More

    ಬಾಲಕಿಯರಿಗೆ ರಾಜಸ್ಥಾನಕ್ಕೆ ತೆರಳಲು ವ್ಯವಸ್ಥೆ

    ಧಾರವಾಡ: ಲಾಕ್​ಡೌನ್ ಜಾರಿಯಿಂದಾಗಿ ಒಂದೂವರೆ ತಿಂಗಳಿಂದ ಪಾಲಕರನ್ನು ಬಿಟ್ಟು ಹುಬ್ಬಳ್ಳಿಯ ಮರಾಠಾ ಗಲ್ಲಿಯ ಕೋಳಿಪೇಟೆಯ ಪರಿಚಯದವರೊಬ್ಬರ ಮನೆಯಲ್ಲಿದ್ದ ರಾಜಸ್ಥಾನದ ಇಬ್ಬರು ಬಾಲಕಿಯರಿಗೆ ಅಲ್ಲಿಗೆ ತೆರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

    ಮಕ್ಕಳು ಅವರ ಪಾಲಕರ ಸೇರಲು ಜಿಲ್ಲಾಧಿಕಾರಿ ದೀಪಾ ಚೋಳನ್ ರಾಜಸ್ಥಾನ ಸರ್ಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಗತ್ಯ ವಾಹನ ಪಾಸ್​ಗಳನ್ನು ಒದಗಿಸಿಕೊಟ್ಟಿದ್ದಾರೆ.

    50 ದಿನಗಳ ಹಿಂದೆ ತಾಲಸಾರಾಮ್ ದಂಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ತಮ್ಮ ಸ್ವಗ್ರಾಮ ಮೆಮಂಡ್ವಾರಾಕ್ಕೆ ಅನಿವಾರ್ಯ ಕಾರಣಗಳಿಂದಾಗಿ ತೆರಳಿದ್ದರು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮಕ್ಕಳನ್ನು ಕರೆದೊಯ್ಯಲು ಆಗದೆ ಬಾಡಿಗೆ ಇದ್ದ ಮನೆಯ ಮಾಲೀಕರ ಬಳಿ ಮಕ್ಕಳನ್ನು ಬಿಟ್ಟು ಹೋಗಿದ್ದರು. ಲಾಕ್​ಡೌನ್ ಜಾರಿಯಾಗಿದ್ದರಿಂದ ದಂಪತಿ ಹುಬ್ಬಳ್ಳಿಗೆ ಬರಲು ಸಾಧ್ಯವಾಗಿರಲಿಲ್ಲ. 10 ವರ್ಷದ ಬಾಲಕಿ ರೋಮುಕುಮಾರಿ ಹಾಗೂ 8 ವರ್ಷದ ಪೋಸುಕುಮಾರಿ, ಪಾಲಕರನ್ನು ಸೇರಲು ಹಪಹಪಿಸುತ್ತಿರುವ ಕುರಿತು ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಗಮ ಹಂಜಿ ಆರೋಗ್ಯ ಸೇತು ಆಪ್​ಗೆ ಅಪ್​ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಮಕ್ಕಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ರಮೇಶ್ ರಾವಲ್, ತಮ್ಮ ಕಾರ್​ನಲ್ಲಿ ರಾಜಸ್ಥಾನಕ್ಕೆ ಬಿಟ್ಟು ಬರಲು ಮುಂದೆ ಬಂದಾಗ ತಹಸೀಲ್ದಾರ್ ಅಗತ್ಯ ಪರವಾನಗಿಯ ಏರ್ಪಾಟು ಮಾಡಿದ್ದಾರೆ.

    ಗುರುವಾರ ಬೆಳಗ್ಗೆ ತಮ್ಮ ಕಚೇರಿ ಆವರಣದಲ್ಲಿ ಮಕ್ಕಳಿಗೆ ಶುಭ ಹಾರೈಸಿ ಬೀಳ್ಕೊಟ್ಟ ಜಿಲ್ಲಾಧಿಕಾರಿ ದೀಪಾ ಚೋಳನ್, ಮಕ್ಕಳನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿ ತಹಸೀಲ್ದಾರರಿಗೆ ವರದಿ ನೀಡಲು ಕರೆದೊಯ್ಯುತ್ತಿರುವ ವ್ಯಕ್ತಿಗಳಿಗೆ ಸೂಚಿಸಿದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಜಿಲ್ಲಾಧಿಕಾರಿಗಳ ಕಚೇರಿ ಪಾಸ್ ವಿತರಣೆ ವಿಭಾಗದ ಕೆ.ಎ. ಜಂಗೂರ್, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts