪಿ ಶಾಸಕರೇ ಬೇಸತ್ತಿದ್ದಾರೆ, ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ.
    ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

    ಶಿರಾದಲ್ಲಿ ಮೊಹನ್, ಶೋಭಾ, ಭಾರತಿಶೆಟ್ಟಿ : ಗೆಲುವಿನ ವಿಶ್ವಾಸದೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಮಂಗಳವಾರ ಸಂಸದರಾದ ಪಿ.ಸಿ.ಮೋಹನ್ ಹಾಗೂ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ವಿವಿಧ ಗ್ರಾಮಗಳಲ್ಲಿ ಡಾ.ರಾಜೇಶ್‌ಗೌಡ ಪರ ಮತಯಾಚಿಸಿದರು. ಹುಲಿಕುಂಟೆ ಹೋಬಳಿಯಲ್ಲಿ ಮಂಗಳವಾರ ಮನೆ, ಮನೆಗೆ ತೆರಳಿ ಮತಯಾಚಿಸಿದ ಶೋಭಾ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಯುವಸಮೂಹವನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಶಿರಾ ಕ್ಷೇತ್ರ ಕಮಲದ ವಶವಾಗಲಿದೆ ಎಂದು ವಿಶ್ವಾಸಪಟ್ಟರು. ರಾಜೇಶ್‌ಗೌಡರಿಗೆ ರಾಜಕೀಯ ಹಿನ್ನೆಲೆಯಿದೆ, ಅವರ ತಂದೆ ಒಂದು ಬಾರಿ ಶಾಸಕರು ಮೂರು ಬಾರಿ ಸಂಸದರಾಗಿದ್ದು ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶಿರಾ ಕ್ಷೇತ್ರದ ಜನ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಯಮ್ಮ, ಚಂದ್ರಮ್ಮ, ಪದ್ಮಕ್ಕ ಮತ್ತಿತರರು ಸಾಥ್ ನೀಡಿದರು.

    ಬಲಿಜಿಗ ಮತಯಾಚನೆಗೆ ಮೋಹನ್ : ಬಲಿಜ ಸಮಾಜಕ್ಕೆ ಸಾಮಾಜಿಕ ಆರ್ಥಿಕ ಮೂಲ ಸೌಕರ್ಯ ನೀಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದು ಉಪಚುನಾವಣೆಯಲ್ಲಿ ತಾಲೂಕಿನಲ್ಲಿರುವ ಸಮುದಾಯದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ನಮ್ಮ ಬೇಡಿಕೆ ಈಡೇರಲು ಸಹಾಯವಾಗುತ್ತದೆ ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಹೇಳಿದರು.ತಾಲೂಕಿನ ಚನ್ನನಕುಂಟೆಯಲ್ಲಿ ಮಂಗಳವಾರ ಮತಯಾಚನೆ ವೇಳೆ ಮತಾನಡಿದ ಅವರು, ಸಮುದಾಯದ ಅಭಿವೃದ್ಧಿ ಹಾಗೂ ಎಲ್ಲ ರೀತಿಯ ಏಳಿಗೆೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮುಖಂಡರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಉಪಾಧ್ಯಕ್ಷ ಪಾವಗಡ ರವಿ, ವಿಜಯ್‌ಕುಮಾರ್, ಹೆಂಜಾರಪ್ಪ, ರವಿ, ರಘು, ಗಿರಿಧರ್, ಕೃಷ್ಣಮೂರ್ತಿ, ಶ್ರೀಧರ್‌ಮೂರ್ತಿ, ಲಕ್ಷ್ಮೀನಾರಾಯಣ ಇತರರಿದ್ದರು.

    ಪಟ್ಟನಾಯಕನಹಳ್ಳಿ ಮಠಕ್ಕೆ ಕಟ್ಟಾ , ರಾಜೇಶ್‌ಗೌಡ: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸೋಮವಾರ ವಿವಿಧ ಮಠಗಳಿಗೆ ಭೇಟಿಯಿತ್ತ ಹಿನ್ನೆಲೆಯಲ್ಲಿ ಮಂಗಳವಾರ ಮಾಜಿ ಸಚಿವ, ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜತೆ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಕುಂಚಿಟಿಗ ಸಮುದಾಯದಲ್ಲಿ ಶ್ರೀಗಳು ಪ್ರಭಾವ ಹೊಂದಿದ್ದು ಬಿ.ವೈ.ವಿಜಯೇಂದ್ರ ಚುನಾವಣೆ ಘೋಷಣೆ ಬಳಿಕ ಭೇಟಯಿತ್ತಿದ್ದು ಈಗ ಮತ್ತೆ ಬಿಜೆಪಿ ಮುಖಂಡರ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಅಭ್ಯರ್ಥಿಗಳಿಗೆ ಚಿಹ್ನೆ ಪಟ್ಟಿ ಬಿಡುಗಡೆ: ಉಪ ಚುನಾವಣೆಯ ಕದನದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದಿರುವ 15 ಅಭ್ಯರ್ಥಿಗಳ ಚಿಹ್ನೆ ಒಳಗೊಂಡ ಪಟ್ಟಿಯನ್ನು ಚುನಾವಣಾಧಿಕಾರಿ ನಂದಿನಿ ದೇವಿ ಮಂಗಳವಾರ ಬಿಡುಗಡೆ ಮಾಡಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಭತ್ತದ ತೆನೆಹೊತ್ತ ರೈತ ಮಹಿಳೆ, ಸಿಪಿಐ ಅಭ್ಯರ್ಥಿ ಗಿರೀಶ್‌ಗೆ ತೆನೆ ಮತ್ತು ಕುಡುಗೋಲು, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಹಸ್ತ, ಬಿಜೆಪಿಯ ಸಿ.ಎಂ.ರಾಜೇಶ್ ಗೌಡಗೆ ಕಮಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಿ.ಟಿ.ಓಬಳೇಶಪ್ಪಗೆ ಸೀಟಿ, ರೈತ ಭಾರತ ಪಾರ್ಟಿಯ ತಿಮ್ಮಕ್ಕ ಟಿಲ್ಲರ್, ರಿಪಬ್ಲಿಕ್ ಸೇನೆಯ ಪ್ರೇಮಕ್ಕ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ. ಸ್ವತಂತ್ರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೋಗೆ ಚಪ್ಪಲಿ, ಎಂಎಲ್‌ಎಆರ್ ಕಂಬಣ್ಣ ಆಟೋ ರಿಕ್ಷಾ, ಗುರುಸಿದ್ದಪ್ಪಗೆ ಹಣ್ಣುಗಳು ತುಂಬಿರುವ ಬುಟ್ಟಿ, ವೈ.ಜಯಣ್ಣಗೆ ತೆಂಗಿನ ತೋಟ, ಎಲ್.ಕೆ.ದೇವರಾಜುಗೆ ವಜ್ರ, ಜಿ.ಎಸ್.ನಾಗರಾಜ ಕಹಳೆ ಊದುತ್ತಿರುವ ಮನುಷ್ಯ, ರಂಗಪ್ಪಗೆ ಕೊಳಲು, ಸಾದಿಕ್ ಪಾಷಗೆ ಕಬ್ಬು ರೈತ ಇರುವ ಚಿಹ್ನೆಗಳು ದೊರೆತಿವೆ.

    ಎಚ್ಡಿಡಿ ಅಖಾಡಕ್ಕೆ: ಶಿರಾ ಉಪಸಮರ ಅಖಾಡಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬುಧವಾರ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ. 2 ದಿನಗಳ ಶಿರಾ ಪ್ರವಾಸ ಕೈಗೊಳ್ಳುವ ದೊಡ್ಡಗೌಡರು ಕ್ಷೇತ್ರದಲ್ಲಿ ಸಂಚಲನ ಮೂಡಿಸಲಿದ್ದಾರೆ. ಸ್ವಲ್ಪಮಟ್ಟಿಗೆ ಅಧೀರರಾಗಿರುವ ಕಾರ್ಯಕರ್ತರಲ್ಲಿ ಹುರುಪು ತುಂಬಲಿದ್ದಾರೆ. ಗೌಡಗೆರೆ ಹೋಬಳಿ ಚಂಗಾವರದಲ್ಲಿ ಬೆಳಗ್ಗೆ 11.30ಕ್ಕೆ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4ಕ್ಕೆ ನಗರದ ಪಕ್ಷದ ಕಚೇರಿಗೆ ಭೇಟಿ ರಾಜಕೀಯ ಬೆಳವಣಿಗೆಗಳ ಕುರಿತು, ಚುನಾವಣಾ ತಂತ್ರಗಾರಿಕೆಗಳ ಬಗ್ಗೆ ಮುಖಂಡರ ಜತೆ ಚರ್ಚಿಸಲಿದ್ದಾರೆ. ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವ ದೇವೇಗೌಡರು ಗುರುವಾರ ಹುಲಿಕುಂಟೆ ಹೋಬಳಿ ಬರಗೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುವರು. ಇತ್ತ ಬಿಜೆಪಿ ಪರವಾಗಿ ವಸತಿ ಸಚಿವ ವಿ.ಸೋಮಣ್ಣ ಕೂಡ ಪ್ರಚಾರ ಮಾಡಲಿದ್ದಾರೆ. ಶಿರಾಕ್ಕೆ ತೆರಳುವ ಮಾರ್ಗ ಮಾಧ್ಯೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಮದಲೂರು, ಕೊಟ್ಟ, ಭೂವನಹಳ್ಳಿ, ಲಕ್ಷ್ಮೀ ಸಾಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts