More

    ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ ; ಶಾಲಾ, ಕಾಲೇಜುಗಳು ಆರಂಭವಾದರೂ ಸೇವೆ ಇಲ್ಲ; ಪಾಸ್ ಪಡೆದ ಮಕ್ಕಳ ಗೋಳು ಕೇಳೋರಿಲ್ಲ

    ತುಮಕೂರು: ಒಂದರಿಂದ 5ನೇ ತರಗತಿ ಹೊರತುಪಡಿಸಿ ಎಲ್ಲ ಶಾಲಾ, ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಶಾಲೆಗಳ ಯಥಾಸ್ಥಿತಿಗೆ ಮರಳುತ್ತಿವೆ. ಆದರೆ, ಗ್ರಾಮೀಣ ರಸ್ತೆ ಸಾರಿಗೆ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದಾರೂ ಹಳ್ಳಿ ಮಕ್ಕಳು ಬಸ್‌ಗಾಗಿ ತಾಲೂಕು, ಹೋಬಳಿ ಕೇಂದ್ರದ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಪರದಾಡುವ ದೃಶ್ಯ ಸಾಮಾನ್ಯವೆನಿಸಿದೆ.

    ಎಸ್ಸೆಸ್ಸೆಲ್ಸಿ , ದ್ವಿತೀಯ ಪಿಯು ಭೌತಿಕ ತರಗತಿಗಳು ವರ್ಷಾರಂಭದಲ್ಲೇ ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಹಂತಹಂತವಾಗಿ ಶಾಲಾ-ಕಾಲೇಜುಗಳು ಬಾಗಿಲು ತೆರೆದಿದ್ದು ಕರೊನಾ ಭೀತಿಯಿಂದ ಹೊರಬಂದು ಶಾಲೆಗಳಿಗೆ ಮರಳುತ್ತಿರುವ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

    ಗ್ರಾಮೀಣ ಸಾರಿಗೆ ಬಸ್ ಪುನರಾರಂಭ: ಜಿಲ್ಲೆಯ ಗ್ರಾಮೀಣ ಸಾರಿಗೆಯ 243 ಮಾರ್ಗಗಳಲ್ಲಿ ಬಸ್ ಸೇವೆಯನ್ನು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಾಗಿದೆ. 243 ಬಸ್‌ಗಳು ಸಂಚಾರ ಆರಂಭಿಸಲಾಗಿದೆಯಾದರೂ ಇನ್ನೂ ಗ್ರಾಮೀಣ ಭಾಗದಿಂದ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಶಾಲಾ-ಕಾಲೇಜುಗಳಿಗೆ ಮಕ್ಕಳು ಬರುವ ಸಮಯದಲ್ಲಿ ಬಸ್‌ಗಳಿಗಾಗಿ ಮಕ್ಕಳು ಪರದಾಡುತ್ತಿದ್ದಾರೆ.
    ಕುಣಿಗಲ್, ಗುಬ್ಬಿ, ಕೊರಟಗೆರೆ, ಶಿರಾ, ಮಧುಗಿರಿ ಹಾಗೂ ತುಮಕೂರು ತಾಲೂಕಿನ ಹಳ್ಳಿಗಳಿಂದ ಜಿಲ್ಲಾಕೇಂದ್ರ ತುಮಕೂರು ವಿವಿ ಸೇರಿ ಖಾಸಗಿ ಕಾಲೇಜುಗಳಿಗೆ ಪದವಿ, ಸ್ನಾತಕ ಪದವಿ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್‌ಗಳಲ್ಲಿ ಓಡಾಡಲಿದ್ದು ಗ್ರಾಮೀಣ ಸಾರಿಗೆ ಸೇವೆ ಮೇಲೆ ಅವಲಂಬಿತರಾಗಿದ್ದಾರೆ.

    ಗ್ರಾಮೀಣ ರಸ್ತೆ ಸಾರಿಗೆ ಬಸ್ ಸೇವೆ ಈ ಹಿಂದೆ ಇದ್ದಂತೆ ಎಲ್ಲ ಮಾರ್ಗಗಳಲ್ಲೂ ಬಸ್ ಸಂಚಾರ ಕಾರ್ಯಾಚರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 243 ಮಾರ್ಗಗಳಲ್ಲಿ ಗ್ರಾಮೀಣ ಸಾರಿಗೆ ಸೇವೆ ಪುನರಾರಂಭಿಸಲಾಗಿದೆ. 37 ಸಾವಿರ ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ಮಾಡಲಾಗಿದ್ದು, ಮಕ್ಕಳಿಗೆ ತೊಂದರೆ ಆಗದಂತೆ ಅಗತ್ಯಕ್ಕೆ ಅನುಗುಣವಾಗಿ ಸೇವೆ ಒದಗಿಸಲಾಗುವುದು.
    ಕೆ.ಆರ್.ಬಸವರಾಜು ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ

    37 ಸಾವಿರ ವಿದ್ಯಾರ್ಥಿ ಬಸ್ ಪಾಸ್ : ಜಿಲ್ಲೆಯಲ್ಲಿ 73 ಸಾವಿರ ವಿದ್ಯಾರ್ಥಿಗಳು ಈ ಹಿಂದೆ ಬಸ್ ಪಾಸ್ ಸೇವೆ ಪಡೆಯುತ್ತಿದ್ದು, ಜ.1 ರಿಂದ ಶಾಲಾ-ಕಾಲೇಜುಗಳು ಆರಂಭವಾದಾಗಿನಿಂದ ಈವರೆಗೆ 37 ಸಾವಿರ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದುಕೊಂಡಿದ್ದಾರೆ. ಗ್ರಾಮೀಣ ಸಾರಿಗೆ ಬಸ್ ಸೇವೆ ಪೂರ್ಣಾ ಕಾರ್ಯರಂಭ ಮಾಡಲಾಗಿದೆ. ಇನ್ನೂ ತುಮಕೂರು-ಮೈಸೂರು, ಬೆಂಗಳೂರು-ಶಿವಮೊಗ್ಗ, ತುಮಕೂರು-ಹಾಸನ ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲ್ಲ.

    ಸೀಬಿಯಿಂದ ತುಮಕೂರಿಗೆ ಶಾಲಾ-ಕಾಲೇಜಿಗೆ ತೆರಳಲು ಸಾರಿಗೆ ಬಸ್ ಸೇವೆ ಇಲ್ಲ. ಕರೊನಾ ಬಳಿಕ ಸೀಬಿ ಮಾರ್ಗದ ಬಸ್ ರೂಟ್ ರದ್ದುಗೊಳಿಸಲಾಗಿದೆ. ಈಗ ಶಾಲಾ-ಕಾಲೇಜು ಮಕ್ಕಳು ಓಡಾಟಕ್ಕೆ ಬಸ್ ಇಲ್ಲದೇ ಪರದಾಡುವಂತಾಗಿದೆ. ಅನಿವಾರ್ಯವಾಗಿ ಶಿರಾ ಭಾಗದಿಂದ ಬರುವ ಬಸ್‌ಗಳಲ್ಲೇ ಜೋತಾಡಿಕೊಂಡು ಹೋಗುವ ಪರಿಸ್ಥಿತಿ ಇದೆ.
    ಕವಿತಾ ತಾಪಂ ಸದಸ್ಯೆ, ಕೋರಾ

    ಗ್ರಾಮೀಣಭಾಗದಿಂದ ಜಿಲ್ಲಾ, ತಾಲೂಕು ಕೇಂದ್ರಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬರಲಿದ್ದು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಸೇವೆ ಇಲ್ಲದೆ ತರಗತಿಗಳಿಗೆ ನಿಗದಿತ ಸಮಯಕ್ಕೆ ಬರಲಾಗುತ್ತಿಲ್ಲ. ಗುಬ್ಬಿಯಲ್ಲಿ ಪ್ರತಿಭಟನೆ ಕೂಡ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ
    ಅಪ್ಪುಪಾಟೀಲ್ ವಿಭಾಗ ಸಂಘಟನಾ ಕಾರ್ಯದರ್ಶಿ, ಎಬಿವಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts