More

    ಬಸವತತ್ವ ಪ್ರಚಾರದಲ್ಲಿ ಕಲಾವಿದರ ಬದ್ಧತೆ -ಪಂಡಿತಾರಾಧ್ಯ ಸ್ವಾಮೀಜಿ ಶ್ಲಾಘನೆ – ವಚನ ನೃತ್ಯರೂಪಕದ 48ನೇ ಪ್ರದರ್ಶನ 

    ದಾವಣಗೆರೆ: ಹದಿನಾಲ್ಕು ರಾಜ್ಯಗಳಲ್ಲಿ ವಚನ ನೃತ್ಯರೂಪಕ ಪ್ರದರ್ಶನ ಅದ್ಭುತ ಅನುಭವ ನೀಡಿದೆ. ಆರೋಗ್ಯ ಇತರೆ ಸಮಸ್ಯೆ ನಡುವೆಯೂ ಕಲಾವಿದರು ಬಸವ ತತ್ವ ಪ್ರಚಾರ ಕಾರ್ಯದಲ್ಲಿ ಬದ್ಧತೆ ಮೆರೆದಿದ್ದಾರೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೊಗಳಿದರು.
    ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಸಮಸ್ತ ಭಕ್ತವೃಂದದಿಂದ ಇಲ್ಲಿನ ಎಸ್‌ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ವಚನ ನೃತ್ಯರೂಪಕದ 48ನೇ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಶ್ರೀಮಠದ ಭಕ್ತರಲ್ಲದವರು ಹಾಗೂ ಭಾಷೆ ಬಲ್ಲವರಲ್ಲದ ಜನರ ನಡುವೆ 14 ರಾಜ್ಯದಲ್ಲಿ 47 ಪ್ರದರ್ಶನ ನೀಡುವುದು ಸಾಮಾನ್ಯ ಕೆಲಸವಲ್ಲ. ಅಲ್ಲಿನ ವಾತಾವರಣ, ಊಟ-ವಸತಿ ಭಿನ್ನತೆ ಎದುರಿಸಿದ ಕೆಲವು ಕಲಾವಿದರು ಕಾಯಿಲೆಗೆ ತುತ್ತಾದರು. ಹಿಂತಿರುಗಿ ಹೋಗಿದ್ದವರು ಮತ್ತೆ ನೃತ್ಯರೂಪಕಕ್ಕೆ ಮರಳಿದರು. 2 ತಿಂಗಳು ರಜೆ ನೀಡದ್ದಕ್ಕೆ ಕಂಪನಿ ಕೆಲಸಕ್ಕೆ ನಾಲ್ವರು ಕಲಾವಿದರು ರಾಜೀನಾಮೆ ಬಿಟ್ಟು ಬಂದರು ಎಂದು ಹೇಳಿ ಅಭಿಮಾನಿಸಿದರು.
    ಪಾಲಕರು ಎರಡು ತಿಂಗಳ ಕಾಲ ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸುವುದಿಲ್ಲ. ಆದರೂ ತಂಡವನ್ನು ನಂಬಿ ಕಳುಹಿಸಿದ ಅವರ ಪಾಲಕರ ಧೈರ್ಯ ದೊಡ್ಡದು. ಆ ಪಾಲಕರು ಕೂಡ ಪೂನಾ, ಮುಂಬೈ, ಕಾಶಿ ಮತ್ತಿತರೆಡೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋದರು ಎಂದು ಹೇಳಿದರು.
    ಶ್ರೀಮಠದ ಹಿರಿಯ ಗುರುಗಳು ಸಮಾಜದಲ್ಲಿ ಶರಣ ತತ್ವಗಳನ್ನು ಬಿತ್ತಲು ಅಕ್ಕನ ಬಳಗ, ಅಣ್ಣನ ಬಳಗ, ಕಲಾ ಸಂಘ, ಶಿವಾನುಭವ ಪ್ರವಾಸ ಇತ್ಯಾದಿ ಪ್ರಯೋಗಗಳನ್ನು ನಡೆಸಿದ್ದರು. ಅವರಿಂದ ಪ್ರೇರಿತರಾಗಿ ನಾವೂ ರಂಗಭೂಮಿ ಕ್ಷೇತ್ರ ಆಯ್ದುಕೊಂಡು 26 ವರ್ಷ ಸೇವೆ ಸಲ್ಲಿಸಿದ್ದೇವೆ. ವಚನಗಳ ರಾಗ ಕೇಳಿ, ನೃತ್ಯದ ಭಾವ ಗಮನಿಸಿದಾಗ ಹೊಸ ಅರ್ಥ ತಿಳಿಯಲಿದೆ ಎಂದು ಹೇಳಿದರು.
    ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ ಜಗಳೂರು ತಾಲೂಕಿನಲ್ಲೂ ನೃತ್ಯರೂಪಕ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅಶೋಕ ಬಾದರದಿನ್ನಿ ನೇತೃತ್ವದ ನಾಟಕದಲ್ಲಿ ತಾವೂ ಬಣ್ಣ ಹಚ್ಚಿಕೊಂಡಿದ್ದನ್ನು ಸ್ಮರಿಸಿದರು.
    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ 12ನೇ ಶತಮಾನದ ಶಿವಶರಣರ ವಚನಗಳು ಪ್ರಜಾಸತ್ತಾತ್ಮಕ ಸಾಮಾಜಿಕ ಮೌಲ್ಯಗಳನ್ನು ಹೇಳಿವೆ. ಇಂದಿನ ಶತಮಾನದ ಸಮಸ್ಯೆಗಳಿಗೆ ಅವು ಉಪಾಯವಾಗಿವೆ ಎಂದರು.
    ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ ಪಂಡಿತಾರಾಧ್ಯ ಸ್ವಾಮೀಜಿ ಪವಾಡವನ್ನು ನಂಬುವುದಿಲ್ಲ. ಆದರೆ ಅವರು ವಚನನೃತ್ಯರೂಪಕದ ಮೂಲಕ ಪವಾಡ ಮಾಡಿದ್ದಾರೆ ಎಂದರು.
    ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಉದ್ಯಮಿ ಎಸ್.ಎಸ್.ಗಣೇಶ್,ಅಣಬೇರು ರಾಜಣ್ಣ, ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ, ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ರವಿಚಂದ್ರ, ನೃತ್ಯರೂಪಕದ ನಿರ್ದೇಶನ ಮಾಡಿದ ಸ್ನೇಹಾ ಕಪ್ಪಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts