More

    ಬಿಗಿಯಾದ ಲಾಕ್​ಡೌನ್

    ಹುಬ್ಬಳ್ಳಿ: ಬಿಕೋ ಎನ್ನುತ್ತಿರುವ ರಸ್ತೆಗಳು… ಬಡಾವಣೆಯೊಳಗಿನ ರಸ್ತೆಗಳೂ ಖಾಲಿ…ಲಾಕ್​ಡೌನ್ ಆದೇಶ ಜಾರಿಗೆ ಪೂರಕವಾಗಿದ್ದ ಸುಡು ಬಿಸಿಲು…

    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಭಾನುವಾರ ಕಂಡುಬಂದ ದೃಶ್ಯ ಇದು. ಮಟನ್ ಅಂಗಡಿಗಳ ಎದುರು ಕಂಡುಬಂದ ಜನದಟ್ಟಣೆ ಹೊರತುಪಡಿಸಿದರೆ ಇಡಿ ಹುಬ್ಬಳ್ಳಿಯಲ್ಲಿ ಭಾನುವಾರ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ದಿನಸಿ ಅಂಗಡಿಗಳೂ ಬಾಗಿಲು ಮುಚ್ಚಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲೇ ಇಲ್ಲ.

    ಔಷಧ ಅಂಗಡಿಗಳ ಎದುರು ಬೆರಳೆಣಿಕೆಯ ಜನ ಸಾಲುಗಟ್ಟಿ ನಿಂತಿರುವುದು ಕಾಣಿಸಿತು. ಕೇಶ್ವಾಪುರ, ಗಾಂಧಿವಾಡ, ಸ್ಟೇಷನ್ ರಸ್ತೆ, ದುರ್ಗದಬೈಲ್, ಪೆಂಡಾರ ಗಲ್ಲಿ, ಬಂಕಾಪುರ ಚೌಕ, ಗೋಕುಲ ರಸ್ತೆ, ವಿದ್ಯಾನಗರ ಸೇರಿ ಪ್ರಮುಖ ರಸ್ತೆಗಳು ಭಣಗುಡುತ್ತಿದ್ದವು. ಧಾರವಾಡದ ಜುಬಿಲಿ ವೃತ್ತ, ಟಿಕಾರೆ ರಸ್ತೆ, ಸುಭಾಷ ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು.

    ಈ ಮಧ್ಯೆ ಕೆಲವೆಡೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪಾಗಿ ಕುಳಿತು ಕೇರಂ ಆಡುವುದು, ಹರಟೆ ಹೊಡೆಯುತ್ತಿದ್ದರು. ಸುಶಿಕ್ಷಿತರು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಅಚ್ಚರಿ ಮೂಡಿಸುವಂತಿತ್ತು.

    ಕರ್ತವ್ಯದಲ್ಲಿದ್ದ ಪೊಲೀಸರೂ ಬಿಸಿಲಿನ ತಾಪ ತಾಳದೇ ಸಮೀಪದ ಮರ ಹಾಗೂ ಕಟ್ಟಡಗಳ ನೆರಳು ಆಶ್ರಯಿಸಿದ್ದರು.

    ಸಮೀಕ್ಷೆ ಕಾರ್ಯ: ಕರೊನಾ ಸೋಂಕಿತ ವ್ಯಕ್ತಿಯ ನಿವಾಸ ಇದ್ದ ಡಾಕಪ್ಪ ಸರ್ಕಲ್ ಸುತ್ತಲಿನ 1 ಕಿಮೀ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಭಾನುವಾರ ಭಾಗಶಃ ಪೂರ್ಣಗೊಂಡಿತು. ಈ ಪ್ರದೇಶದ 1 ಕಿಮೀ ವ್ಯಾಪ್ತಿಯ ಆಚೆಗಿನ ಬಡಾವಣೆಯಲ್ಲಿಯೂ ಆರೋಗ್ಯ ಇಲಾಖೆ, ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾನುವಾರದಿಂದಲೇ ಸರ್ವೆ ಕಾರ್ಯ ಪ್ರಾರಂಭಿಸಿದರು.

    ಹಾಸ್ಟೆಲ್​ಗೆ ಸ್ಥಳಾಂತರ: ಬುಡರಸಿಂಗಿ ಗ್ರಾಮದ ಹೊರಗೆ ತಂಗಿದ್ದ ಮಹಾರಾಷ್ಟ್ರ ಪಂಢರಾಪುರ ಮೂಲದ 30 ಜನರನ್ನು ನೂಲ್ವಿ ಗ್ರಾಮದ ಹಾಸ್ಟೆಲ್​ಗೆ ಸ್ಥಳಾಂತರಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಸಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್. ಹಿತ್ತಲಮನಿ ಅವರು ಶನಿವಾರ ಈ 30 ಜನರನ್ನು ನೂಲ್ವಿಯ ಹಾಸ್ಟೆಲ್​ಗೆ ಸ್ಥಳಾಂತರಿಸಿದರು. ಬುಡರಸಿಂಗಿ ಗ್ರಾಮದ ಹೊರಗೆ ವಾಸ್ತವ್ಯ ಮಾಡಿದ್ದ ಜನರ ಬಗ್ಗೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ನಂತರ ವಿವಿಧ ಸಂಘಟನೆಗಳು ಇವರಿಗೆ ಆಹಾರ ಸಾಮಗ್ರಿ ಹಾಗೂ ಊಟ, ಉಪಹಾರ ನೀಡಿದ್ದವು. ಯಾವುದೇ ಸಂಘಟನೆಗಳು ಬಹಿರಂಗವಾಗಿ ಆಹಾರ ಸಾಮಗ್ರಿ ಹಂಚದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರ ಪಂಢರಾಪುರದ ಜನರು ಆಹಾರ ಸಾಮಗ್ರಿ ಇಲ್ಲದೆ ತೊಂದರೆಗೀಡಾಗಿದ್ದರು. ಇದನ್ನರಿತ ತಾಲೂಕು ಆಡಳಿತ ಅಲ್ಲಿನ ಜನರನ್ನು ನೂಲ್ವಿಯ ಹಾಸ್ಟೆಲ್​ಗೆ ಸ್ಥಳಾಂತರಿಸಿ ಉಪಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದೆ.

    ಜ್ವರ ತಪಾಸಣೆ ಕೇಂದ್ರ ಸ್ಥಾಪನೆ: ಕರೊನಾ ಸೋಂಕು ಹೆಚ್ಚುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕರಲ್ಲಿ ಕಾಣಿಸುವ ಜ್ವರ ಹಾಗೂ ಇತರ ಸೋಂಕಿನ ಬಗ್ಗೆ ತಪಾಸಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಬ್ಬಳ್ಳಿ- ಧಾರವಾಡದಲ್ಲಿ 7 ಜ್ವರ ತಪಾಸಣೆ ಕೇಂದ್ರ ಸ್ಥಾಪಿಸಿದೆ. ಧಾರವಾಡದ ಜಿಲ್ಲಾ ಆಸ್ಪತ್ರೆ, ಬಾರಾಕೊಟ್ರಿ, ಪುರೋಹಿತ ನಗರ, ಮದಾರಮಡ್ಡಿ, ಹುಬ್ಬಳ್ಳಿಯ ಕಿಮ್ಸ್ನಲ್ಲಿ 2, ಚಿಟಗುಪ್ಪಿ ಆಸ್ಪತ್ರೆಯಲ್ಲಿ 1 ಜ್ವರ ತಪಾಸಣೆ ಕೇಂದ್ರ ಪ್ರಾರಂಭಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts