More

    ಬಸವರಾಜ ದೇಸಾಯಿಗೆ ಜಿಪಂ ಅಧ್ಯಕ್ಷ ಪಟ್ಟ…?

    ಹಾವೇರಿ: ಕೈ ಪಾಳಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯ ಕಸರತ್ತು ಕೊನೆಗೂ ಅಂತಿಮಗೊಂಡಿದ್ದು, ಹೈಕಮಾಂಡ್ ವಿರುದ್ಧ ಬಂಡಾಯವೆದ್ದಿದ್ದ ಬಸವರಾಜ ದೇಸಾಯಿ ಅವರಿಗೆ ವರಿಷ್ಠರು ಮಣೆ ಹಾಕಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ಜಿಪಂನಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದೆ. ಹೀಗಾಗಿ ಸದಸ್ಯರ ವಿಶ್ವಾಸಕ್ಕೆ ವಿರುದ್ಧವಾಗಿ ಅಭ್ಯರ್ಥಿ ಕಣಕ್ಕಿಳಿಸಿದರೆ ಕಾಂಗ್ರೆಸ್​ಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಬಸವರಾಜ ದೇಸಾಯಿ ಅವರನ್ನು ಬೆಂಬಲಿಸಿ 16ಕ್ಕೂ ಅಧಿಕ ಸದಸ್ಯರು ಪತ್ರ ನೀಡಿದ್ದರು. ಉಳಿದ ಸದಸ್ಯರೂ ಒತ್ತಡ ತಂತ್ರ ಅನುಸರಿಸಿದ್ದರು. ಹೀಗಾಗಿ ಹೈಕಮಾಂಡ್ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಬಸವರಾಜ ದೇಸಾಯಿಗೆ ಬೆಂಬಲಿಸುವ ಮುನ್ಸೂಚನೆ ನೀಡಿದೆ.

    ಜಿಪಂನಲ್ಲಿ ಕೇವಲ 14 ತಿಂಗಳು ಮಾತ್ರ ಅಧಿಕಾರವಧಿ ಉಳಿದಿದೆ. ಈ ಅವಧಿಯನ್ನು ಇಬ್ಬರಿಗೆ ಹಂಚಿಕೆ ಮಾಡುವ ಸೂತ್ರವನ್ನು ಹೈಕಮಾಂಡ್ ಸದಸ್ಯರ ಮುಂದಿಟ್ಟಿದೆ. ಪ್ರವಾಸಕ್ಕೆ ತೆರಳಿರುವ ಸದಸ್ಯರೆಲ್ಲರೂ ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿ ಹೈಕಮಾಂಡ್​ನೊಂದಿಗೆ ಚರ್ಚೆ ನಡೆಸಲಿದ್ದು, ಅದೇ ಸಮಯದಲ್ಲಿ ಸದಸ್ಯರಿಗೆ ವಿಪ್ ಜಾರಿಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಒಂದುವೇಳೆ ಹೈಕಮಾಂಡ್ ಬಸವರಾಜ ದೇಸಾಯಿ ಬದಲು ಬೇರೊಬ್ಬರಿಗೆ ಅವಕಾಶ ನೀಡಿದರೆ, ಬಂಡಾಯ ಸದಸ್ಯರ ಲಾಭ ಪಡೆದು ಬಿಜೆಪಿ ಅಧಿಕಾರದ ಗದ್ದುಗೆಗೇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ ಬಿಜೆಪಿ ಮುಖಂಡರು ಕಾಂಗ್ರೆಸ್​ನಲ್ಲಿನ ಬೆಳವಣಿಗೆಯನ್ನು ದೂರದಿಂದಲೇ ಅವಲೋಕಿಸುತ್ತಿದ್ದಾರೆ.

    ಪಕ್ಷವು ಈಗಾಗಲೇ ಜಿಲ್ಲೆಯಲ್ಲಿ ವಿಧಾನಸಭೆ, ಲೋಕಸಭೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇಂತಹ ಸಮಯದಲ್ಲಿ ನಮಗೆ ಉಳಿದಿರುವುದು ಜಿಪಂ ಒಂದೇ. ಹೀಗಾಗಿ ಇಲ್ಲಿ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಹಿನ್ನೆಡೆಯಾಗದಂತೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರಿಷ್ಠರ ಸೂಚನೆಯಂತೆ ಒಮ್ಮತದ ಅಭ್ಯರ್ಥಿಯನ್ನು ಶನಿವಾರ ಬೆಳಗ್ಗೆ 10ಕ್ಕೆ ಅಂತಿಮಗೊಳಿಸುತ್ತೇವೆ.
    | ಆರ್.ವಿ. ವೆಂಕಟೇಶ, ವಿಪ ಮಾಜಿ ಮುಖ್ಯಸಚೇತಕರು, ಜಿಪಂ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ವೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts