More

    ಬಾಪೂಜಿ ತಾಯಿ ಹಾಲಿನ ಭಂಡಾರ ಉದ್ಘಾಟನೆ ನಾಳೆ

    ದಾವಣಗೆರೆ: ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಾ.2ರಂದು ಹೊಸ ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿ, ವಿಸ್ತೃತ ನವಜಾತ ಶಿಶುಗಳ ಆರೈಕೆ ಘಟಕ ಹಾಗೂ ಬಾಪೂಜಿ ತಾಯಿ ಹಾಲಿನ ಭಂಡಾರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಜಿ. ಗುರುಪ್ರಸಾದ್ ಹೇಳಿದರು.
     ಆಸ್ಪತ್ರೆಯ ಮೂರು ಘಟಕಗಳನ್ನು ತಲಾ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಶನಿವಾರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸ್ಥೆಯ ಚೇರ‌್ಮನ್ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಎ.ಎಸ್. ವೀರಣ್ಣ, ಕಿರುವಾಡಿ ಗಿರಿಜಮ್ಮ, ಎ.ಎಸ್. ನಿರಂಜನ್, ಸಂಪನ್ನ ಮುತಾಲಿಕ್ ಭಾಗವಹಿಸಲಿದ್ದಾರೆ ಎಂದರು.
     ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ನಿರ್ಮಾಣಗೊಂಡಿರುವ ಬಾಪೂಜಿ ತಾಯಿ ಹಾಲಿನ ಭಂಡಾರವು ವೈದ್ಯಕೀಯ ವಿಭಾಗದಲ್ಲಿ ವಿನೂತನ ಸೇವೆಯಾಗಿದ್ದು, ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಪ್ರಥಮ ಹಾಲಿನ ಭಂಡಾರವಾಗಿದ್ದು, ಅವಶ್ಯಕತೆ ಇರುವ ಮಕ್ಕಳಿಗೆ ವರದಾನವಾಗಲಿದೆ ಎಂದು ಹೇಳಿದರು.
     ತಾಯಂದಿರು ತಮ್ಮ ಮಗುವಿಗೆ ಹಾಲುಣಿಸಿ ಹೆಚ್ಚಾದ ಹಾಲನ್ನು ಈ ಭಂಡಾರಕ್ಕೆ ದಾನವಾಗಿ ನೀಡುತ್ತಾರೆ. ಅದನ್ನು ಅವಶ್ಯಕತೆ ಇರುವ 6 ತಿಂಗಳ ಒಳಗಿನ ಮಗುವಿಗೆ ನೀಡಲಾಗುವುದು. ತಾಯಂದಿರಿಂದ ಪಡೆದ ಹಾಲನ್ನು ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಿ ನೆಗೆಟಿವ್ ರಿಪೋರ್ಟ್ ಬಂದ ನಂತರ ಹಾಲನ್ನು ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಹಾಲನ್ನು ಪುನಃ ಲ್ಯಾಬ್‌ಗೆ ಕಳುಹಿಸಿ ಎರಡು ಸಲವೂ ನೆಗೆಟಿವ್ ರಿಪೋರ್ಟ್ ಬಂದ ನಂತರ ಹಾಲನ್ನು ಶೇಖರಿಸಲಾಗುವುದು ಎಂದರು.
     ಭಂಡಾರದಲ್ಲಿ 6 ತಿಂಗಳವರೆಗೆ ಹಾಲನ್ನು ಶೇಖರಿಸಬಹುದು. ತಾಯಂದಿರು ಹಾಲು ಕೊಡುವುದು ಹಾಗೂ ಪಡೆಯುವುದು ಸಂಪೂರ್ಣ ಉಚಿತ. ಮಗುವಿನ ಸರ್ವತೋಮುಖ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
     ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ತಾಪಮಾನ ನಿಯಂತ್ರಣ, ಶಸ್ತ್ರಚಿಕಿತ್ಸಕ ನಿಯಂತ್ರಣ ಫಲಕಗಳಿಂದ ಸುಸಜ್ಜಿತವಾಗಿದ್ದು, ನವಜಾತ ಶಿಶು, ಯುರಾಲಜಿ, ಎದೆಗೂಡು ಸರ್ಜರಿ, ಗ್ಯಾಸ್ಟ್ರೋಎನ್‌ಟ್ರಾಲಜಿ, ಲ್ಯಾಪರೋಸ್ಕೋಪಿ, ಬ್ರಾಂಕೋಸ್ಕೋಪಿ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. 50 ಹಾಸಿಗೆಯುಳ್ಳ ನವಜಾತ ಶಿಶು ವಿಭಾಗವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
     ಡಾ. ಮೂಗನಗೌಡ ಪಾಟೀಲ್, ಡಾ.ಎ.ಸಿ. ಬಸವರಾಜ್, ಡಾ.ಕೌಜಲಗಿ, ಡಾ.ಎಸ್.ಎಸ್. ಪ್ರಕಾಶ್, ಡಾ.ಹರ್ಷ, ಡಾ.ಮಧು ಪೂಜಾರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts