More

    ಬಾದಾಮಿಯಿಂದ ಸಿದ್ದರಾಮಯ್ಯ ಪಲಾಯನ

    ಬೆಳಗಾವಿ: ಸೋಲಿನ ಭಯದಿಂದ ಕಂಗೆಟ್ಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಮಯ್ಯ ಬಾದಾಮಿ ಕ್ಷೇತ್ರದಿಂದ ಪಲಾಯನ ಮಾಡುತ್ತಿದ್ದಾರೆ. 2023 ವಿಧಾನಸಭಾ ಚುನಾವಣೆಯಲ್ಲಿ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಜನರೇ ಪಾಠ ಕಲಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಅಧಿಕಾರದ ಸ್ವಾರ್ಥಕ್ಕಾಗಿ ದಲಿತ, ಹಿಂದುಳಿದ ವರ್ಗಗಳ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬೆನ್ನಿಗೆ ಚೂರಿ ಹಾಕಿ ಬೆಳದಿರುವ ವ್ಯಕ್ತಿ. ಇದೀಗ ನನ್ನನ್ನು ಗುರಿಯಾಗಿಸಿಕೊಂಡು ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಘೋಷಣೆ ಮಾಡಲಿ. ಈಗಾಗಲೇ ಬಾದಾಮಿ ಕ್ಷೇತ್ರದ ಜನರು ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯನ ಅವರನ್ನು ಅವರ ಚಾಮುಂಡೇಶ್ವರಿ ಕ್ಷೇತ್ರದ ಜನರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಎಚ್ಚರಿಸಿದರು.

    2023ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ, ಬಳ್ಳಾರಿ ಅಥವಾ ಮೊಳಕಾಲ್ಮೂರು ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಥವಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಈ ವಿಷಯದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವೆ ಎಂದು ಸ್ಪಷ್ಟ ಪಡಿಸಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುರುೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ ಇತರರಿದ್ದರು.

    ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ಕ್ರಮ

    ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ 9 ಲಕ್ಷಕ್ಕೂ ಅಧಿಕ ಬಸ್ ಸಂಚರಿಸುತ್ತಿವೆ. ಅವುಗಳಲ್ಲಿ ಕೆಲ ಬಸ್‌ಗಳು ರಿಪೇರಿ ಹಂತದಲ್ಲಿವೆ. ಕೆಲವು ಹಾಳಾಗಿವೆ. ಈ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಹೊಸ ಬಸ್‌ಗಳನ್ನು ಖರೀದಿಸಿ ಸಮಸ್ಯೆ ಇತ್ಯರ್ಥ ಪಡಿಸುವ ಕೆಲಸ ನಡೆಯುತ್ತಿದೆ. ಸಾರಿಗೆ ನಿಗಮಗಳ ಆರ್ಥಿಕ ನಷ್ಟ ಸರಿಪಡಿಸಲು ಮುಖ್ಯಮಂತ್ರಿ ಹೆಚ್ಚುವರಿ ಅನುದಾನ ನೀಡಿದ್ದಾರೆ. ಸಾರಿಗೆ ಸಿಬ್ಬಂದಿಗೆ ವೇತನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ಸಾರಿಗೆ ಡಿಪೋಗಳಲ್ಲಿ ಬಸ್‌ಗಳ ಹಳೇ ಟೈಯರ್, ವಸ್ತುಗಳ ಮಾರಾಟದಲ್ಲಿ ಅವ್ಯವಹಾರ ಕುರಿತು ತನಿಖಾ ವರದಿ ಪಡೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts