More

    ಬಾಲಕಿ ಕೊಲೆಗೈದವರಿಗೆ ಕಠಿಣ ಶಿಕ್ಷೆ ವಿಧಿಸಿ

    ಹಾವೇರಿ: ಉತ್ತರಪ್ರದೇಶದ ಹತ್ರಾಸ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಎಸ್​ಎಫ್​ಐ ಹಾಗೂ ಡಿವೈಎಫ್​ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

    ಡಿವೈಎಫ್​ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ದೇಶದಾದ್ಯಂತ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಕ್ರೌರ್ಯದ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಬಾಲಕಿ ಮೇಲೆ ಅಮಾನೀಯವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್​ನಲ್ಲಿ ಸಂಭವಿಸಿದೆ. ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ದೇಶವ್ಯಾಪಿ ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕಾಗುತ್ತದೆ ಎಂದರು.

    ಪ್ರತಿಭಟನೆಯಲ್ಲಿ ನಾರಾಯಣ ಕಾಳೆ, ಬಸವರಾಜ ಭೋವಿ, ಸಚಿನ ಸೂರಣಗಿ, ರಹಮತ್ ಉಲ್ಲಾ, ಅರುಣ ಆರೇರ, ಪ್ರಸನ್ನ ಕಡಕೋಳ, ವಿನಾಯಕ ಕುರುಬರ, ಹಸೀನಾ ಹೆಡಿಯಾಲ, ಉಡಚಪ್ಪ ಮಾಳಗಿ, ಕೆ.ಸಿ. ಅಕ್ಷತಾ, ಮಹಮದ್ ನರೇಗಲ್ಲ, ಮಾಲತೇಶ ಯಲ್ಲಾಪುರ, ಎಂ.ಎನ್. ನಾಯಕ, ಫಕೀರೇಶ ಕಾಳಿ ಇತರರಿದ್ದರು.

    ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
    ರಾಣೆಬೆನ್ನೂರ:
    ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ರಾಹುಲ್​ಗಾಂಧಿ ವಿರುದ್ಧ ಪೊಲೀಸರು ದೌರ್ಜನ್ಯ ವೆಸಗಿದ್ದಾರೆ ಎಂದು ಆರೋಪಿಸಿ ಹಾಗೂ ಅತ್ಯಾಚಾರಕ್ಕೀಡಾದ ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್​ಗಾಂಧಿ ಹಾಗೂ ಪ್ರೀಯಾಂಕಾ ಗಾಂಧಿಯವರು ಯುವತಿಯ ಮನೆಗೆ ಸಾಂತ್ವನ ಹೇಳಲು ಹೊರಟಾಗ ಅಲ್ಲಿಯ ಪೊಲೀಸರು ತಡೆದು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

    ಕೇಂದ್ರ ಸರ್ಕಾರ ಅತ್ಯಾಚಾರ ಪ್ರಕರಣ ಮಟ್ಟಹಾಕುವಲ್ಲಿ ವಿಫಲವಾಗಿದೆ. ರೈತರ ವಿರುದ್ಧ ಮೂರು ಮಸೂದೆಗಳನ್ನು ಜಾರಿಗೊಳಿಸಿ ಮೋಸ ಮಾಡಿದೆ. ಆದ್ದರಿಂದ ರಾಷ್ಟ್ರಪತಿಯವರು ಮದ್ಯ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಬಸನಗೌಡ ಕೋಟೂರ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ಪ್ರಮುಖರಾದ ಮಂಜನಗೌಡ ಪಾಟೀಲ, ಶೇರುಖಾನ್ ಖಾಬೂಲಿ, ಚಂದ್ರಣ್ಣ ಬೇಡರ, ಬಸವರಾಜ ಸವಣೂರ, ರಾಮಣ್ಣ ನಾಯಕ, ಕೃಷ್ಣಪ್ಪ ಕಂಬಳಿ, ಮೃತ್ಯುಂಜಯ ಗುದಿಗೇರ, ಜಯಶ್ರೀ ಪಿಸೆ, ನಾಗರಾಜ ಮಾಕನೂರ, ಬಸವರಾಜ ಹುಚ್ಚಗೊಂಡರ, ಆನಂದ ಹುಲಬನ್ನಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts