More

    ಬಿಗಿಗೊಂಡ ಲಾಕ್​ಡೌನ್

    ಶಿರಸಿ: ಕಳೆದೆರಡು ದಿನಗಳಿಂದ ನಗರದಲ್ಲಿ ಸಡಿಲಗೊಂಡಿದ್ದ ಲಾಕ್​ಡೌನ್ ವ್ಯವಸ್ಥೆ ಗುರುವಾರದಿಂದ ಬಿಗಿಯಾಗಿದೆ. ನಗರದ ವಿವಿಧ ಗಲ್ಲಿಗಳಲ್ಲಿ ಬೆಳಗಿನಿಂದಲೇ ಕಾರ್ಯಾಚರಣೆಗಿಳಿದ ಪೊಲೀಸರು ಅನವಶ್ಯಕವಾಗಿ ರಸ್ತೆಗಿಳಿದವರ ಮೇಲೆ ಶಿಸ್ತು ಕ್ರಮ ಕೈಗೊಂಡರು.

    ಕಳೆದ ಎರಡು ದಿನಗಳಲ್ಲಿ ಸಾರ್ವಜನಿಕರು ಔಷಧ ಹಾಗೂ ದಿನಸಿ ಕಾರಣವೊಡ್ಡಿ ಅನಗತ್ಯವಾಗಿ ರಸ್ತೆಗಿಳಿದು ಲಾಕ್​ಡೌನ್ ಆದೇಶ ಉಲ್ಲಂಘಿಸಿದ್ದರು. ಪೊಲೀಸರು ಕೂಡ ವಿಶೇಷ ಕಾರ್ಯಾಚರಣೆ ಮಾಡದ ಕಾರಣ ಜನದಟ್ಟಣೆ ಹೆಚ್ಚಿತ್ತು. ಬುಧವಾರ ಈ ಕುರಿತು ‘ವಿಜಯವಾಣಿ’ ವಿಸ್ತತ ವರದಿ ಪ್ರಕಟಿಸಿ ತಾಲೂಕು ಆಡಳಿತವನ್ನು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದೆ.

    ಇಲ್ಲಿನ ವಿಕಾಸಾಶ್ರಮ ಬಯಲಿನಲ್ಲಿ ತರಕಾರಿ ಗೋದಾಮಿದ್ದು, ಸಾರ್ವಜನಿಕರು ತರಕಾರಿ ಖರೀದಿಗಾಗಿ ಬಂದಾಗ ಪೊಲೀಸರು ಅವರೆಲ್ಲರನ್ನು ಚದುರಿಸಿ, ವಾಹನಗಳೆಲ್ಲವನ್ನು ಪರಿಶೀಲಿಸಿದರು. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಹಿಡಿದು ಸವಾರರಿಗೆ ದಂಡ ಹಾಗೂ ಕೆಲ ಸವಾರರಿಗೆ ಲಾಠಿಯ ರುಚಿ ತೋರಿದರು. ಹುಬ್ಬಳ್ಳಿ ರಸ್ತೆ ಕೋಟೆಕೆರೆ ಬಳಿ ಮೀನು ಖರೀದಿಗೆ ಗುಂಪು ಸೇರಿದ ಜನರನ್ನು ಪೊಲೀಸ್ ಸಿಬ್ಬಂದಿ ಲಾಠಿ ಬೀಸಿ ಚದುರಿಸಿದರು. ಪ್ರಮುಖ ಚೆಕ್ ಪೋಸ್ಟ್​ಗಳಾದ ನಿಲೇಕಣಿ ಹಾಗೂ ಚಿಪಗಿಯಲ್ಲಿ ನಾಕಾಬಂಧಿ ಹಾಕಿ ಪ್ರತೀ ವಾಹನವನ್ನೂ ಪರಿಶೀಲನೆ ನಡೆಸಿದರು. ಲಾಕ್​ಡೌನ್ ಆದೇಶ ಜಾರಿಯಾದಾಗಿನಿಂದ ಈವರೆಗೆ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರು, ರಸ್ತೆ ನಿಯಮ ಉಲ್ಲಂಘಿಸಿದ 400ಕ್ಕೂ ಹೆಚ್ಚು ವಾಹನ ಸವಾರರ ಮೇಲೆ ಶಿರಸಿ ವೃತ್ತದ ಪೊಲೀಸರು ಕ್ರಮ ಕೈಗೊಂಡಿದ್ದು, ಅಂದಾಜು 2 ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

    ಕಳ್ಳಬಟ್ಟಿಗೆ ಬ್ರೇಕ್: ಅಬಕಾರಿ ಇಲಾಖೆ ವಿಷಪೂರಿತ ಮದ್ಯ ಸೇವನೆಯಿಂದ ಸಾವುನೋವು ಉಂಟಾಗಬಾರದೆಂಬ ಉದ್ದೇಶದಿಂದ ಬಿಗು ಕ್ರಮವಹಿಸಿದೆ ಎಂದು ಶಿರಸಿ ಉಪವಿಭಾಗದ ಅಬಕಾರಿ ಡಿವೈಎಸ್​ಪಿ ಮಹೇಂದ್ರ ನಾಯ್ಕ ತಿಳಿಸಿದ್ದಾರೆ. ಕಳ್ಳಬಟ್ಟಿ ತಯಾರಿಕೆ ಸಂಬಂಧ ಹಳೆಯ ಆರೋಪಿಗಳನ್ನು ವಿಚಾರಿಸಿ ಎಚ್ಚರಿಕೆ ನೀಡಲಾಗಿದೆ. ಒಂದೊಮ್ಮೆ ಕಳ್ಳಬಟ್ಟಿ ತಯಾರಿ ಮಾಡಿದರೆ 6 ತಿಂಗಳು ಜೈಲಿಗೆ ಹಾಕುವಂತೆ ಸೂಚಿಸಲಾಗಿದೆ. ಶಿರಸಿ-ಸಿದ್ದಾಪುರ ಭಾಗದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ, ಅಧಿಕಾರಿಗಳು ಹಗಲು, ರಾತ್ರಿಯೆನ್ನದೆ ಗಸ್ತು ತಿರುಗುತ್ತಿದ್ದಾರೆ. ಶಿರಸಿಯ ಭಾಶಿ, ಗಡಗೇರಿ, ಕಲಕರಡಿ, ಸಿದ್ದಾಪುರದ ಕೊಂಡ್ಲಿ, ಹೊಸೂರು, ಕೋಲಶಿರ್ಸಿ ಸೇರಿ ಹಳೆಯ ಕಳ್ಳಬಟ್ಟಿ ಕೇಂದ್ರಗಳನ್ನು ಸೇರಿ ಎಲ್ಲೆಡೆ ನಿತ್ಯವೂ ಪರಿಶೀಲನೆ ನಡೆಸಲಾಗಿದೆ.

    ರೈತರಿಗೆ ಪೆಟ್ರೋಲ್ : ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಪೆಟ್ರೋಲ್ ವಿತರಣೆ ಆರಂಭವಾಗಿದೆ. ಸ್ಥಳೀಯ ಸಹಕಾರಿ ಸಂಘಕ್ಕೆ ಪೆಟ್ರೋಲ್ ಹಾಗೂ ಡಿಸೇಲ್ ದಾಸ್ತಾನು ಮಾಡಿದ್ದು, ಅಗತ್ಯ ಇರುವ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಪೆಟ್ರೋಲ್ ಗಾಗೂ ಡಿಸೇಲ್ ವಿತರಣೆ ನಡೆದಿದೆ. ಕೃಷಿ ಪಂಪ್​ಸೆಟ್, ಟಿಲ್ಲರ್, ಅಡಕೆ ಸುಲಿಯುವ ಯಂತ್ರ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ಯಂತ್ರಗಳಿಗೆ ಪೂರಕವಾಗಿ ರೈತರಿಗೆ ಮಾರುಕಟ್ಟೆ ದರದ ಅನ್ವಯ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಿಡಿಒ ಮುಖಾಂತರ ಅನುಮತಿ ಪಡೆದು ಇಂಧನ ಪಡೆಯಲು ಅವಕಾಶ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts