More

    ಬಸವಳಿದ ಹುಲಿಕಲ್ ಘಾಟ್

    ರವಿ ಬಿದನೂರು ನಗರ

    ಶಿವಮೊಗ್ಗದಿಂದ ಉಡುಪಿ, ದಕ್ಷಿಣಕನ್ನಡ ಸಂರ್ಪಸಲು ಪ್ರಮುಖವಾದದ್ದು ಆಗುಂಬೆ, ಕೊಲ್ಲೂರು ಮತ್ತು ಹುಲಿಕಲ್(ಬಾಳೆಬರೆ) ಘಾಟ್. ಅದರಲ್ಲೂ ಹುಲಿಕಲ್ ಘಾಟ್ ರಸ್ತೆ ಬಹು ಅಗತ್ಯಗಳಲ್ಲೊಂದು. ಆದರೆ ಅಭಿವೃದ್ಧಿಯಲ್ಲಿ ಮಾತ್ರ ತೀರಾ ಹಿಂದುಳಿದಿದೆ.

    ಹಲವು ಕಡಿದಾದ ತಿರುವು, ಒಂದು ಹೇರ್​ಪಿನ್ ಮಾದರಿ ಅಪಾಯಕಾರಿ ತಿರುವು ಹೊಂದಿರುವ ಹುಲಿಕಲ್ ಘಾಟ್ ರಸ್ತೆ ಹುಲಿಕಲ್ ಚೆಕ್​ಪೋಸ್ಟ್​ನಿಂದ ಉಡುಪಿಯ ಹೊಸಂಗಡಿ ಘಾಟ್ ಬುಡದವರೆಗೆ 14 ಕಿಮೀ ಕ್ರಮಿಸುತ್ತದೆ. ಈವರೆಗೆ ಮೂರೂವರೆ ಕಿಮೀ ರಸ್ತೆ ಕಾಂಕ್ರೀಟ್ ಕಂಡಿದ್ದು ಉಡುಪಿ ವಿಭಾಗಕ್ಕೆ ಸೇರಿದ 2 ಕಿಮೀ, ಶಿವಮೊಗ್ಗ ವಿಭಾಗಕ್ಕೆ ಸೇರಿದ 1.5 ಕಿಮೀ ಕಾಂಕ್ರೀಟ್ ರಸ್ತೆಯಾಗಿದೆ. ಅದಕ್ಕೆ ಪೂರಕವಾಗಿ ತಡೆಗೋಡೆಯೂ ನಿರ್ವಣಗೊಂಡಿದೆ.

    ಹುಲಿಕಲ್ ಚೆಕ್​ಪೋಸ್ಟ್​ನಿಂದ ಮೊದಲ್ಗೊಳ್ಳುವ ಬಾಳೆಬರೆ ಘಾಟ್ ಕಡಿದಾದ ತಿರುವಿನಿಂದ ಕೂಡಿದೆ. ಅಲ್ಲದೆ ಬಾಳೆಬರೆ ದೇವಸ್ಥಾನದ ಕೆಳಭಾಗದಲ್ಲಿರುವ ಹೇರ್​ಪಿನ್ ಮಾದರಿಯ ತಿರುವು ಅಪಾಯಕಾರಿಯಾಗಿದೆ. ಈ ತಿರುವನ್ನು ದಾಟಿದ ಮೇಲಷ್ಟೇ ನಿಟ್ಟುಸಿರು ಬಿಡಬಹುದು. ಆದರೆ ಇಲ್ಲಿ ತಡೆಗೋಡೆಯೇ ಇಲ್ಲ. ಪಕ್ಕದಲ್ಲಿ ಸಣ್ಣಪುಟ್ಟ ತಡೆಗೋಡೆ ಕಂಡುಬಂದರೂ ಅದು ದುರ್ಬಲವಾಗಿದೆ. ಉಳಿದಂತೆ ಕಬ್ಬಿಣದ ತಗಡು ಪಟ್ಟಿಯನ್ನೇ ತಡೆಗೋಡೆಯಾಗಿ ಬಳಸಿರುವುದು ನಾಮ್​ಕೇವಾಸ್ತೆ ಎನ್ನುವಂತಾಗಿದೆ.

    ಅವಘಡಗಳ ಸಾಲು: ಹುಲಿಕಲ್ ಘಾಟ್ ರಸ್ತೆ ಮೇಲ್ದರ್ಜೆಗೇರದ ಕಾರಣ ಆಗಾಗ ಅವಘಡಗಳು ಸಂಭವಿಸುತ್ತಿದ್ದು ಸಂಚಾರ ವ್ಯತ್ಯಯವಾಗುತ್ತಲೇ ಇರುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ 400 ಅಡಿ ಪ್ರಪಾತಕ್ಕೆ ಉರುಳಿದ ಲಾರಿ ಪ್ರಕರಣವೇ ತಾಜಾ ನಿದರ್ಶನ. ಅಪಘಾತಗಳು, ಮರ ಬಿದ್ದು ಸಂಚಾರ ಅಡೆತಡೆಯಾಗುವುದು ಮಾಮೂಲಿ ಆಗಿಬಿಟ್ಟಿದೆ.

    ಹುಲಿಕಲ್ ಘಾಟ್ ಮಹತ್ವ? ಹುಲಿಕಲ್ ಜನಸಾಮಾನ್ಯರ ಘಾಟ್ ಎಂದೇ ಬಿಂಬಿತವಾಗಿದೆ. ಕಾರಣ ಆಗುಂಬೆಯಲ್ಲಿ ಬೃಹತ್ ವಾಹನಗಳ ಸಂಚಾರ ಕಷ್ಟ. ಕೊಲ್ಲೂರು ಘಾಟ್ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಟ್ಟಿದ್ದರೂ ಅಲ್ಲಿ ಸಿಗಂದೂರು, ಕೊಲ್ಲೂರು, ಕೊಡಚಾದ್ರಿ ಸೇರಿ ಪ್ರವಾಸಿ ತಾಣಗಳಿಗೆ ಸಾಗುವ ಲಘು ವಾಹನಗಳ ಸಂಚಾರವೇ ಹೆಚ್ಚು. ಹುಲಿಕಲ್ ಘಾಟ್ ರಸ್ತೆ ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿ 5 ಜಿಲ್ಲೆಗಳ ವ್ಯಾಪ್ತಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಬಳಕೆಯಾಗುತ್ತಿರುವ ಮಹತ್ವದ ಮಾರ್ಗ. ಅಲ್ಲದೆ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಮಾರ್ಗವಾಗಿ ಬಸ್ಸುಗಳ ಓಡಾಟವೂ ಜಾಸ್ತಿ. ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೂ ಈ ರಸ್ತೆ ಅನಿವಾರ್ಯ.

    ನಿತ್ಯ 4,935 ವಾಹನ ಸಂಚಾರ: ರಾಜ್ಯ ಹೆದ್ದಾರಿ 52ರ ಅಡಿಯಲ್ಲಿ ಬರುವ ಹುಲಿಕಲ್ ಘಾಟ್​ಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವಿಭಾಗದಿಂದ 2020 ಫೆಬ್ರವರಿಯಲ್ಲಿ ವಾಹನ ಗಣತಿ ನಡೆಸಲಾಗಿದ್ದು ದಿನಕ್ಕೆ ಸರಾಸರಿ ಸಂಚರಿಸುವ ವಾಹನಗಳ ಸಂಖ್ಯೆ 4,935 ಎಂದು ದಾಖಲಾಗಿದೆ. ಈ ಘಾಟ್​ನಲ್ಲಿ ಎದುರು-ಬದುರು ಸಂಚರಿಸುವ ವಾಹನಗಳಲ್ಲಿ ಮಿನಿ ಬಸ್ ಮತ್ತು ಬಸ್ಸುಗಳ ಸಂಖ್ಯೆ 288 ಇದ್ದರೆ, 6, 10, ಮತ್ತು 10 ಚಕ್ರಗಳಿಗಿಂತ ಮೇಲಿರುವ ಮಲ್ಟಿ ಆಕ್ಸಲ್ ವಾಹನಗಳ ಸಂಖ್ಯೆ ಬರೋಬ್ಬರಿ 619 ದಾಖಲಾಗಿವೆ. ಇನ್ನು, ದ್ವಿಚಕ್ರವಾಹನ, ರಿಕ್ಷಾ, ಟ್ಯಾಕ್ಷಿ, ಟೆಂಪೋ ಸೇರಿ ವಿವಿಧ ಲಘು ವಾಹನಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬಂದಿವೆ. ಜಿಲ್ಲೆಯ ಘಾಟ್ ರಸ್ತೆಗಳಲ್ಲಿ ಅತಿ ಹೆಚ್ಚು ವಾಹನಗಳ ಓಡಾಟವಿರುವುದು ಕೂಡ ಹುಲಿಕಲ್ ಘಾಟ್​ನಲ್ಲೇ. ಆದರೆ ಅಭಿವೃದ್ಧಿಯಲ್ಲಿ ಮಾತ್ರ ಹಿಂದೆ. ಬೇರೆ ಘಾಟ್​ಗಳಲ್ಲಿ ಪ್ರತಿವರ್ಷ ರಸ್ತೆ ಅಭಿವೃದ್ಧಿಯಾದರೆ, ಇಲ್ಲಿ 5 ವರ್ಷಕ್ಕೊಮ್ಮೆ ಅಭಿವೃದ್ಧಿ ಕಂಡರೆ ಹೆಚ್ಚು ಎನ್ನುವಂತಿದೆ.

    ಶಿರಾಡಿ, ಚಾರ್ವಡಿಗೆ ಆಪತ್ಬಾಂಧವ: ರಾಜ್ಯದ ಪ್ರಮುಖ ಘಾಟ್​ಗಳಾದ ಶಿರಾಡಿ ಮತ್ತು ಚಾರ್ವಡಿ ಘಾಟ್ ರಸ್ತೆಗಳ ಅಭಿವೃದ್ಧಿ ವೇಳೆ, ಇಲ್ಲವೇ ಇತರ ಕಾರಣಗಳಿಗಾಗಿ ಸಂಚಾರ ಸ್ಥಗಿತಗೊಂಡ ವೇಳೆ ಅಲ್ಲಿಯ ಜಿಲ್ಲಾಧಿಕಾರಿಗಳು ಸೂಚಿಸುವ ಪರ್ಯಾಯ ಮಾರ್ಗವೇ ಹುಲಿಕಲ್. ಅಲ್ಲದೆ ಶಿವಮೊಗ್ಗ ಜಿಲ್ಲೆಯ ಇತರ ಘಾಟ್ ರಸ್ತೆ ಸಮಸ್ಯೆಯಾದಾಗ ಇಲ್ಲಿಯ ಜಿಲ್ಲಾಧಿಕಾರಿಗಳು ಪರ್ಯಾಯವಾಗಿ ಸೂಚಿಸುವುದು ಇದೇ ಮಾರ್ಗವನ್ನು. ಹಲವು ಸಂಕಷ್ಟ ಸಮಯದಲ್ಲಿ ಆಪತ್ಬಾಂಧವನಂತೆ ಕಾರ್ಯನಿರ್ವಹಿಸಿದ ಕೀರ್ತಿ ಕೂಡ ಈ ಘಾಟಿಗೆ ಸಲ್ಲುತ್ತದೆ.

    ವಾರಾಹಿ ನಿರ್ವಹಣೆಗೆ ಜೀವಾಳ: ನಗರ ಹೋಬಳಿಯಲ್ಲಿ ವಾರಾಹಿ ಯೋಜನೆಯಡಿ ಅನುಷ್ಠಾನಗೊಂಡ ಮಾಣಿ, ಖೈರಗುಂದ, ಪಿಕಪ್, ಚಕ್ರಾ, ಸಾವೇಹಕ್ಲು ಜಲಾಶಯ ನಿರ್ವಹಣೆ, ಮಾಣಿ ಜಲವಿದ್ಯುತ್ ಯೋಜನೆ, ಭೂಗರ್ಭ ವಿದ್ಯುದಾಗಾರಕ್ಕೆ ಹೋಗುವ ಸುರಂಗ ಮಾರ್ಗ ಸೇರಿ ಹಲವು ಯೋಜನೆಗಳ ಕಚೇರಿಗಳಿರುವುದು ಉಡುಪಿ ಜಿಲ್ಲೆ ಹೊಸಂಗಡಿಯಲ್ಲಿ. ಇವೆಲ್ಲದರ ಸಂಪರ್ಕಕ್ಕೆ ಇರುವ ಏಕೈಕ ಮಾರ್ಗ ಹá-ಲಿಕಲ್ ಘಾಟ್.

    ರಾ.ಹೆ. ನಿಟ್ಟಿನಲ್ಲೂ ಸರ್ವೆ: ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹುಲಿಕಲ್ ಘಾಟ್​ನಲ್ಲಿ ವಾಹನ ದಟ್ಟಣೆ ಆಧರಿಸಿ ರಾಷ್ಟ್ರೀಯ ಹೆದ್ದಾರಿಗೆ ಸೇರಿಸುವ ಸಲುವಾಗಿ ಸರ್ವೆ ಕಾರ್ಯ ಕೂಡ ನಡೆದಿತ್ತು. ಬೇರೆ ಜಿಲ್ಲೆಗಳ ಒತ್ತಡದಿಂದಾಗಿ ಅದು ಕೈತಪ್ಪಿತು ಎಂದು ಸ್ಥಳೀಯ ಅನಂತಮೂರ್ತಿ ಶೆಣೈ ಹೇಳುತ್ತಾರೆ. ಬಿ.ಎಸ್.ಯಡಿಯೂರಪ್ಪ ಡಿಸಿಎಂ ಆಗಿದ್ದಾಗ ಹುಲಿಕಲ್ ಘಾಟ್ ಅಗತ್ಯತೆ ಕಂಡು ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಮಲೆನಾಡಿನ ವಿವಿಧ ಘಾಟ್ ರಸ್ತೆಗಳ ಅಭಿವೃದ್ಧಿಗೆ ಒತ್ತಡ ಬಂದಾಗ ಇಲ್ಲಿಗೆ ಬಂದ ಅನುದಾನವನ್ನು ಹಂಚಿಕೊಳ್ಳಲಾಯಿತು.

    ಬೇಡಿಕೆ ಏನು? ಹುಲಿಕಲ್ ಘಾಟ್ ಕಡಿದಾದ ತಿರುವುಗಳನ್ನು ಹೊಂದಿದ್ದರೂ ಅಭಿವೃದ್ಧಿಗೆ ಅವಕಾಶವಿದೆ. ಬಾಳೆಬರೆ ದೇವಸ್ಥಾನದ ಕೆಳಭಾಗದ ಹೇರ್​ಪಿನ್ ರಸ್ತೆಗೆ ತುರ್ತು ವ್ಯವಸ್ಥಿತ ತಡೆಗೋಡೆ ನಿರ್ಮಾಣ ಮಾಡಿ ಅಪಾಯ ತಪ್ಪಿಸಬೇಕು. ಅಲ್ಲೇ ಇರುವ ಸುರಂಗ ಮಾರ್ಗದ ಎದುರು ಕೂಡ ಖಾಲಿ ಜಾಗವಿದ್ದು ಅಭಿವೃದ್ಧಿ ಮಾಡಬಹುದು. ಇದೇ ಜಾಗದಲ್ಲಿ ಫ್ಲೈ ಓವರ್ ಮಾಡಿ ಒಂದು ಭಾಗದ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬಹುದು. (ಈಗಾಗಲೇ ಆಗುಂಬೆಯಲ್ಲಿ ವೀಕ್ಷಣಾ ಸ್ಥಳ ಅಭಿವೃದ್ಧಿ ಮಾಡಿದಂತೆ) ಹುಲಿಕಲ್ ಘಾಟ್​ನಲ್ಲಿ ಇತಿಹಾಸ ಪ್ರಸಿದ್ಧ ಚಂಡಿಕೇಶ್ವರಿ ದೇವಸ್ಥಾನ, ಬಾಳೆಬರೆ ಫಾಲ್ಸ್, ಸಸ್ಯಕಾನನ ಸಂಗಮವಾಗಿದ್ದು ಅದಕ್ಕೆ ಪೂರಕವಾಗಿ ಹೆದ್ದಾರಿ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮವೂ ಬೆಳೆಯುತ್ತದೆ.

    ಹುಲಿಕಲ್ ಘಾಟ್ ಸಂಚಾರ ಸ್ಥಗಿತಗೊಂಡರೆ ನೇರವಾಗಿ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿತ್ರದá-ರ್ಗ ಜಿಲ್ಲೆಗಳಿಗೆ ವ್ಯಾಪಕ ಪರಿಣಾಮ ಬೀರುತ್ತದೆ. ಪೆಟ್ರೋಲಿಯಂ ಉತ್ಪನ್ನ ಸೇರಿ ಅಗತ್ಯ ವಸ್ತುಗಳ ಸರಬರಾಜಿಗೆ ಮುಖ್ಯ ಮಾರ್ಗವಿದು. ಅಧಿಕಾರಿಗಳು, ಜನಪ್ರತಿನಿಧಿಗಳು ಹೈಫೈ ವಾಹನದಲ್ಲಿ ಬೇರೆ ಮಾರ್ಗದ ಮೂಲಕ ಸಂಪರ್ಕ ಸಾಧಿಸುವ ಕಾರಣ ಇದು ಹಿಂದುಳಿದಿದೆ. ಜನಸಾಮಾನ್ಯರ ಘಾಟ್ ಆಗಿರುವ ಹುಲಿಕಲ್ ಬಗ್ಗೆ ಏಕೆ ನಿರ್ಲಕ್ಷ್ಯ ಎಂಬುದೇ ತಿಳಿಯುತ್ತಿಲ್ಲ.

    | ಅನಂತಮೂರ್ತಿ ಶೆಣೈ, ಸ್ಥಳೀಯ

    ಹುಲಿಕಲ್ ಘಾಟ್ ರಸ್ತೆಯ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಪರಿಶೀಲಿಸಿದ ಬಳಿಕ ಆಕ್ಷನ್ ಪ್ಲಾನ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಹತ್ವದ ಘಾಟ್​ಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಅದರಂತೆ ಕ್ರಮ ಕೈಗೊಳ್ಳುತ್ತೇನೆ.

    | ಕೆ.ಬಿ.ಶಿವಕುಮಾರ್, ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts