More

    ಬಿಜೆಪಿಯಿಂದ ದಲಿತ ವಿರೋಧಿ ನೀತಿ

    ಎಚ್.ಡಿ.ಕೋಟೆ: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಜಾರಿ ಮಾಡಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರದ್ದುಮಾಡಿ ದಲಿತ ವಿರೋಧಿ ನೀತಿ ಅನುಸರಿಸಿತು. ಹಾಗಾಗಿ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ದಸಂಸ ಐಕ್ಯತಾ ಜಿಲ್ಲಾ ಸಮಿತಿ ಸದಸ್ಯ ಬೆಟ್ಟಯ್ಯ ಕೋಟೆ ತಿಳಿಸಿದರು.


    ದಸಂಸ ಐಕ್ಯತಾ ಸಮಿತಿ ಜಿಲ್ಲಾ ಹಾಗೂ ತಾಲೂಕು ಸದಸ್ಯರ ಜತೆಗೂಡಿ ಸೋಮವಾರ ತಾಲೂಕಿನ ವಿವಿಧ ದಲಿತ ಜನಾಂಗ ವಾಸ ಮಾಡುತ್ತಿರುವ ಗ್ರಾಮಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.


    ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದಲಿತ ಜನಾಂಗ ಆರ್ಥಿಕವಾಗಿ ಸದೃಢಗೊಳ್ಳಲು ಹಲವಾರು ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಮ್ಮ ಮಕ್ಕಳು ಉನ್ನತ ವ್ಯಾಸಂಗದಿಂದ ವಂಚಿತರಾಗುತ್ತಿದ್ದಾರೆ. ಮೊದಲೆಲ್ಲಾ ನಮ್ಮ ಮಕ್ಕಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸರ್ಕಾರ ಅನುಕೂಲ ಮಾಡಿತ್ತು. ಆದರೆ ಇಂದು ಶುಲ್ಕ ಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಗ್ರಾಮೀಣ ಭಾಗದ ನಮ್ಮ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗದಿಂದ ವಂಚಿತರಾಗುತ್ತಿದ್ದಾರೆ ಎಂದರು.


    ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣದಿಂದ ವಂಚಿತರಾಗಬೇಕು ಎಂಬುದೇ ಬಿಜೆಪಿಯ ಮೂಲ ಅಜೆಂಡಾ. ಹಾಗಾಗಿ ಬಿಜೆಪಿಗೆ ದಲಿತರು ಮತ ನೀಡಬಾರದು ಎಂದರು.


    ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ನಡೆಸಲು ಚುನಾವಣಾ ಪೂರ್ವ ಭಾಗವಾಗಿ ಮಾತುಕತೆ ಮಾಡಿಕೊಂಡಿದ್ದಾರೆ. ನಾವು ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಮತ ನೀಡಿದ್ದೇ ಆದಲ್ಲಿ ನಾವು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತೆ ಆಗುತ್ತದೆ. ಆ ಕಾರಣಕ್ಕಾಗಿ ಸಮುದಾಯ ಜೆಡಿಎಸ್ ಪಕ್ಷಕ್ಕೂ ಮತ ನೀಡಬಾರದು ಎಂದು ತಿಳಿಸಿದರು.


    ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯ ಅಲ್ಲ. ಆದರೆ ಪ್ರಸ್ತುತ ಕೋಮುವಾದಿ ಶಕ್ತಿಗಳನ್ನು ಬಗ್ಗೆ ಬಡಿಯಲು ಏಕೈಕ ಅಸ್ತ್ರ ಕಾಂಗ್ರೆಸ್ ಪಕ್ಷ ಒಂದೇ. ಆ ಕಾರಣಕ್ಕಾಗಿ ನಾವು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ ಎಂದರು.


    ತಾಲೂಕಿನಲ್ಲಿ ಐದು ವರ್ಷಗಳ ಕಾಲ ಶಾಸಕ ಅನಿಲ್ ಚಿಕ್ಕಮಾದು ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದು, ಮತ್ತೆ ನಾವು ಅವರಿಗೆ ಅಧಿಕಾರ ನೀಡಿದರೆ ತಾಲೂಕು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ. ಜತೆಗೆ ಎಲ್ಲ ಸಮುದಾಯವನ್ನು ಯಾವುದೇ ಒಡಕು ಇಲ್ಲದೇ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿರುವ ಕಾರಣ ತಾಲೂಕಿನ ದಲಿತ ಸಮುದಾಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.


    ದೇವಲಪುರ, ಬಾಡಗ, ಸಾಗರೆ, ಸರಗೂರು, ಚೆನ್ನಿಪುರ, ಹೆಗ್ಗನೂರು, ಹತ್ವಾಳ್, ಹಂಪಾಪುರ, ಹೊಮ್ಮರಗಳ್ಳಿ, ಕಂಚಮಳ್ಳಿ, ಕೊಹಳ, ದೆಗ್ಗಲಹುಂಡಿ, ಸಿದ್ದಯ್ಯನಹುಂಡಿ, ಹೊಳೆಹುಂಡಿ, ಮಹಾದೇವನಗರ, ಜಕ್ಕಹಳ್ಳಿ, ಹೈರಿಗೆ, ಮಾದಪುರ, ಯರಹಳ್ಳಿ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.


    ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಸಣ್ಣಕುಮಾರ್, ಹೆಗ್ಗನೂರು ನಿಂಗರಾಜು, ಹೊಮ್ಮರಗಳ್ಳಿ ಸಿದ್ದರಾಜು, ಕೆ.ಜಿ.ಹಳ್ಳಿ ಆನಂದ, ಜಕ್ಕಹಳ್ಳಿ ಮಲ್ಲೇಶ್, ದಾಸಯ್ಯ ಹೊಳೆಹುಂಡಿ, ಆಟೋ ಕುಮಾರ, ಚಿಕ್ಕಣ್ಣ ಕೆ.ಜಿ.ಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts