More

    ಬಸ್ ನಿಲ್ದಾಣಕ್ಕೆ ಚಿಂದೋಡಿಲೀಲಾ ಹೆಸರಿಡಲು ಆಗ್ರಹ 

    ದಾವಣಗೆರೆ: ನಗರದಲ್ಲಿನ ನವೀಕೃತ ಖಾಸಗಿ ಬಸ್ ನಿಲ್ದಾಣಕ್ಕೆ ಪದ್ಮಶ್ರೀ ಚಿಂದೋಡಿ ಲೀಲಾ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

    ಯಾವುದೇ ಜನಪ್ರತಿನಿಧಿಗಳು ಅವರ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಮನೆಯ ಹಣವನ್ನು ತೊಡಗಿಸಿ ಕೆಲಸ ಮಾಡುವುದಿಲ್ಲ. ಬದಲಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಮಗಾರಿ ಮಾಡಿದ್ದಾರೆ. ವಾಸ್ತವ ಹೀಗಿದ್ದರೂ ಅವರ ಕುಟುಂಬ ಸದಸ್ಯರ ಹೆಸರು ಇಡುವುದು ಸರಿಯಲ್ಲ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವಿ.ಅವಿನಾಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ದಾವಣಗೆರೆಯ ಮಗಳಾದ ಚಿಂದೋಡಿ ಲೀಲಾ ರಂಗಭೂಮಿ ಕಲಾವಿದರಾಗಿ, 17 ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಕರ್ನಾಟಕ ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. 1991ರಲ್ಲಿ ಮಹಾರಾಷ್ಟ್ರದಲ್ಲಿ ಬೆಳಗಾವಿ ನಗರ ಪಾಲಿಕೆಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮರಾಠಿಗರ ವಿರುದ್ಧ ಕನ್ನಡಿಗರ ಕಂಪನ್ನು ಸಾರಿದ್ದಾರೆ ಎಂದರು.
    ಸಾಧಕಿ ಚಿಂದೋಡಿ ಲೀಲಾ ಹೆಸರನ್ನು ಯಾವುದೇ ಮುಖ್ಯರಸ್ತೆ ಅಥವಾ ವೃತ್ತಕ್ಕೆ ನಾಮಕರಣ ಮಾಡಿಲ್ಲ. ಹಾಗಾಗಿ ಖಾಸಗಿ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ಇಡಬೇಕು. ಈ ಕುರಿತು ಜಿಲ್ಲಾಧಿಕಾರಿ, ಸ್ಮಾರ್ಟ್‌ಸಿಟಿ ಎಂ.ಡಿ., ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು.
    ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬಸ್‌ನಿಲ್ದಾಣ ಉದ್ಘಾಟನೆ ವೇಳೆ ಪ್ರತಿಭಟಿಸಲಾಗುವುದು. ಇತರೆಯವರ ಹೆಸರಿಟ್ಟಲ್ಲಿ ನಾಮಫಲಕಕ್ಕೆ ಮಸಿ ಬಳಿಯುವ ಜತೆಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಈ ವೇಳೆ ಆಗುವ ಅನಾಹುತವಾದಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಆಗಲಿದ್ದಾರೆ ಎಂದು ಎಚ್ಚರಿಸಿದರು.
    ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಾಲಾ ನಾಗರಾಜ್, ಶಾಂತಮ್ಮ, ಎಸ್.ಗಣೇಶ್, ಬಿ.ಎಚ್.ಮಂಜುನಾಥ, ಆನಂದ ಇಟ್ಟಿಗುಡಿ, ಅಕ್ಬರ್ ಭಾಷಾ, ಎನ್.ಎಸ್.ಈರಣ್ಣ, ರಾಜು ಅನೆಕೊಂಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts