More

    ಬಿಜೆಪಿಯಲ್ಲಿ ಆಂತರಿಕ ಮತದಾನ | ಟಿಕೆಟ್ ಆಕಾಂಕ್ಷಿಗಳ ಭಿನ್ನರಾಗ

    ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖ ಘಟಕಗಳ ಪದಾಧಿಕಾರಿಗಳ ಆಂತರಿಕ ಮತದಾನಕ್ಕೆ ಬಿಜೆಪಿ ಮೊರೆ ಹೋಗಿದೆ.

    ಬಾಗಲಕೋಟೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಮಾಜಿ ಸಿಎಂ ಜಗದೀಶ ಶೆಟ್ಟರ್, ಬೆಳಗಾವಿ ಜಿಲ್ಲೆಯ ಮುಖಂಡ ಅಭಯ ಪಾಟೀಲ ನೇತೃತ್ವದಲ್ಲಿ ಆಂತರಿಕ ಆಭಿಪ್ರಾಯ ಸಂಗ್ರಹದ ಮತದಾನ ನಡೆಯಿತು.

    ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನದವರೆಗೂ ಜಿಲ್ಲೆಯ ಏಳು ಕ್ಷೇತ್ರಗಳ ಆಯಾ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಸೇರಿ ವಿವಿಧ ಮೋರ್ಚಾದ ಪ್ರಮುಖ ಪದಾಧಿಕಾರಿಗಳನ್ನು ಒಳಗೊಂಡ ಪ್ರತಿ ಕ್ಷೇತ್ರದಲ್ಲಿ ಅಂದಾಜು 80 ಜನರಿಂದ ಮತದಾನ ಪ್ರಕ್ರಿಯೆ ನಡೆಯಿತು.

    ಬೆಳಗ್ಗೆಯಿಂದಲೇ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಒಂದೊಂದೇ ಕ್ಷೇತ್ರದ ಆಂತರಿಕ ಮತದಾನ ಪ್ರಕ್ರಿಯೆ ನಡೆಸಿದ ಮುಖಂಡರು, ಅಂತಿಮವಾಗಿ ಮತದಾನದ ವರದಿಯನ್ನು ರಾಜ್ಯ ಮುಖಂಡರಿಗೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
    ಬಿಜೆಪಿ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವೀಕ್ಷಕರಾಗಿ ಬಂದಿದ್ದ ಶಾಸಕ ಅಭಯ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಇದ್ದರು. ಇನ್ನು ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಲಿ, ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಇದ್ದರು.

    ಆಂತರಿಕ ಮತದಾನದ ಬಗ್ಗೆ ಅಸಮಾಧಾನ: ಬಿಜೆಪಿ ಪಕ್ಷವೇನೋ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಲು ಈ ರೀತಿ ಆಂತರಿಕ ಮತದಾನಕ್ಕೆ ಮುಂದಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಈ ಬಗ್ಗೆ ಟಿಕೆಟ್ ಆಕಾಂಕ್ಷಿಗಳಿಗೆ ಮಾತ್ರ ಬಹುತೇಕ ಸಮಾಧಾನ ತಂದಿಲ್ಲ. ಶುಕ್ರವಾರ ನಡೆದ ಆಂತರಿಕ ಮತದಾನದ ಬಗ್ಗೆ ಕೆಲ ಆಕಾಂಕ್ಷಿಗಳು ತಮ್ಮ ತಮ್ಮಲ್ಲಿ ಅಸಮಾಧಾನ ಹೊರ ಹಾಕಿದರೆ ತೇರದಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ಅಂಬಲಿ ಹಾಗೂ ಬೆಂಬಲಿಗರು ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದರು.

    ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಕಿಡಿಕಾರಿದ ರಾಜು ಅಂಬಲಿ ಹಾಗೂ ಬೆಂಬಲಿಗರು ಬಿಜೆಪಿ ಜಿಲ್ಲಾ ಕಚೇರಿ ಎದುರೇ ಪ್ರತಿಭಟನೆ ನಡೆಸಿ ಆಂತರಿಕ ಮತದಾನಕ್ಕೆ ವಿರೋಧ ವ್ಯಕ್ತಪಡಿಸಿದರು.

    ಪ್ರತಿ ಕ್ಷೇತ್ರದಲ್ಲಿ ಹಾಲಿ ಶಾಸಕರ ಮಾತು ಕೇಳುವವರನ್ನೆ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿರುತ್ತಾರೆ. ಈಗ ಅವರು ಅವರಿಗೆ ಮತದಾನ ಮಾಡುತ್ತಾರೆ. ಇದರಿಂದ ಏನು ಸಾಧಿಸಿದಂತಾಯಿತು? ಸಂಘ ಪರಿವಾರ ನಡೆಸಿರುವ ಆಂತರಿಕ ಸಮೀಕ್ಷೆ, ಬಿಜೆಪಿ ಸಮೀಕ್ಷೆ, ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಆಧರಿಸಿ ಟಿಕೆಟ್ ಘೋಷಿಸಬೇಕೇ ವಿನಾ ಹಾಲಿ ಶಾಸಕರಿಗೆ ಜೈಕಾರ ಹಾಕುವ ಪದಾಧಿಕಾರಿಗಳ ಮತದಾನದಿಂದ ಅಲ್ಲ ಎಂದು ರಾಜು ಅಂಬಲಿ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.

    ತೇರದಾಳ ಕ್ಷೇತ್ರದಲ್ಲಿ ನೇಕಾರರಿಗೆ ಟಿಕೆಟ್ ಕೊಡಬೇಕು. ಆರಂಭದಿಂದಲೂ ನೇಕಾರರು ಬಿಜೆಪಿ ಬೆಂಬಲಿಸುತ್ತ ಬಂದಿದ್ದಾರೆ. ನೇಕಾರರು ಬರೀ ಬಂಟಿಂಗ್ಸ್, ಬ್ಯಾನರ್ ಕಟ್ಟಲು ಸೀಮಿತವಲ್ಲ. ಅವರಿಗೊಮ್ಮೆ ವಿಧಾನಸಭೆ ಪ್ರವೇಶಕ್ಕೆ ಅವಕಾಶ ಕೊಡಬೇಕು. ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನೇಕಾರರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿ ಏಕೆ ಕೊಡಲ್ಲ. ಈಗ ಇರುವ ಶಾಸಕರು ಎಲ್ಲ ಅಧಿಕಾರವನ್ನು ತಾವೇ ಅನುಭವಿಸುತ್ತಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೋ ಇಲ್ಲವೋ ಎಂದು ಕ್ಷೇತ್ರದ ಜನರನ್ನು ಕೇಳಲಿ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ನೇಕಾರ ಮುಖಂಡ ರಾಜು ಅಂಬಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲೆ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜು ಅಂಬಲಿ ಅವರಿಗೆ ತೇರದಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು, ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ನೇಕಾರರೇ ನಿರ್ಣಾಯಕ ಆಗಿರುವ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ನೇಕಾರರಿಗೆ ಟಿಕೆಟ್ ಕೊಡದೆ ಇದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.

    ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರ ಸಂಖ್ಯೆ ಅಧಿಕವಾಗಿದ್ದು, ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ನೇಕಾರರ ಮತದಾರರು ಫಲಿತಾಂಶ ಏರುಪೇರು ಮಾಡುವ ಶಕ್ತಿ ಹೊಂದಿದ್ದಾರೆ. ಇದೀಗ ನೇಕಾರರು ಜಿಲ್ಲೆಯಲ್ಲಿ ತೇರದಾಳ ಕ್ಷೇತ್ರ ನೇಕಾರರಿಗೆ ಬಿಟ್ಟು ಕೊಡಬೇಕು ಎನ್ನುವ ಬಿಗಿಪಟ್ಟು ಹಿಡಿದಿದ್ದು, ಪಕ್ಷದ ಮುಖಂಡರಿಗೆ ಹೊಸ ತಲೆಬಿಸಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

    ತೇರದಾಳ ಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ 3 ಸಲ ಸ್ಪರ್ಧೆ ಮಾಡಿದ್ದು, ಎರಡು ಸಲ ಗೆದ್ದಿದ್ದಾರೆ. ಈ ಸಲವೂ ಅವರಿಗೆ ಟಿಕೆಟ್ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ನೇಕಾರರ ಬಿಗಿಪಟ್ಟು ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾಯ್ದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts