More

    ಬಾಕಿ ಹುದ್ದೆಗಳ ಭರ್ತಿಗೆ ಪ್ರಯತ್ನ

    ಬೆಳಗಾವಿ: ರಾಜ್ಯದಲ್ಲಿರುವ 6 ಕೋಟಿಗೂ ಅಧಿಕ ಜನರಿಗೆ ಸರ್ಕಾರದ ವಿವಿಧ ಸೇವೆ ತಲುಪಿಸಲು 6ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಅಗತ್ಯವಿದೆ. ಆದರೆ, ಸದ್ಯ 5 ಲಕ್ಷ ಸರ್ಕಾರಿ ನೌಕರರು ಜನಸೇವೆ ಮಾಡುತ್ತಿದ್ದು, ಖಾಲಿ ಇರುವ 1 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

    ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಂಯಕ್ತಾಶ್ರಯದಲ್ಲಿ ಜಿಪಂ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ವರ್ಗದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆ ಸಮರ್ಪಕವಾಗಿ ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹಿರಿದಾಗಿದೆ. ಹೀಗಾಗಿ ಜವಾಬ್ದಾರಿಯುತ ಕಾರ್ಯವನ್ನು ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಷ್ಠ್ಠೆಯಿಂದ ನಿರ್ವಹಿಸಬೇಕು ಎಂದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಸರ್ಕಾರಿ ಕೆಲಸ ಸಮಾಜಮುಖಿ ಕೆಲಸವಾಗಿದೆ. ಹೀಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

    ಜಿಪಂ ಸಿಇಒ ಎಚ್.ವಿ. ದರ್ಶನ ಮಾತನಾಡಿ, ಬಾಕಿ ಉಳಿದಿರುವ ಸರ್ಕಾರಿ ನೌಕರರ ಮೆಡಿಕಲ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ನೌಕರರಿಗೆ ಭಾರತದಲ್ಲಿ ವಿಶೇಷ ಗೌರವ ಇದೆ. ಹೀಗಾಗಿ ಇಲಾಖೆಯ ಜವಾಬ್ದಾರಿಯುತ ಅಧಿಕಾರಿ ಹಾಗೂ ಸಿಬ್ಬಂದಿಗಳಾಗಿ ಉತ್ಕೃಷ್ಠ ಕಾರ್ಯ ಕೈಗೊಳ್ಳುವ ಮೂಲಕ ಆ ಗೌರವವನ್ನು ಉಳಿಸಿಕೊಂಡು ಹೋಗಬೇಕು ಎಂದರು.

    ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉತ್ಕೃಷ್ಠ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ಇಲಾಖೆಗಳ 10 ಅಧಿಕಾರಿಗಳನ್ನು ಗುರುತಿಸಿ, ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ: ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಸಯೀದಾ ಆಫ್ರಿನ್‌ಬಾನು ಎಸ್. ಬಳ್ಳಾರಿ, ಜಿಪಂ (ಅಭಿವೃದ್ಧಿ) ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದಾಮು ಭೀಮು ಚವ್ಹಾಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಹುಕ್ಕೇರಿ ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಬಿಮ್ಸ್ ಬೋಧಕ ರವಿ ಅಜೂರ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಎಂ.ಎ.ನದಾಫ್, ಅಥಣಿ ತಾಪಂ ಅಧೀಕ್ಷಕ ಉದಯಗೌಡ ಪಾಟೀಲ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಶಿವಾನಂದ ಖಾಡೆ, ಮಕ್ಕಳಗೇರಿ ಪಿಡಿಒ ನಾಗಪ್ಪ ಆಸೀಲಕರ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ರವಿ ಕರಿಲಿಂಗಣ್ಣವರ, ನೌಕರರ ಸಂಘದ ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

    ಎಲ್.ಜಿ.ಮೇತ್ರಿ ಪ್ರಾರ್ಥಿಸಿದರು, ರೇಖಾ ಅಂಗಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಅಂಜನಾ ಮುರಗೋಡ ಹಾಗೂ ಚಂದ್ರಶೇಖರ ಕೋಲಕಾರ ನಿರೂಪಿಸಿದರು, ಅದೃಶ್ಯ ಹೈಬತ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts