More

    ಬಾಕಿ ಅರ್ಜಿ ತ್ವರಿತ ವಿಲೇವಾರಿಗೊಳಿಸಿ

    ಬೆಳಗಾವಿ: ಹಿಂದುಳಿದವರ ಜೀವನ ಮಟ್ಟ ಸುಧಾರಣೆಗೆ ಹಲವು ಸ್ವಾವಲಂಬಿ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ಸಹಿತ ಸಾಲ ನೀಡುವ ಕಾರ್ಯಕ್ರಮಗಳಿವೆ. ಬಹಳಷ್ಟು ಜನರಿಗೆ ಬ್ಯಾಂಕ್‌ಗಳಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ದೊರಕುವುದಿಲ್ಲ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ ದುರ್ಬಲ ವರ್ಗದವರಿಗೆ ತ್ವರಿತವಾಗಿ ನೆರವು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮೀಕ್ಷೆ ಸಮಿತಿ ಹಾಗೂ ಜಿಲ್ಲಾಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿ ವಿವಿಧ ನಿಗಮಗಳು ಹಾಗೂ ಇಲಾಖೆಗಳಿಂದ ಜನರಿಗೆ ಸುಲಭವಾಗಿ ಯೋಜನೆಗಳು ದೊರೆ ಯುವಂತೆ ಸರ್ಕಾರದಿಂದ ಶೇ. 75 ರಿಂದ 90 ಸಬ್ಸಿಡಿ ನೀಡಲಾಗುತ್ತಿದೆ. ಬ್ಯಾಂಕ್‌ಗಳು ಅದಕ್ಕೆ ಪೂರಕವಾಗಿ ಸಹಕಾರ ನೀಡಬೇಕು. ಬಾಕಿ ಅರ್ಜಿಗಳನ್ನು ಪರಿಶೀಲಿಸಿ ತಕ್ಷಣ ಸಾಲ ಮಂಜೂರು ಮಾಡಬೇಕು ಎಂದು ಸೂಚಿಸಿದರು.

    ರೈತರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ. ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯ ನಿರ್ವಹಿಸಬೇಕು. ಯಾವುದೇ ಅರ್ಜಿ ತಡೆಹಿಡಿಯದೆ 15 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಸರ್ಕಾರಿ ಯೋಜನೆಗಳ ಮೂಲಕ ಸಾಲ ಪಡೆಯಲು ಬಂದ ಅರ್ಜಿದಾರರ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ, ಬ್ಯಾಂಕ್ ನಿಯಮಾವಳಿಯನ್ವಯ ಇತರ ಮಾರ್ಗದ ಮೂಲಕ ಸಾಲ ಮಂಜೂರು ಮಾಡಬೇಕು ಎಂದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಯೂನಿಯನ್ ಬ್ಯಾಂಕ್‌ನಲ್ಲಿ ಬಹಳಷ್ಟು ಅರ್ಜಿ ಬಾಕಿ ಉಳಿದಿವೆ. ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಈ ಕುರಿತು ಏಕೆ ಗಮನ ಹರಿಸುತ್ತಿಲ್ಲ? ಅರ್ಹರಿಗೆ ಸಾಲ ಸೌಲಭ್ಯ ನೀಡುವುದು ಬ್ಯಾಂಕ್ ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದರು. ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ಓಟಿಎಸ್ ಕುರಿತು ಮಾಹಿತಿ ಫಲಕ ಅಳವಡಿಸಬೇಕು. ಸಾಲ ಅವಶ್ಯವಿರುವ ಸ್ಥಳೀಯ ರೈತರ ಅರ್ಜಿಗಳ ಪರಿಶೀಲಿಸಿ ಅಂತಹವರಿಗೆ ತಕ್ಷಣ ಸಾಲ ಮಂಜೂರು ಮಾಡಬೇಕು ಎಂದು ತಿಳಿಸಿದರು.

    ಡಿಸಿಸಿ ಬ್ಯಾಂಕ್ ಈಗಾಗಲೇ ಸರ್ಕಾರದ ಯೋಜನೆಗಳ ಗುರಿಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಅದೇ ರೀತಿಯಲ್ಲಿ ಇತರ ಬ್ಯಾಂಕ್‌ಗಳು ಕೆಲಸ ಮಾಡಬೇಕು. ಈಗಾಗಲೇ ಕೆಲವು ಬ್ಯಾಂಕ್‌ಗಳು ಈ ಕೊಡುಗೆ ನೀಡಿವೆ ಎಂದು ಜಿಪಂ ಸಿಇಒ ಎಚ್.ವಿ.ದರ್ಶನ್ ತಿಳಿಸಿದರು.

    ಕನ್ನಡ ಕಡ್ಡಾಯ: ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಜಿಂದ್ರ ಕುಲಕರ್ಣಿ ಮಾತನಾಡಿ, ಪ್ರತಿ ಗ್ರಾಮಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕವಾಗಿ ದೊರಕಿಸಲು ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಗ್ರಾಮದ ಜನರಿಗೆ ಸರ್ಕಾರಿ ಯೋಜನೆಗಳ ವಿಮೆ ಮಾಡಿಸಲು ಈಗಾಗಲೇ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಲಾಗಿದೆ. ಬ್ಯಾಂಕ್ ಸಿಬ್ಬಂದಿಯು ಗ್ರಾಹಕರೊಂದಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಮಾತನಾಡಬೇಕು. ಅರ್ಜಿ ನಮೂನೆ, ಮಾಹಿತಿ ಫಲಕಗಳು, ಚಲನ್, ನೋಟಿಸ್ ಬೋರ್ಡ್‌ನಲ್ಲಿ ಕನ್ನಡ ಬಳಸಬೇಕು ಹಾಗೂ ಕನ್ನಡದಲ್ಲೇ ಪತ್ರ ವ್ಯವಹಾರ ನಡೆಸಬೇಕು ಎಂದು ಈಗಾಗಲೇ ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.
    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಜಿಎಂ ಪಿ. ಬಿಸ್ವಾಸ್, ನಬಾರ್ಡ್ ಬ್ಯಾಂಕ್ ಡಿಎಂ ಎಸ್.ಕೆ ಭಾರದ್ವಾಜ್, ಕೆನರಾ ಬ್ಯಾಂಕ್ ಡಿಎಂ ಶಾಹಜಾನ್, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಬ್ಯಾಂಕ್ ನಿರ್ದೇಶಕರು, ವ್ಯವಸ್ಥಾಪಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts