More

    ಬಿಎಸ್‌ವೈ ಕೃಪಾಶೀರ್ವಾದ ಚಂದ್ರಪ್ಪ ಮರೆತಂತಿದೆ

    ಚಿತ್ರದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕೃಪಾಶೀರ್ವಾದಿಂದ ಈ ಹಿಂದೆ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಅಧ್ಯಕ್ಷನಾಗಿದ್ದು, ಎಂಬುದನ್ನೇ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮರೆತಿದ್ದಾನೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಾಗ್ದಾಳಿ ನಡೆಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಬಿಎಸ್‌ವೈ ರಾಜ್ಯದ ಅಗ್ರಮಾನ್ಯ ನಾಯಕರಾಗಿದ್ದಾರೆ. ಅವರಿಂದಲೇ ಗೆದ್ದು, ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಅವರ ಮತ್ತು ನನ್ನ ಪುತ್ರನಿಗೆ ಶಾಪ ಹಾಕಿದ್ದು, ಅದೆಂದಿಗೂ ತಟ್ಟುವುದಿಲ್ಲ. ಸಂಸ್ಕೃತಿ, ಸಂಸ್ಕಾರವೇ ಅವನಲಿಲ್ಲ ಎಂದು ಏಕವಚನದಲ್ಲೇ ಕಿಡಿಕಾಡಿದರು.

    2008ರಲ್ಲಿ ಅವನು ಸೇರಿ ಭೋವಿ ಸಮುದಾಯದ ಮೂವರು ಶಾಸಕರಿಂದ ಬಿಎಸ್‌ವೈ ಸಿಎಂ ಆದರು. ಸಂಸದ ಜಿ.ಎಂ.ಸಿದ್ದೇಶ್ವರ ತಂದೆಯನ್ನು, ಎಂಎಲ್ಸಿಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, 2009ರಲ್ಲಿ ನನ್ನನ್ನು ಎಂಎಲ್ಸಿ ಮಾಡಿರುವುದಾಗಿ, ಜನಾರ್ದನ ಸ್ವಾಮಿ ಅವರನ್ನು ಎಂಪಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸುಳ್ಳು ಹೇಳುವುದು ಆತನಿಗೆ ಹೊಸತಲ್ಲ. ದೇಶದಲ್ಲಿ ಎಲ್ಲರನ್ನೂ ಗೆಲ್ಲಿಸುವ ಮಹಾನ್ ನಾಯಕನನ್ನು ಎಲ್ಲಿಯೂ ನೋಡಿಲ್ಲ ಎಂದು ವ್ಯಂಗ್ಯವಾಡಿದರು.

    ಪೋತಪ್ಪನಾಯಕನ ಮಗ ಜಿಲ್ಲೆಗೆ ದೊಡ್ಡ ನಾಯಕನಲ್ಲ. ಟಿಕೆಟ್ ತಪ್ಪಿಸಲು ನಾನೂ ಕಾರಣ ಅಲ್ಲ. ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ಕೇಂದ್ರಕ್ಕೆ ವರದಿ ಹೋಗಿದೆ. ವರಿಷ್ಠರ ನಿರ್ಣಯದಂತೆ ಗೋವಿಂದ ಕಾರಜೋಳ ಅವರಿಗೆ ಲಭಿಸಿದೆ. ಪಕ್ಷ ಬಿಟ್ಟು ಪುತ್ರನನ್ನು ಗೆಲ್ಲಿಸಿಕೊಂಡು ಬರಲಿ ನೋಡೋಣ ಎಂದು ಸವಾಲು ಹಾಕಿದರು.

    1969ರಿಂದಲೂ ರಾಜಕೀಯದಲ್ಲಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಆರೇಳು ಬಾರಿ ಶಾಸಕನಾಗಿದ್ದೇನೆ. ಸ್ವಂತ ಸಾಮರ್ಥ್ಯದಿಂದ ಎರಡು ಬಾರಿ ಪಕ್ಷೇತರನಾಗಿ ಗೆದ್ದು, ಅಚ್ಚರಿ ಮೂಡಿಸಿದ್ದೇನೆ. ಆತನಂತೆ ಅಧಿಕಾರಕ್ಕಾಗಿ ಸ್ವ-ಪಕ್ಷದವರ ಸೋಲು ಬಯಸುವಂತ ನೀಚ ರಾಜಕಾರಣ ಮಾಡಿಲ್ಲ. ನಾನೂ ಸೋತರೂ ಜಿಲ್ಲೆಯ ಜನರು ಈಗಲೂ ಪ್ರೀತಿ-ವಿಶ್ವಾಸದಿಂದ ಕಾಣುತ್ತಾರೆ. ಆದರೆ, ಸ್ವಂತ ಊರಿನ ಜನರೇ ಅವನನ್ನು ಸೆರೋದಿಲ್ಲ ಎಂದು ಕುಟುಕಿದರು.

    ಸೀಮೆಎಣ್ಣೆ, ಸಕ್ಕರೆ ಮಾರಾಟ ಮಾಡಿ, ಜನಾರ್ಶೀವಾದ ಪಡೆಯಲು ಮುನ್ಸಿಪಾಲಿಟಿ ಎಲೆಕ್ಷನ್‌ನಲ್ಲಿ ಸೋತವನಿಂದ ರಾಜಕೀಯ ಪಾಠ ಕಲಿಯಬೇಕಿಲ್ಲ. ಮುಂಬರುವ ಚುನಾವಣೆಗಳಲ್ಲಿ ಮತದಾರರೇ ಆತನಿಗೆ ಉತ್ತರ ನೀಡಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts