More

    ಬಿಎಸ್ಸೆಸ್ಕೆಗೆ ಕಬ್ಬು ಸಾಗಿಸಿದ ರೈತರು ಪರೆಶಾನ್

    ಸಂಜೀವಕುಮಾರ ಜುನ್ನಾ ಹುಮನಾಬಾದ್
    ತೀವ್ರ ಆರ್ಥಿಕ ಸಂಕಷ್ಟದ ನಡುವೆ 2021-22ರಲ್ಲಿ ಕಬ್ಬು ನುರಿಸಿದ ಹಳ್ಳಿಖೇಡ್(ಬಿ) ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಇದೀಗ ರೈತರಿಗೆ ಹಣ ಪಾವತಿಸಲು ಪರದಾಡುತ್ತಿದ್ದು, ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರು ಪರೇಶಾನ್ ಆಗಿದ್ದಾರೆ.

    ಸಾಲದ ಹೊರೆ ಮತ್ತು ಕ್ರಷಿಂಗ್ ಆರಂಭಕ್ಕೂ ಆರ್ಥಿಕ ಸಮಸ್ಯೆ ಮಧ್ಯೆ ವಿವಿಧ ಮೂಲಗಳಿಂದ ಅನುದಾನ ಕ್ರೋಡೀಕರಿಸಿ ಕಳೆದ ಡಿಸೆಂಬರ್​ನಲ್ಲಿ ಕಾರ್ಖಾನೆ ಆರಂಭಿಸಲಾಯಿತು. ಒಂದು ತಿಂಗಳು ಕ್ರಷಿಂಗ್ ಮಾಡಿದ ಕಾರ್ಖಾನೆಗೆ ಜಿಲ್ಲೆಯ 986 ರೈತರು ಕಬ್ಬು ಸಾಗಿಸಿದ್ದು, 54,574 ಟನ್ ಕ್ರಷಿಂಗ್ ಮಾಡಲಾಗಿದೆ. ಟನ್​ಗೆ 2 ಸಾವಿರ ರೂ.ನಂತೆ 10.92 ಕೋಟಿ ರೂ. ಪಾವತಿಸಬೇಕು. ಆದರೆ ಈವರೆಗೆ ಟನ್ಗೆ 1000 ರೂ.ಯಂತೆ 1.58 ಕೋಟಿ ರೂ. ಮಾತ್ರ ಪಾವತಿಸಿದ್ದು, 9.33 ಕೋಟಿ ರೂ. ರೈತರಿಗೆ ಕೊಡಬೇಕಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿಯಲ್ಲಿ ಸದ್ಯ ನಯಾಪೈಸೆ ಇಲ್ಲ. ಹೀಗಾಗಿ ಬಾಕಿ ಹೇಗೆ ಕೊಡುತ್ತಾರೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ.

    ಆರ್ಥಿಕ ಸಮಸ್ಯೆ ಕಾರಣ ಎರಡು ವರ್ಷ ಕಾರ್ಖಾನೆ ಸ್ಥಗಿತಗೊಂಡಿತ್ತು. ಕಳೆದ ವರ್ಷ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಾಜಿ ಶಾಸಕ ಸುಭಾಷ ಕಲ್ಲೂರ್ ಪೆನಾಲ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಕಲ್ಲೂರ್ ಅಧ್ಯಕ್ಷರಾದರೆ, ಕೆಎಸ್ಐಐಡಿಎಸ್ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಉಪಾಧ್ಯಕ್ಷರು. ಸಕರ್ಾರ ನೆರವು ನೀಡುವ ಭರವಸೆಯೊಂದಿಗೆ ಖಾಸಗಿಯಾಗಿ 11 ಕೋಟಿ ರೂ. ಸಂಗ್ರಹಿಸಿ ಕ್ರಷಿಂಗ್ ಆರಂಭಿಸಿತು. 54.57 ಸಾವಿರ ಟನ್ ಕ್ರಷಿಂಗ್ ಮಾಡಿದ್ದು, ಕೇವಲ ಶೇ.6 ರಿಕವರಿ ಬಂದಿದೆ. ಉತ್ಪಾದನೆಯಾದ ಸಕ್ಕರೆ ಮಾರಾಟದಿಂದ ಬಂದಿದ್ದು ಕೇವಲ 9 ಕೋಟಿ ರೂ. ಅದರಲ್ಲಿ ಕಬ್ಬು ಸಾಗಿಸಿದ ರೈತರಿಗೆ ಸ್ವಲ್ಪ ಹಣ ಪಾವತಿ ಮಾಡಿದರೆ, ಇನ್ನುಳಿದ ಹಣ ಕ್ರಷಿಂಗ್ ಆರಂಭಿಸಲು ತಂದಿದ್ದ ಸಾಲ ತೀರಿಸಲಾಗಿದೆ.

    ರೈತರಿಗೆ 9.33 ಕೋಟಿ ರೂ. ಪಾವತಿಸಬೇಕಾಗಿದೆ. ಅಲ್ಲದೆ 3.19 ಕೋಟಿ ರೂ. ಕಬ್ಬು ಸಾಗಣೆ ಮತ್ತು ಕಾರ್ಮಿಕರ ಬಾಕಿ, ಕಾರ್ಖಾನೆ ಸಿಬ್ಬಂದಿ ಸದ್ಯದ ವೇತನ 3.95 ಕೋಟಿ ರೂ. ಹಾಗೂ 37 ತಿಂಗಳ ಹಳೇ ವೇತನ 13.34 ಕೋಟಿ ರೂ. ನೀಡಬೇಕಿದೆ. ಇಷ್ಟೆಲ್ಲ ನೀಡಬೇಕಾದರೆ ಸಕರ್ಾರ ನೆರವು ಬೇಕೇಬೇಕು. ಕಾರ್ಖಾನೆ ಆಡಳಿತ ಮಂಡಳಿ ಹಲವು ಬಾರಿ ಸಿಎಂ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    ಪ್ರತಿಪಕ್ಷದಲ್ಲಿದ್ದಾಗ ಕಾರ್ಖಾನೆ ಪುನಶ್ಚೇತನ ವಿಷಯ ಮುಂದಿಟ್ಟುಕೊಂಡು ಗುಲ್ಲೆಬ್ಬಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯವರು, ಈಗ ಅಧಿಕಾರಕ್ಕೆ ಬಂದ ಬಳಿಕ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಕೇಸರಿ ಪಡೆಯ ಈ ದ್ವಂದ್ವ ನೀತಿ ಕಾರ್ಖಾನೆ ಅವಲಂಬಿಸಿರುವ ರೈತರು, ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ನೆರವು ನೀಡುವುದಾಗಿ ಹೇಳಿ ಮರೆತ ಬಿಜೆಪಿ: ನಾವು ಅಧಿಕಾರಕ್ಕೆ ಬಂದರೆ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಕೊಡುವುದಾಗಿ ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ನಾಯಕರು ವಾಗ್ದಾನ ಮಾಡಿದ್ದರು. ಪ್ರಚಾರ ವೇಳೆ ಬಿ.ಎಸ್. ಯಡಿಯೂರಪ್ಪ ಅವರು ರೇಕುಳಗಿ ಶಂಭುಲಿಂಗೇಶ್ವರ ಮಂದಿರದಲ್ಲಿ ನಡೆದಿದ್ದ ರೈತರೊಂದಿಗಿನ ಸಂವಾದದಲ್ಲಿ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿದ್ದರು. ಅಮಿತ್ ಷಾ ಅವರು ಹುಮನಾಬಾದ್ಗೆ ಬಂದಾಗ ರೈತರ ಸಭೆಯಲ್ಲಿ ಬಿಎಸ್ಸೆಸ್ಕೆಗೆ ನೆರವು ನೀಡುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಮೂರು ವರ್ಷವಾದರೂ ಪ್ಯಾಕೇಜ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರ್ಖಾನೆ ಆಡಳಿತ ಮಂಡಳಿ ಬಿಜೆಪಿ ಮುಖಂಡರ ಕೈಯಲ್ಲಿದ್ದರೂ ನೆರವು ಮಾತ್ರ ಸಿಗುವ ಲಕ್ಷಣ ಕಾಣುತ್ತಿಲ್ಲ.

    ಕಾರ್ಖಾನೆಗೆ ಆರ್ಥಿಕ ನೆರವು ಮತ್ತು ಸಾಲಕ್ಕೆ ಖಾತ್ರಿ ನೀಡುವಂತೆ ಸಕರ್ಾರ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಶನಿವಾರ ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಸಕರ್ಾರ ನೆರವು ನೀಡಿದರೆ ಮಾತ್ರ ರೈತರಿಗೆ ಬಾಕಿ ಹಣ ನೀಡಲು ಸಾಧ್ಯ.
    | ಸುಭಾಷ ಕಲ್ಲೂರ್, ಕಾರ್ಖಾನೆ ಅಧ್ಯಕ್ಷ

    ಬಿಎಸ್ಸೆಸ್ಕೆ ಪುನಶ್ಚೇತನಕ್ಕೆ ನೆರವು ನೀಡುವಂತೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದು, ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸಲಾಗಿದೆ. ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರು ಹಣಕ್ಕಾಗಿ ಪರದಾಡುತ್ತಿರುವುದಕ್ಕೆ ಯಾರು ಹೊಣೆ? ತಕ್ಷಣ ಸರ್ಕಾರ ಕಾರ್ಖಾನೆ ನೆರವಿಗೆ ಬರಬೇಕು.
    | ರಾಜಶೇಖರ ಪಾಟೀಲ್, ಶಾಸಕ

    ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಸೆಸ್ಕೆ ಪುನಶ್ಚೇತನಕ್ಕೆ ಸರ್ಕಾರ ತಕ್ಷಣ ವಿಶೇಷ ಪ್ಯಾಕೇಜ್ ಕೊಡಬೇಕು. ಈ ಹಿಂದಿನ ಚುನಾವಣೆ ಪ್ರಚಾರ ವೇಳೆ ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ರೈತರು, ಕಾರ್ಮಿಕರ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ.
    | ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts