More

    ಬಾಚಳ್ಳಿ ಆಂಜನೇಯಸ್ವಾಮಿ ರಥೋತ್ಸವ

    ಹುಣಸೂರು: ಶತಮಾನಗಳ ಇತಿಹಾಸ ಹೊಂದಿರುವ ಬಾಚಳ್ಳಿ ಶ್ರೀ ಆಂಜನೇಯಸ್ವಾಮಿ ದೇವರ 71ನೇ ಜಾತ್ರಾ ಮಹೋತ್ಸವವು ಸಾವಿರಾರು ಹನುಮಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಹುಣಸೂರು ನಗರದಿಂದ 3 ಕಿ.ಮೀ. ದೂರದಲ್ಲಿರುವ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಚಳ್ಳಿಯಲ್ಲಿ ಭಾನುವಾರ ಆಂಜನೇಯಸ್ವಾಮಿಗೆ ಮಾರುತಿಭಕ್ತರು ಜಯಘೋಷಗಳನ್ನು ಕೂಗಿದರು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜೀರ್ಣೋದ್ಧಾರಗೊಂಡ ದೇವಾಲಯದ ಗೋಪುರ ಮತ್ತು ಗೋಪುರದ ಮುಂಭಾಗದಲ್ಲಿ ನಿಂತಿರುವ ಎತ್ತರದ ಆಂಜನೇಯಸ್ವಾಮಿ ಮೂರ್ತಿ ದೇವಾಲಯದ ಅಂದವನ್ನು ಹೆಚ್ಚಿಸಿತು.

    ಮಧ್ಯಾಹ್ನ 1.30ರ ವೇಳೆಗೆ ಬಣ್ಣಬಣ್ಣದ ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಅರ್ಚಕರು ಪ್ರತಿಷ್ಠಾಪಿಸಿದರು. ರಥದಲ್ಲಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ದೇವಾಲಯದ ಸುತ್ತ ಎಳೆದು ತರಲಾಯಿತು. ಅತಿಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಸಮೂಹ ಆಂಜನೇಯಸ್ವಾಮಿಗೆ ತಮ್ಮದೇ ಶೈಲಿಯಲ್ಲಿ ಜಯಘೋಷಗಳನ್ನು ಮೊಳಗಿಸಿ, ಕೇಸರಿ ಬಾವುಟವನ್ನು ಹಾರಿಸಿ ಸಂಭ್ರಮಿಸಿದರು.
    ನಗರದಿಂದ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಭಕ್ತರಿಗಾಗಿ ಅಲ್ಲಲ್ಲಿ ಮಜ್ಜಿಗೆ, ಪಾನಕವನ್ನು ವಿವಿಧ ಸಂಘಟನೆಗಳು ನೀಡಿದವು. ದೇವಾಲಯದ ಆವರಣದಲ್ಲಿ ಹಿಂದುಪರ ಸಂಘಟನೆಗಳ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಡೆಯಿತು. ತಿಂಡಿ- ತಿನಿಸು, ಕಡಲೆಪುರಿ, ಐಸ್‌ಕ್ರೀಂ, ಮಕ್ಕಳ ಆಟಿಕೆಗಳು, ಕಬ್ಬಿನ ಹಾಲಿನ ವ್ಯಾಪಾರ ಜೋರಾಗಿತ್ತು.

    ಶಾಸಕ ಎಚ್.ಪಿ. ಮಂಜುನಾಥ್ ಹಾಗೂ ವಿವಿಧ ಪಕ್ಷಗಳ ಮುಖಂಡರು ಜಾತ್ರೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ಟ್ರಸ್ಟ್ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಮಹಾದೇವಣ್ಣ, ನಾರಾಯಣಪ್ಪ, ಉದ್ಯಮಿ ಕಾಯಿಶೇಖರ್, ಪುಟ್ಟರಾಜು, ಶಂಕರ್, ಶಂಭು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts