More

    ಬಾಲಕ ಸೇರಿ ನಾಲ್ವರಿಗೆ ಕರೊನಾ ಪಾಸಿಟಿವ್

    ಧಾರವಾಡ: ಕರೊನಾ ಸರಣಿ ಜಿಲ್ಲೆಯಲ್ಲಿ ಇನ್ನೂ ಮುಂದುವರಿದಿದ್ದು, ಗುರುವಾರ ಮತ್ತೆ ನಾಲ್ವರಲ್ಲಿ ಸೋಂಕು ಕಂಡುಬಂದಿದೆ. ಎಲ್ಲ ನಾಲ್ವರು ಹುಬ್ಬಳ್ಳಿ ನಗರದವರು.

    ಹುಬ್ಬಳ್ಳಿ ಮಂಟೂರ ರಸ್ತೆಯ ಗುಂಜಾಳ ಪ್ಲಾಟ್ ನಿವಾಸಿ 56 ವರ್ಷದ ಪುರುಷ, ಹುಬ್ಬಳ್ಳಿ ಪಿ.ಬಿ. ರಸ್ತೆಯ ಹೊಸ ಗಬ್ಬೂರ ನಿವಾಸಿ 5 ವರ್ಷದ ಬಾಲಕ ಹಾಗೂ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ನಿವಾಸಿ 30 ವರ್ಷದ ಪುರುಷ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಹಳೇ ಹುಬ್ಬಳ್ಳಿ ಸದರಸೋಫಾ ಕೊಡಿಗೇರ ಪ್ಲಾಟ್ ನಿವಾಸಿ 28 ವರ್ಷದ ಪುರುಷ ಗುಜರಾತ್​ನಿಂದ ಹಿಂದಿರುಗಿದ್ದಾರೆ.

    ಗಮನಾರ್ಹ ಸಂಗತಿಯೆಂದರೆ ಕೆಮ್ಮು, ನೆಗಡಿ, ವಿಪರೀತ ಜ್ವರದಿಂದ ಬಳಲುತ್ತಿದ್ದವರು ಗಮನಾರ್ಹವಾದ ಪ್ರಯಾಣ ಇತಿಹಾಸ ಹೊಂದಿಲ್ಲ. ಇವರೆಲ್ಲರೂ ನಗರದಲ್ಲಿ ಇರುವಾಗಲೇ ಎಲ್ಲೋ ಕರೊನಾ ವೈರಾಣು ಸೋಂಕಿಗೆ ಗುರಿಯಾಗಿದ್ದಾರೆ. ಅಂದರೆ, ಕರೊನಾ ವೈರಸ್ ನಮಗರಿವಿಲ್ಲದೆ ವ್ಯಾಪಿಸತೊಡಗಿದೆ. 5 ವರ್ಷದ ಬಾಲಕನಿಗೂ ಸೋಂಕು ತಗುಲಿರುವುದು ತೀವ್ರ ಆತಂಕ ಉಂಟುಮಾಡಿದೆ.

    28 ವರ್ಷದ ವ್ಯಕ್ತಿಯೊಬ್ಬನಲ್ಲಿ ಕರೊನಾ ಸೋಂಕು ಪತ್ತೆಯಾದ ಪ್ರಯುಕ್ತ ಹುಬ್ಬಳ್ಳಿ ಗೋಕುಲ ರಸ್ತೆ ಅಕ್ಷಯ ಪಾರ್ಕ್​ನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ಗುರುವಾರ ಸೀಲ್​ಡೌನ್ ಗಡಿ ಗುರುತಿಸಿ, ರಸ್ತೆ ಬಂದ್ ಮಾಡಿಸಿದರು. ಕರೊನಾ ಪ್ರಕರಣ ಕಂಡುಬಂದ ಉಳಿದ ಸ್ಥಳದಲ್ಲೂ ಸೀಲ್​ಡೌನ್ ಮಾಡಲಾಗುತ್ತಿದೆ.

    175ಕ್ಕೆ ಏರಿಕೆ: 4 ಪಾಸಿಟಿವ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. 52 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    101 ಜನರ ವರದಿ ಬಾಕಿ: ಧಾರವಾಡ ಜಿಲ್ಲೆಯಲ್ಲಿ ಇನ್ನೂ 101 ಜನರ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಇದುವರೆಗೆ 22,913 ಜನರ ಮೇಲೆ ನಿಗಾ ವಹಿಸಲಾಗಿದೆ. ಈ ಪೈಕಿ 21,543 ಜನರ ಪ್ರಯೋಗಾಲಯ ವರದಿಗಳು ನೆಗೆಟಿವ್ ಬಂದಿವೆ. ಇನ್ನೂ 101 ವರದಿ ಬರಬೇಕಿದೆ. ಮೂವರು ಕೋವಿಡ್​ನಿಂದ ಮೃತಪಟ್ಟಿದ್ದು, 120 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ. ಅವರೆಲ್ಲರಿಗೆ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶ ಹಾಗೂ ಅಂತಾರಾಜ್ಯಗಳಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 22,913 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 2857 ಜನರು ಮನೆಯಲ್ಲೇ ಪ್ರತ್ಯೇಕವಾಗಿ 14 ದಿನ ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡ್​ಗಳಲ್ಲಿ 120 ಜನ ದಾಖಲಾಗಿದ್ದಾರೆ. 7,273 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 12663 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಜನರ ದಿಕ್ಕು ತಪ್ಪಿಸಿದ ಮಹಿಳೆ : ಧಾರವಾಡ: ಕರೊನಾ ಪಾಸಿಟಿವ್ ಪ್ರಕರಣ ಇರುವ ಸೀಲ್​ಡೌನ್ ಪ್ರದೇಶದಿಂದ ತಪ್ಪಿಸಿಕೊಂಡ ಮಹಿಳೆಯೊಬ್ಬರು ಜನರ ದಿಕ್ಕು ತಪ್ಪಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಮೊರಬ ಗ್ರಾಮದ ಮಹಿಳೆ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಮೊರಬ ಗ್ರಾಮದಲ್ಲಿ ಕರೊನಾ ಪಾಸಿಟಿವ್ ಬಂದ ನಂತರ ಆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ, ನಗರದಲ್ಲಿ ಸುತ್ತಾಡಿದ್ದಾರೆ. ಅಲ್ಲದೆ ಗಂಡನ ಮನೆ ಇರುವ ಬೇಲೂರ ಗ್ರಾಮದಲ್ಲಿ ತನ್ನನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ವಿಷಯ ತಿಳಿದ ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ ಅವರು, ಪ್ರಕರಣ ಪರಿಶೀಲಿಸುವಂತೆ ಗ್ರಾಮೀಣ ಸಿಪಿಐಗೆ ತಿಳಿಸಿದ್ದರು. ಪೊಲೀಸರು ವಿಚಾರಣೆ ಮಾಡಿದ ನಂತರ ಮಹಿಳೆ ತಪ್ಪು ಒಪ್ಪಿಕೊಂಡಿದ್ದಾಳೆ. ನಂತರ ಅವರನ್ನು ಮೊರಬ ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ. ನಗರದಲ್ಲಿ ಗುರುವಾರ ಜರುಗಿದ ಪಿಯುಸಿ ಪರೀಕ್ಷೆಗೆ ಈ ಮಹಿಳೆ ತಮ್ಮ ಸಂಬಂಧಿಕ ವಿದ್ಯಾರ್ಥಿಯೊಂದಿಗೆ ಆಗಮಿಸಿದ್ದರು ಎನ್ನಲಾಗಿದೆ. ನಗರದಲ್ಲಿ ಹಲವೆಡೆ ಸುತ್ತಾಡಿದ್ದು, ಭೀತಿ ಮೂಡಿಸಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts