More

    ಬಾಡದಲ್ಲಿ ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ ಡಿ. 17ರಂದು

    ಶಿಗ್ಗಾಂವಿ: ಕಂದಾಯ ಸಚಿವರ ಸ್ವಾಗತಕ್ಕೆ ತಾಲೂಕಿನ ಬಾಡ ಗ್ರಾಮ ಸಜ್ಜುಗೊಂಡಿದೆ. ಒಂದು ವಾರದಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಜಿಲ್ಲಾಡಳಿತದ ಅಧಿಕಾರಿಗಳು, ಸಚಿವರು ಬಂದು ಹೋಗುವ ರಸ್ತೆಗಳ ಗುಂಡಿ ಮುಚ್ಚಿಸುತ್ತಿದ್ದಾರೆ. ಆದರೆ, ಗ್ರಾಮದ ಹಲವು ಸಮಸ್ಯೆಗಳನ್ನು ಸಚಿವ ಅಶೋಕ ಅವರು ಇತ್ಯರ್ಥಪಡಿಸುವರೇ ಎಂಬ ಚರ್ಚೆ ಜೋರಾಗಿ ನಡೆದಿದೆ.
    ಸ್ಥಳೀಯ ಶಾಸಕ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಬಾರದೇ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರೈತರ ಸಮಸ್ಯೆಗಳನ್ನು ಕಂದಾಯ ಸಚಿವರು ಬಗೆಹರಿಸಬೇಕಿದೆ. ಸಚಿವರು ಡಿ. 17ರಂದು ಬಾಡ ಗ್ರಾಮದಲ್ಲಿ ವಾಸ್ತವ್ಯ ಕೈಗೊಂಡು ಡಿ. 18ರಂದು ಗ್ರಾಮ ಸಭೆಯಲ್ಲಿ ಭಾಗವಹಿಸಲಿದ್ದಾರೆ.
    ಗ್ರಾಮದ ಪ್ರಮುಖ ಸಮಸ್ಯೆಗಳಾದ ಕಿತ್ತುಹೋದ ರಸ್ತೆ, ಚರಂಡಿ, ಅರ್ಧಕ್ಕೆ ನಿಂತಿರುವ ಹರ್ ಘರ್ ಪಾನಿ(ಜೆಜೆಎಂ) ಕಾಮಗಾರಿ ಕಂದಾಯ ಸಚಿವರನ್ನು ಸ್ವಾಗತಿಸಲು ಸಜ್ಜಾಗಿವೆ. ಬಾಡ ಗ್ರಾಮದ ಸುತ್ತಮುತ್ತಲಿನ ಕಲ್ಯಾಣ, ಹೊಟ್ಟೂರ, ಖುರ್ಸಾಪುರ, ಹಳೇಬಂಕಾಪುರ, ನಿಡಗುಂದಿ, ಮೂಕಬಸರಿಕಟ್ಟಿ ಗ್ರಾಮಗಳಲ್ಲಿ ಅಧಿಕಾರಿಗಳು ಪದೇಪದೆ ಗ್ರಾಮ ಸಭೆಗಳನ್ನು ಆಯೋಜಿಸಿ ಸಚಿವರು ಬರುವ ಮುನ್ನವೇ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗುತ್ತಿದ್ದಾರೆ. ಆದರೆ, ಕೆಲ ಸಮಸ್ಯೆಗಳನ್ನು ಸಾರ್ವಜನಿಕರು ನೇರವಾಗಿ ಕಂದಾಯ ಸಚಿವರಿಂದಲೇ ಬಗೆಹರಿಸಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
    ವಿಶೇಷವಾಗಿ ಜನರು ಗ್ರಾಮದಲ್ಲಿ ಸರ್ವೇ ನಂಬರ್ ಇರುವ ಜಮೀನುಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇಂತಹ ಮನೆಗಳಿಗೆ ಸರ್ಕಾರ ಇ-ಸ್ವತ್ತು ಕೊಡುವುದಿಲ್ಲ. ಇದರಿಂದ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಸಾಲ ಸೌಲಭ್ಯ ದೊರೆಯುವುದಿಲ್ಲ. ಇಂತಹ ಅಕ್ರಮ ಮನೆಗಳನ್ನು ಸಕ್ರಮಗೊಳಿಸಿ ಇ-ಸ್ವತ್ತು ಉತಾರ ಸಿಗುವಂತೆ ಮಾಡಬೇಕು. ಹೊಲಗಳ ಸರ್ವೇ ಮಾಡಲು ವರ್ಷಗಳೇ ಬೇಕಾಗಿದೆ. ಸರ್ವೇ ಇಲಾಖೆ ಸಿಬ್ಬಂದಿ ಕೈಗೆ ಸಿಗುವುದಿಲ್ಲ. ಸಿಕ್ಕರೂ ಅವರು ಕೇಳಿದಷ್ಟು ಹಣ ನೀಡಬೇಕು ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
    ಸುಮಾರು ವರ್ಷಗಳಿಂದ ರೈತರ ಅನ್ನ ಕಿತ್ತುಕೊಳ್ಳುತ್ತಿರುವ ನಿಡಗುಂದಿಯ ಚಿನ್ನಿಗಟ್ಟಿ ಕೆರೆ ಕೋಡಿಯ ಕಾಲುವೆಗೆ ಹೆಚ್ಚಿನ ನೀರು ಹರಿದು ರೈತರ ಹೋಲಗಳಿಗೆ ನುಗ್ಗಿ ವರ್ಷ ಪೂರ್ತಿ ಹರಿಯುತ್ತಿರುವುದರಿಂದ ಭೂಮಿ ಸವಳಾಗಿದೆ. ಇದರಿಂದ ಸುಮಾರು 300ಕ್ಕೂ ಅಧಿಕ ಎಕರೆ ಜಮೀನು ಪ್ರತಿ ವರ್ಷ ಜಲಾವೃತವಾಗುತ್ತಿದೆ. ಬಾಡ, ಕಲ್ಯಾಣ, ನಿಡಗುಂದಿ ಗ್ರಾಮದ ನೂರಾರು ರೈತರು ಹಲವು ವರ್ಷಗಳಿಂದ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡುತ್ತೇವೆ ಎಂದು ರೈತರು ತಿಳಿಸಿದ್ದಾರೆ.
    ಸ್ಮಶಾನ ರಸ್ತೆ, ಸಿ.ಸಿ. ರಸ್ತೆಗಳು, ರಸ್ತೆಯ ಎರಡೂ ಬದಿ ಚರಂಡಿ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಗ್ರಾಮದಲ್ಲಿವೆ. ಇದಲ್ಲದೆ, ಕಂದಾಯ ಸಚಿವರ ವಿಶೇಷ ಅನುದಾನದಲ್ಲಿ ಗ್ರಾಮದಲ್ಲಿ ಸಿ.ಸಿ. ರಸ್ತೆ, ಅಂಗನವಾಡಿ, ಗರಡಿಮನೆ, ಗ್ರಂಥಾಲಯ ಕಟ್ಟಡ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಯಾರಿ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts