More

    ಬಸವ ಜಯಂತಿ, ಬೃಹತ್ ಬೈಕ್ ರ‍್ಯಾಲಿ

    ಬೀದರ್: ಮೂರು ದಿನದ ಬಸವ ಜಯಂತಿ ಉತ್ಸವದ ಬಗ್ಗೆ ಜನಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ಬೃಹತ್ ಬೈಕ್ ರ‍್ಯಾಲಿ ನಡೆಯಿತು. 2022ನೇ ವರ್ಷದ ಕಾರಣ 2022 ಬೈಕ್​ಗಳ ರ‍್ಯಾಲಿಗೆ ಸಮಿತಿ ಸಿದ್ಧತೆ ಮಾಡಿತ್ತು. ಆದರೆ ಇದಕ್ಕಿಂತಲೂ ಹೆಚ್ಚು ಬೈಕ್​ಗಳು ಪಾಲ್ಗೊಂಡಿರುವುದು ವಿಶೇಷ ಎನಿಸಿತು.

    ನಗರದ ಸಿದ್ಧಾರೂಢ ಮಠದಿಂದ ಶುರುವಾದ ರ‍್ಯಾಲಿ ಮೈಲೂರು ಕ್ರಾಸ್, ಬೊಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ, ಕನ್ನಡಾಂಬೆ ಸರ್ಕಲ್, ಬಸ್ ನಿಲ್ದಾಣ, ನೌಬಾದ್ನಿಂದ ಪಾಪನಾಶ ದೇವಸ್ಥಾನಕ್ಕೆ ಬಂದು ಕೊನೆಗೊಂಡಿತು. ಸುಮಾರು ಎರಡು ಗಂಟೆ ನಡೆದ ಬೈಕ್ ರ‍್ಯಾಲಿಯ ಅಬ್ಬರ ಸಾರ್ವಜನಿಕರ ಗಮನ ಸೆಳೆಯಿತು.

    ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಬಿಳಿ ಬಣ್ಣದ ದಿರಿಸು ಧರಿಸಿದ್ದರು. ಷಟಸ್ಥಲ ಚಿಹ್ನೆಯ ಸ್ಕಾರ್ಪ್​ ಕಟ್ಟಿಕೊಂಡಿದ್ದರು. ಬೈಕ್​ಗೆ ಬಸವಣ್ಣನವರ ಭಾವಚಿತ್ರದ ಧ್ವಜಗಳನ್ನು ಕಟ್ಟಿದ್ದರು. ರ‍್ಯಾಲಿಯುದ್ದಕ್ಕೂ ಬಸವ ಜೈಘೋಷ ಮೊಳಗಿದವು. ಒಬ್ಬ ಲಿಂಗಾಯತ- ಕೋಟಿ ಲಿಂಗಾಯತ, ಬಸವಣ್ಣನವರಿಗೆ ಜಯವಾಗಲಿ, ಬಸವ ಜಯಂತಿ ಉತ್ಸವಕ್ಕೆ ಜಯವಾಗಲಿ, ಜೈ ಬಸವ-ಜೈ ಜೈ ಬಸವ ಎಂಬಿತ್ಯಾದಿ ಘೋಷಣೆಗಳು ಮಾರ್ದನಿಸಿದವು.

    ಸಿದ್ಧಾರೂಢ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ರ‍್ಯಾಲಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪ್ರಮುಖರು, ಬಸವ ಜಯಂತಿ ಮನುಕುಲದ ಉತ್ಸವ. ಮಂಗಳವಾರದವರೆಗೆ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಎಲ್ಲ ಸಮಾಜದ ಜನರು ಪಾಲ್ಗೊಳ್ಳಬೇಕು ಎಂದು ಕೋರಿದರು.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಅಧ್ಯಕ್ಷ ಬಸವರಾಜ ಪಾಟೀಲ್ ಹಾರೂರಗೇರಿ, ಬೈಕ್ ರ‍್ಯಾಲಿ ಸಮಿತಿ ಅಧ್ಯಕ್ಷ ಅರುಣಕುಮಾರ ಹೋತಪೇಟ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಶಿವಶರಣಪ್ಪ ವಾಲಿ, ಗುರುನಾಥ ಕೊಳ್ಳುರ್, ಬಸವರಾಜ ಧನ್ನೂರ, ರಾಜೇಂದ್ರಕುಮಾರ ಗಂದಗೆ, ಡಾ.ರಜನೀಶ್ ವಾಲಿ, ಚಂದ್ರಶೇಖರ ಪಾಟೀಲ್ ಗಾದಗಿ, ಸೋಮಶೇಖರ ಪಾಟೀಲ್, ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಖ್ಯಾಮಾ, ಮಹೇಶ ಮೈಲಾರೆ, ಕುಶಾಲರಾವ ಪಾಟೀಲ್ ಖಾಜಾಪುರ, ದೀಪಕ ವಾಲಿ, ಶರಣಪ್ಪ ಮಿಠಾರೆ, ರಮೇಶ ಪಾಟೀಲ್ ಸೋಲಪುರ, ಶಕುಂತಲಾ ಬೆಲ್ದಾಳೆ, ಬಾಬುರಾವ ಮಲ್ಕಾಪುರೆ, ಅಶೋಕ ಕರಂಜೆ, ಈಶ್ವರಸಿಂಗ ಠಾಕೂರ್, ಜಗದೀಶ ಖೂಬಾ, ರಾಜರಾಮ ಚಿಟ್ಟಾ, ವಿವೇಕ ವಾಲಿ, ಆದೀಶ್ ವಾಲಿ, ವಿಕ್ರಮ ಮುದಾಳೆ, ಯೋಗೇಂದ್ರ ಯದಲಾಪುರೆ ಇತರರಿದ್ದರು.

    ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ಬಸವ ಜಯಂತಿ ಆಚರಿಸಲಾಗಿತ್ತು. ಪ್ರಸಕ್ತ ವರ್ಷ ಅದ್ದೂರಿಯಾಗಿ ಮೂರು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಿಕೆ, ಮೆರವಣಿಗೆ ಸೇರಿ ಎಲ್ಲ ಕಾರ್ಯಕ್ರಮಗಳಲ್ಲಿ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
    | ಬಸವರಾಜ ಪಾಟೀಲ್ ಹಾರೂರಗೇರಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts