More

    ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

    ಹಾವೇರಿ: ಕನಿಷ್ಠ ವೇತನ, ಬಾಕಿ ವೇತನ ಬಿಡುಗಡೆ, ಹುದ್ದೆಗಳ ಬಡ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಸಮಿತಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ಜಿಲ್ಲಾಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಕರೊನಾ ದೇಶವ್ಯಾಪಿ ಆವರಿಸಿದ್ದು, ಜಿಲ್ಲೆಯಲ್ಲಿಯೂ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಕರೊನಾ ನಿಯಂತ್ರಿಸುವಲ್ಲಿ ಗ್ರಾಪಂ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, 2017, 2018, 2019 ಹಾಗೂ 2020ರಲ್ಲಿಯೂ ಸಿಬ್ಬಂದಿಯ ಸಂಬಳ ಬಾಕಿ ಉಳಿದಿದೆ. 14 ಮತ್ತು 15ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪಿಡಿಒಗಳು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದೇ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಸಿಬ್ಬಂದಿ ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ. ಪ್ರಧಾನ ಕಾರ್ಯದರ್ಶಿಗಳು ಆದೇಶಗಳನ್ನು ಜಾರಿ ಮಾಡಬೇಕೆಂದು ನಾಲ್ಕೈದು ಬಾರಿ ವಿಡಿಯೋ ಕಾನ್ಪರೆನ್ಸ್ ಮಾಡಿದರೂ ಅನುಮೋದನೆ ಮಾಡಿಸಲು ಸಾಧ್ಯವಾಗಿಲ್ಲ. ಗ್ರಾಪಂ ಪಿಡಿಒಗಳು ಸರ್ಕಾರಿ ಆದೇಶಗಳನ್ನು ಜಾರಿ ಮಾಡುತ್ತಿಲ್ಲ. ಸರ್ಕಾರಿ ಆದೇಶಗಳನ್ನು ಚಾಚೂ ತಪ್ಪದೇ ಜಾರಿ ಮಾಡುವಂತೆ ಪಿಡಿಒಗಳಿಗೆ ಸೂಚನೆ ನೀಡಬೇಕು. ಕೂಡಲೆ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರರು ಒತ್ತಾಯಿಸಿದರು.

    ನಿವೃತ್ತ ನೌಕರರಿಗೆ 15ತಿಂಗಳು ಗ್ರಾಚೂಯಿಟಿ ನೀಡಬೇಕು. ಕಸಗೂಡಿಸುವ, ಪಂಪ್ ಆಪರೇಟರ್ ಹಾಗೂ ಇತರ ಸಿಬ್ಬಂದಿಗೆ ಸರ್ಕಾರದ ಆದೇಶದಂತೆ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು. ಅನುಕಂಪದ ನೇಮಕಾತಿಗೆ ನಿರ್ದೇಶನ ನೀಡಬೇಕು. ಅಕ್ರಮ ನೇಮಕಾತಿ ತಡೆಯಬೇಕು. ಬಿಲ್ ಕಲೆಕ್ಟರ್​ರಿಂದ ಗ್ರೇಡ್-2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಸರ್ಕಾರಿ ಆದೇಶಗಳನ್ನು ಜಾರಿಗೊಳಿಸದ ಪಿಡಿಒಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

    ಸಂಘಟನೆಯ ಅಧ್ಯಕ್ಷ ಅಂದಾನೆಪ್ಪ ಹೆಬಸೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ, ಉಪಾಧ್ಯಕ್ಷ ಬಿ.ವೈ. ಈಳಗೇರ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರಬರ ಸೇರಿದಂತೆ ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts